ಫಿಫಾ ವಿಶ್ವಕಪ್: ರೊನಾಲ್ಡೊ ವಿಶ್ವಕಪ್ ಕನಸು ಭಗ್ನ; ಮೊರಾಕೊ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಪೋರ್ಚುಗಲ್

ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಕನಸು ಭಗ್ನಗೊಂಡಿದ್ದು, ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರಾಕೊ ಪೋರ್ಚುಗಲ್ ವಿರುದ್ಧ 1-0 ಗೋಲಿನಿಂದ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. 
ಮೊರಾಕೋ ವಿರುದ್ಧ ಪೋರ್ಚುಗಲ್ ಗೆ ಸೋಲು
ಮೊರಾಕೋ ವಿರುದ್ಧ ಪೋರ್ಚುಗಲ್ ಗೆ ಸೋಲು

ಕತಾರ್: ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಕನಸು ಭಗ್ನಗೊಂಡಿದ್ದು, ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರಾಕೋ ಪೋರ್ಚುಗಲ್ ವಿರುದ್ಧ 1-0 ಗೋಲಿನಿಂದ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.

ಕತಾರ್ ನ ಅಲ್ ತುಮಾಮ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊರೊಕ್ಕೊ 1-0 ಗೋಲಿನ ಅಂತರದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಅಂತೆಯೇ ಫಿಫಾ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಫ್ರಿಕನ್ ದೇಶ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಯೂಸುಫ್ ಅನ್ನಸ್ರಿ ಮೊರೊಕ್ಕೊ ಪರವಾಗಿ ಏಕೈಕ ಗೋಲು ದಾಖಲಿಸಿ ಐತಿಹಾಸಿಕ ಜಯಕ್ಕೆ ಕಾರಣರಾದರು. 42ನೇ ನಿಮಿಷದಲ್ಲಿ ಮೊರೊಕ್ಕೊ ಗೋಲು ದಾಖಲಿಸಿ ಸಂಭ್ರಮಿಸಿತು.

ಪೋರ್ಚುಗಲ್ ಗೆ ಮಾರಕವಾಯ್ತೇ ರೊನಾಲ್ಡೋ ಅನುಪಸ್ಥಿತಿ?
ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಈ ಪಂದ್ಯದಲ್ಲಿ ಕೂಡ ಹೊರಗಿಡಲಾಗಿತ್ತು. ಅವರ ಬದಲಿಗೆ ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ್ದ ಗೊನ್ಕಾಲೊ ರಾಮೋಸ್‌ ಆಡಿದರು. ಪೋರ್ಚುಗಲ್ ತಂಡದ ತರಬೇತುದಾರ ಸ್ಯಾಂಟೋಸ್ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದರು. ವಿಲಿಯಂ ಕಾರ್ವಾಲ್ಹೋ ಬದಲಿಗೆ ರುಬೆನ್ ನೆವೆಸ್ ಅವರನ್ನು ಕಣಕ್ಕಿಳಿಸಲಾಯಿತು. ತಂಡದ ಆಂತರಿಕ ಕಾರಣಗಳಿಂದಾಗಿ ಕ್ರಿಸ್ಟಿಯಾನೊ ರೊನಾಲ್ಡೊ ಆಟದ ಮೊದಲ 50 ನಿಮಿಷಗಳು ಬೆಂಚ್ ಕಾದರು. ಆಟದ 42ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಮೊರೊಕ್ಕೊ, ಪೋರ್ಚುಗಲ್ ಗೋಲು ಗಳಿಸಲು ಮಾಡಿದ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿತು. ಅಂತಿಮ ಕ್ಷಣದವರೆಗೂ ಪೋರ್ಚುಗಲ್ ಗೋಲು ಗಳಿಸಲು ಸಾಧ್ಯವಾಗಲೇ ಇಲ್ಲ, ರೊನಾಲ್ಡೊ ಕೊನೆಯ ಕ್ಷಣದಲ್ಲಾದರೂ ಮ್ಯಾಜಿಕ್ ಮಾಡುತ್ತಾರೆ ಎಂದು ನಂಬಿದ್ದ ಕೋಟ್ಯಂತರ ಅಭಿಮಾನಿಗಳ ಕನಸು ನನಸಾಗಲಿಲ್ಲ.

ರೊನಾಲ್ಡೊ ವಿಶ್ವಕಪ್ ಕನಸು ಭಗ್ನ
50 ನಿಮಿಷಗಳ ಬಳಿಕ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನಕ್ಕೆ ಬಂದರೂ ತಮ್ಮ ತಂಡದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. 37 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊಗೆ ಇದು ಕೊನೆಯ ವಿಶ್ವಕಪ್ ಆಗಿದೆ. ಈ ಬಾರಿ ಕಪ್ ಗೆಲ್ಲಲೇಬೆಕೆಂಬ ಛಲದೊಂದಿಗೆ ಬಂದಿದ್ದ ರೊನಾಲ್ಡೊ ಪಡೆಗೆ ಮೊರೊಕ್ಕೊ ದೊಡ್ಡ ಆಘಾತ ನೀಡಿದೆ. 

ಮೈದಾನದಲ್ಲೇ ಕಣ್ಣೀರು ಹಾಕಿದ ರೊನಾಲ್ಡೋ
ಪೋರ್ಚುಗಲ್ ತಂಡ ಸೋಲುತ್ತಿದ್ದಂತೆ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲೇ ಕಣ್ಣೀರು ಹಾಕಿದರು. ಅವರು ಉಕ್ಕಿ ಬರುತ್ತಿರುವ ದುಃಖವನ್ನು ತಡೆದುಕೊಂಡು ಮೈದಾನದಿಂದ ಹೊರನಡೆದರು. ಮೊರೊಕ್ಕೊ ತಂಡಕ್ಕೆ ಇದು ಐತಿಹಾಸಿಕ ಜಯವಾಗಿದ್ದು, ಯೂರೋಪ್ ಪ್ರಾಬಲ್ಯವಿರುವ ಫುಟ್ಬಾಲ್‌ನಲ್ಲಿ ಮೊದಲ ಬಾರಿಗೆ ಆಫ್ರಿಕಾ ಖಂಡದ ರಾಷ್ಟ್ರವೊಂದು ಸೆಮಿಫೈನಲ್ ಪ್ರವೇಶಿಸಿದೆ.

ಸೆಮೀಸ್ ಗೆ ಮೆಸ್ಸಿ ಬಳಗ ಲಗ್ಗೆ
ಮತ್ತೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಲಯೊನೆಲ್‌ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದು ಸೆಮೀಸ್ ಗೆ ಲಗ್ಗೆ ಹಾಕಿದೆ. ಲುಸೈಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ತಡರಾತ್ರಿ ನಡೆದ ಕ್ವಾರ್ಟರ್‌ ಫೈನಲ್ ಪಂದ್ಯವನ್ನು ನಿಗದಿತ ಅವಧಿಯಲ್ಲಿ ಗೆಲ್ಲುವ ಅವಕಾಶ ಕೈಚೆಲ್ಲಿದರೂ ಶೂಟೌಟ್‌ನಲ್ಲಿ 4-3 ರಲ್ಲಿ ಗೆದ್ದ ದಕ್ಷಿಣ ಅಮೆರಿಕದ ತಂಡ, ಟ್ರೋಫಿ ಜಯಿಸುವ ಕನಸು ಜೀವಂತವಾಗಿರಿಸಿಕೊಂಡಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com