ಯೂಟ್ಯೂಬ್ ನೋಡಿ ಟೆಕ್ ಟೂಲ್ ಬಳಸಿ ಕಾರು ಖದಿಯುತ್ತಿದ್ದ ಖತರ್ನಾಕ್ ಕಳ್ಳನ ಬಂಧನ

ಈತ ಪಕ್ಕಾ ಹೈ ಟೆಕ್ ಕಳ್ಳ... ಖ್ಯಾತ ವಿಡಿಯೋ ಜಾಲತಾಣ ಯೂಟ್ಯೂಬ್ ನೋಡಿ ಟೆಕ್ ಟೂಲ್ ಬಳಸಿ ಕಾರುಗಳನ್ನು ಕ್ಷಣ ಮಾತ್ರದಲ್ಲೇ ಎಗರಿಸುತ್ತಿದ್ದ.. ಇಂತಹ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಹೈಟೆಕ್ ಕಳ್ಳ
ಹೈಟೆಕ್ ಕಳ್ಳ

ಬೆಂಗಳೂರು: ಈತ ಪಕ್ಕಾ ಹೈ ಟೆಕ್ ಕಳ್ಳ... ಖ್ಯಾತ ವಿಡಿಯೋ ಜಾಲತಾಣ ಯೂಟ್ಯೂಬ್ ನೋಡಿ ಟೆಕ್ ಟೂಲ್ ಬಳಸಿ ಕಾರುಗಳನ್ನು ಕ್ಷಣ ಮಾತ್ರದಲ್ಲೇ ಎಗರಿಸುತ್ತಿದ್ದ.. ಇಂತಹ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಹೌದು.. ಯುಟ್ಯೂಬ್‌ ನೋಡಿ ಕಾರು ಕಳವು ಮಾಡುತ್ತಿದ್ದ ಆರೋಪದಲ್ಲಿ ಕೋಲಾರದ ಮುಳಬಾಗಿಲು ಮೂಲದ ಅರುಣ್‌ ಕುಮಾರ್‌ (32 ವರ್ಷ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಹತ್ತು ಕಾರುಗಳು, ಒಂದು ಬೈಕ್‌ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ “ಎಕ್ಸ್‌ಟೂಲ್‌ ಆಟೋ ಡಯಾಗ್ನಿಸ್ಟಿಕ್‌ ಟೂಲ್ಸ್‌’ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನನ್ನು ಬಂಧಿಸಿರುವ ನಗರದ ಹೆಚ್ ಎಸ್ಆರ್ ಬಡಾವಣೆಯ ಪೊಲೀಸರು ಸುಮಾರು 70 ಲಕ್ಷರೂ ಮೌಲ್ಯದ 10 ಕಾರು ಮತ್ತು ಬೈಕ್ ಗಳನ್ನು ವಶಕ್ಕೆ ಪಡೆದಿದ್ಜಾರೆ ಎಂದು ತಿಳಿದುಬಂದಿದೆ.

ಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನವರಾದ ಕುಮಾರ್, ಕದ್ದ ಕಾರುಗಳನ್ನು ತಮಿಳುನಾಡಿನ ತಿರುವಣ್ಣಾಮಲೈ, ಚೆನ್ನೈ, ವೆಲ್ಲೂರು, ನಾಮಕ್ಕಲ್, ನಾಗಪಟ್ಟಣಂ ಮತ್ತಿತರ ಕಡೆ ಅಗ್ಗದ ಬೆಲೆಗೆ ಮಾರಾಟ ಮಾಡಿದ್ದಾರೆ. ಹಣವನ್ನು ಪಾರ್ಟಿಗಳಿಗೆ ಖರ್ಚು ಮಾಡುತ್ತಿದ್ದರು.

