ಹುಬ್ಬಳ್ಳಿ: ಮಹದಾಯಿ ಸಮಸ್ಯೆ ಪರಿಹರಿಸಿ ನೀರು ನೀಡುವವರೆಗೂ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡದಿರುವಂತಹ ಅಭಿಯಾನ ಹಮ್ಮಿಕೊಳ್ಳುವುದಾಗಿ ಕಳಸಾ-ಬಂಡೂರಿ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಏಳು ವರ್ಷಗಳಿಂದ ಮಹದಾಯಿಗಾಗಿ ನಿರಂತರ ಹೋರಾಟ ನಡೆದಿದೆ. ನ್ಯಾಯಾಧಿಕರಣ ತೀರ್ಪು ಬಂದು ಮೂರು ವರ್ಷ ಕಳೆದರೂ ರಾಜ್ಯ ಸರ್ಕಾರ ನೀರು ಪೂರೈಕೆಗೆ ಅಗತ್ಯ ಕ್ರಮಕೈಗೊಂಡಿಲ್ಲ. ಕೇಂದ್ರಕ್ಕೆ ಡಿಪಿಆರ್ ಸಲ್ಲಿಕೆಯನ್ನೇ ಮಾಡಿಲ್ಲ. ತಾಂತ್ರಿಕ ಪ್ರಕ್ರಿಯೆಗಳನ್ನು ನಡೆಸದೆ ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
1981ರಲ್ಲಿ ಬೆಟರ್‌ಮೆಂಟ್ ಲೆವಿ ಆ್ಯಂಡ್ ವಾಟರ್ ರೇಟ್ (ಸಮರ್ಪಕವಾಗಿ ನೀರು ಒದಗಿಸದೆ ಕರ ವಿಧಿಸಿದ ಪ್ರಕರಣ) ವಿರುದ್ಧ ನಡೆದಿದ್ದ ನರಗುಂದ ಬಂಡಾಯದ ಮಾದರಿಯಲ್ಲಿ ಹೋರಾಟ ಮಾಡಲಾಗುವುದು. ಮಹದಾಯಿ ನೀರು ಕೊಡುವವರೆಗೆ ಸಾಲ ಮರುಪಾವತಿ ಮಾಡದಿರಲು ತೀರ್ಮಾನ ಕೈಗೊಳ್ಳಲಾಗುವುದು. ಅದೇ ರೀತಿ ರೈತರಿಗೆ ಕರೆ ನೀಡುತ್ತೇವೆ ಎಂದರು.
ರೈತ ಹುತ್ಮಾತ್ಮ ದಿನವಾದ ಜುಲೈ 21 ರಿಂದ ಸಾಲ ಮರುಪಾವತಿ ಬಾಯ್ಕಟ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಈ ಅಭಿಯಾನಕ್ಕೆ ಮಹದಾಯಿ ಹೋರಾಟ ಸಂಸ್ಥಾಪಕ ವಿಜಯ ಕುಲಕರ್ಣಿ ಕರೆ ನೀಡಿದ್ದು, ವಿವಿಧ ಸಂಘಟನೆಗಳು ಮತ್ತು ರೈತರಿಂದ ಬೆಂಬಲ ವ್ಯಕ್ತವಾಗಿದೆ. ಮಹಾದಾಯಿ ಯೋಜನೆ ಜಾರಿಯಾಗದಿದ್ದರೆ ಬ್ಯಾಂಕ್‍ನಲ್ಲಿ ಮಾಡಿರುವ ಬೆಳೆ ಸಾಲ, ನೀರಾವರಿ ಸಾಲ ಸೇರಿದಂತೆ ವಿವಿಧ ಮಾದರಿಯ ಸಾಲಗಳನ್ನು ತುಂಬದಿರಲು ನಿರ್ಧಾರ ಮಾಡಿದ್ದಾರೆ.
ಯೋಜನೆ ಜಾರಿ ಮಾಡಲಿಲ್ಲ ಅಂದರೆ ನಿಮಗೆ ಧಿಕ್ಕಾರ ಕೂಗಬೇಕಾಗುತ್ತದೆ. ಅದಕ್ಕಾಗಿ ನಮ್ಮ ರೈತರಿಗೆ ಕರೆ ಕಟ್ಟಿದ್ದೇವೆ. ನಮಗೆ ನೀರೆ ನೀಡಲ್ಲ ಅಂದರೆ ಸಾಲ ತುಂಬೊದು ಹೇಗೆ. ಅದಕ್ಕಾಗಿಯೇ ನಾವು ಸಾಲ ತುಂಬುವುದಿಲ್ಲ. ಸರ್ಕಾರದ ಏನಾದ್ರು ಮಾಡಿಕೊಳ್ಳಲಿ, ನಾವು ಸಾಲ ತುಂಬಲ್ಲ ಎಂದು ಆಕ್ರೋಶ ಹೊರಹಾಕಿದರು.
ಮಲಪ್ರಭಾ ನೀರಿನ ನಿರೀಕ್ಷೆಯಲ್ಲಿ ರೈತರು ಸಾಲ ಮಾಡಿಕೊಂಡಿದ್ದಾರೆ, ಆದರೆ ಈ ಭಾಗದ ಬಹುತೇಕ ಹೊಲಗಳಿಗೆ ಹನಿ ನೀರು ಸಿಕ್ಕಿಲ್ಲ. 2000ನೇ ಇಸವಿಯಲ್ಲಿ ಕಳಸಾ-ಬಂಡೂರಿ ಯೋಜನೆಗಾಗಿ ನಡೆದ ಆಂದೋಲನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು. ಆಗಿದ್ದ ಬದ್ಧತೆ ಯೋಜನೆ ಅನುಷ್ಠಾನದಲ್ಲಿಯೂ ಇರಬೇಕಾಗಿತ್ತು, ಆದರೆ ಇಲ್ಲ ಎಂದು ಕುಲಕರ್ಣಿ ಆರೋಪಿಸಿದ್ದಾರೆ.
Advertisement