ಹೊಸ ವರ್ಷಾಚರಣೆ: ಬೆಂಗಳೂರಿನ ಈ ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಪೊಲೀಸರ ನಿರ್ಬಂಧ, ಯಾವ ರಸ್ತೆಗಳು, ಯಾವ ಸಮಯ?

ಹೊಸ ವರ್ಷ ಸಂಭ್ರಮಾಚರಣೆಗೆ ಇನ್ನು ಒಂದೇ ದಿನ ಬಾಕಿ. ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆಯೊಂದಿಗೆ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಪೊಲೀಸರು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಗೆ ಇನ್ನು ಒಂದೇ ದಿನ ಬಾಕಿ. ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆಯೊಂದಿಗೆ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಪೊಲೀಸರು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. 

ಇಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರು ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಎಲ್ಲಾ ಖಾಸಗಿ ವಾಹನಗಳನ್ನು ನಾಡಿದ್ದು 31ರಂದು ರಾತ್ರಿ 8 ಗಂಟೆಯಿಂದ ಜನವರಿ 1ರ ಮಧ್ಯರಾತ್ರಿ 1 ಗಂಟೆಯವರೆಗೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. 

ಬೆಂಗಳೂರಿನಲ್ಲಿ ಹೊಸ ವರ್ಷವನ್ನು ಎಂ ಜಿ ರಸ್ತೆ, ಚರ್ಚ್ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆ ಮಾಡುವವರು ಅಧಿಕ ಮಂದಿ. ಈ ರಸ್ತೆಗಳಲ್ಲಿ ಪೊಲೀಸ್ ಜೀಪು ಮತ್ತು ಇತರ ಪೊಲೀಸ್ ವಾಹನ ಹಾಗೂ ಅಗತ್ಯ ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಎಂ ಜಿ ರಸ್ತೆ,ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೈಂಟ್ ಮಾರ್ಕ್ಸ್ ರೋಡ್, ಚರ್ಚ್ ಸ್ಟ್ರೀಟ್ ಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಜನ ಸೇರುವುದು ಸಾಮಾನ್ಯ. ಸಾರ್ವಜನಿಕರ ಭದ್ರತೆ ಹಿತದೃಷ್ಟಿಯಿಂದ ಈ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. 

1. ಯಾವೆಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ: ಅನಿಲ್ ಕುಂಬ್ಳೆ ವೃತ್ತದಿಂದ ಮೇಯೋ ಹಾಲ್ ನ ಹತ್ತಿರ ರೆಸಿಡೆನ್ಸಿ ರಸ್ತೆಯವರೆಗೆ ಎಂ ಜಿ ರಸ್ತೆಯಲ್ಲಿ.
2. ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಒಪೆರಾ ಜಂಕ್ಷನ್ ವರೆಗೆ ಬ್ರಿಗೇಡ್ ರಸ್ತೆ
3. ಮ್ಯೂಸಿಯಂ ರಸ್ತೆಯವರೆಗೆ ಬ್ರಿಗೇಡ್ ರಸ್ತೆಯಲ್ಲಿ ಚರ್ಚ್ ಸ್ಟ್ರೀಟ್,
4. ಎಂ ಜಿ ರಸ್ತೆಯಿಂದ ಹಳೆ ಮದ್ರಾಸ್ ರಸ್ತೆಯವರೆಗೆ ಮ್ಯೂಸಿಯಂ ರೋಡ್,
5. ಮ್ಯೂಸಿಯಂ ರಸ್ತೆ ಬ್ರಿಗೇಡ್ ರಸ್ತೆಯಲ್ಲಿ ರೆಸ್ಟ್ ಹೌಸ್ ರಸ್ತೆಯಲ್ಲಿ
6. ರೆಸಿಡೆನ್ಸಿ ರಸ್ತೆಯಿಂದ ಎಂ ಜಿ ರಸ್ತೆಯವರೆಗೆ ರೆಸಿಡೆನ್ಸಿ ಕ್ರಾಸ್ ರಸ್ತೆಯವರೆಗೆ ಸಂಚಾರ ನಿರ್ಬಂಧ

ಪೊಲೀಸ್ ಮತ್ತು ಅಗತ್ಯ ಸೇವೆ ವಾಹನಗಳನ್ನು ಹೊರತುಪಡಿಸಿ ಬೇರೆಲ್ಲಾ ವಾಹನಗಳ ನಿಲುಗಡೆಗೆ ಸಹ ಡಿಸೆಂಬರ್ 31ರ ಮಧ್ಯಾಹ್ನ 2 ಗಂಟೆಯಿಂದ ಜನವರಿ 1ರ ಬೆಳಗಿನ ಜಾವ 7 ಗಂಟೆಯವರೆಗೆ ನಿರ್ಬಂಧ ವಿಧಿಸಲಾಗಿದೆ. ಅದು ಎಲ್ಲೆಲ್ಲವೆಂದರೆ
-ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ಸರ್ಕಲ್ ವರೆಗೆ ಎಂ ಜಿ ರಸ್ತೆಯಲ್ಲಿ
-ಆರ್ಟ್ ಅಂಡ್ ಕ್ರಾಫ್ಟ್ ಜಂಕ್ಷನ್ ನಿಂದ ಒಪೆರಾ ಜಂಕ್ಷನ್ ವರೆಗೆ ಬ್ರಿಗೇಡ್ ರಸ್ತೆಯಲ್ಲಿ
-ಸೈಂಟ್ ಮಾರ್ಕ್ಸ್ ರೋಡ್ ವರೆಗೆ ಚರ್ಚ್ ಸ್ಟ್ರೀಟ್ ನಲ್ಲಿ
-ಮ್ಯೂಸಿಯಂ ರಸ್ತೆಯವರೆಗೆ ರೆಸ್ಟ್ ಹೌಸ್ ರಸ್ತೆಯಲ್ಲಿ 
-ಹಳೆ ಮದ್ರಾಸ್ ರಸ್ತೆಯವರೆಗೆ ಮ್ಯೂಸಿಯಂ ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ನಿರ್ಬಂಧ ಹೇರಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com