ಕಾರು ಕಳ್ಳತನಕ್ಕಾಗಿಯೇ ಪ್ರತ್ಯೇಕ ಡಿವೈಸ್‌ ಖರೀದಿಸಿದ್ದ ಖದೀಮ!
ಇನ್ನು ಈ ಹಿಂದೆ ದರೋಡೆ ಪ್ರಕರಣದಲ್ಲಿ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಜೈಲು ಸೇರಿದ್ದ ಆರೋಪಿಗೆ ಕಾರು ಕಳವು ಪ್ರಕರಣದಲ್ಲಿ ಜೈಲು ಸೇರಿದ್ದ ರಾಕೇಶ್‌ ಎಂಬಾತನ ಪರಿಚಯವಾಗಿದೆ.  ಆತನಿಂದ ತಂತ್ರಜ್ಞಾನದ ಮೂಲಕ ಕಾರು ಕದಿಯುವ ಬಗ್ಗೆ ತಿಳಿದುದುಕೊಂಡಿದ್ದ. ಬಳಿಕ ಯುಟ್ಯೂಬ್‌ ಮೂಲಕ  ಕಾರು ಕಳವಿಗೆ  ಬಳಸುವ ಡಿವೈಸ್‌ ಬಗ್ಗೆ ತಿಳಿದು  50-60 ಸಾವಿರ ರೂ. ವ್ಯಯಿಸಿ ಆನ್‌ಲೈನ್‌ ಮೂಲಕ “ಎಕ್ಸ್‌ಟೂಲ್‌ ಆಟೋ ಡಯಾಗ್ನಿಸ್ಟಿಕ್‌ ಟೂಲ್‌’ ಎಂಬ ಡಿವೈಸ್‌ ಖರೀದಿಸಿ ಅದರ ಬಳಕೆ ಬಗ್ಗೆಯೂ ತಿಳಿದುಕೊಂಡು ಬಳಿಕ ಕಾರುಗಳನ್ನು ಕದಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಫ್ಟ್ ವೇರ್‌ ಹ್ಯಾಕ್‌ ಮಾಡಿ ಕಳ್ಳತನ
ರಾತ್ರಿ ವೇಳೆ ಬೆಂಗಳೂರು ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಸುತ್ತಾಡಿ ರಸ್ತೆ ಬದಿ ನಿಂತಿದ್ದ ಕಾರುಗಳ ಗ್ಲಾಸ್‌ ಒಡೆದು ಒಳಗೆ ಹೋಗುತ್ತಿದ್ದ. ಅನಂತರ ಡಿವೈಸ್‌ನಲ್ಲಿರುವ ಕೇಬಲ್‌ ಅನ್ನು ಸ್ಟೇರಿಂಗ್‌ನ ಕೆಳ ಭಾಗದಲ್ಲಿರುವ ವೈರ್‌ಗೆ ಸಂಪರ್ಕಿಸಿ ಕಾರಿನ ಸಾಫ್ಟ್ ವೇರ್‌ ಅನ್ನು ಡಿವೈಸ್‌ಗೆ ವರ್ಗಾಯಿಸಿಕೊಳ್ಳುತ್ತಿದ್ದ. ಕಾರಿನ ನಕಲಿ ಕೀಯನ್ನು ಡಿವೈಸ್‌ಗೆ ಸಂಪರ್ಕಿಸಿ, ಡಿವೈಸ್‌ನಲ್ಲಿರುವ ಕಾರಿನ ಆ್ಯಪ್‌ ತೆರೆದು ಸಿಸ್ಟಮ್‌ ಆಪರೇಟ್‌ ಮಾಡಿ ಕೆಲವೇ ಕ್ಷಣಗಳಲ್ಲಿ ಕಾರಿನೊಂದಿಗೆ ಪರಾರಿಯಾಗುತ್ತಿದ್ದ. ಈ ಕಾರುಗಳನ್ನು ತಮಿಳುನಾಡು, ಆಂಧ್ರಪ್ರದೇಶದಲ್ಲಿ ನಂಬರ್‌ ಪ್ಲೇಟ್‌ ಮತ್ತು ಆರ್‌ಸಿ ಬದಲಾಯಿಸಿ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಐಶಾರಾಮಿ ಜೀವನ, ಯುವತಿಯರ ಜತೆ ಸುತ್ತಾಟ
ಇನ್ನು ಈತ ತಾನು ಕಾರು ಮಾರಿದ ಹಣವನ್ನು ತನ್ನ ಐಶಾರಾಮಿ ಜೀವನ ಮತ್ತು ಯುವತಿಯರ ಜೊತೆಗಿನ ಸುತ್ತಾಟಕ್ಕಾಗಿ ಬಳಸುತ್ತಿದ್ದ ಎನ್ನಲಾಗಿದೆ. ಕದ್ದ ಕಾರು ಮಾರಾಟದಲ್ಲಿ ಬಂದ ಹಣದಲ್ಲಿ ಯುವತಿಯರ ಜತೆ ಗೋವಾ, ಪಾಂಡಿಚೇರಿ ಸಹಿತ ವಿವಿಧ ಪ್ರವಾಸಿ  ತಾಣಗಳಿಗೆ  ತೆರಳುತ್ತಿದ್ದ ಹಾಗೂ ಗೋವಾದ ಕ್ಯಾಸಿನೋ ಹಾಗೂ ಜೂಜಾಟದಲ್ಲೂ ಭಾಗಿಯಾಗುತ್ತಿದ್ದ. ಈತನ ವಿರುದ್ಧ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ವಿವಿಧ ಪೊಲೀಸ್‌ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com