ವಿಜಯನಗರ-ಕೊಪ್ಪಳ ಉಸ್ತುವಾರಿ ಸಚಿವರ ಅದಲು ಬದಲು ಆದೇಶ ಹಿಂಪಡೆದ ರಾಜ್ಯ ಸರ್ಕಾರ

ವಿಜಯನಗರ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಕೆಲವೇ ಗಂಟೆಗಳ ಅಂತರದಲ್ಲಿ ಶನಿವಾರ ಹಿಂಪಡೆದಿದ್ದು, ಇದರಿಂದ ಮೊದಲಿನಂತೆ ಉಸ್ತುವಾರಿ ಸಚಿವರು ಕಾರ್ಯನಿರ್ವಹಿಸಲಿದ್ದಾರೆ. 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ವಿಜಯನಗರ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಕೆಲವೇ ಗಂಟೆಗಳ ಅಂತರದಲ್ಲಿ ಶನಿವಾರ ಹಿಂಪಡೆದಿದ್ದು, ಇದರಿಂದ ಮೊದಲಿನಂತೆ ಉಸ್ತುವಾರಿ ಸಚಿವರು ಕಾರ್ಯನಿರ್ವಹಿಸಲಿದ್ದಾರೆ. 

ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ವಿಜಯನಗರದ ಉಸ್ತುವಾರಿ ಹೊಣೆ ಹೊತ್ತಿದ್ದ ಮುಜುರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಹಾಗೂ ಕೊಪ್ಪಳದ ಉಸ್ತುವಾರಿ ಹೊಣೆ ಹೊತ್ತಿದ್ದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್‌ ಅವರನ್ನು ಶುಕ್ರವಾರ (ಸರ್ಕಾರಿ ಆದೇಶದ ಪ್ರಕಾರ) ಸರ್ಕಾರ ಅದಲು ಬದಲು ಮಾಡಿ ಆದೇಶ ಹೊರಡಿಸಿತ್ತು. 

ವಿಜಯನಗರ ಜಿಲ್ಲಾದ್ಯಂತ ಆನಂದ್‌ ಸಿಂಗ್‌ ಅವರಿಗೆ ಸ್ವಂತ ಜಿಲ್ಲೆಯ ಉಸ್ತುವಾರಿ ಸಿಕ್ಕಿತ್ತೆಂದು ಖುಷಿ ಅಲ್ಲಿಯ ಜನ ಸಂಭ್ರಮಿಸಿದ್ದರು. ಆನಂದ್ ಸಿಂಗ್ ಅವರನ್ನು ವಿಜಯನಗರ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಬೇಕೆಂಬ ಅವರ ಅನುಯಾಯಿಗಳ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಈ ಆದೇಶ ಹೊರಡಿಸಿದೆ ಎಂದು ಹೇಳಲಾಗಿತ್ತು.  ವಿಜಯನಗರದಿಂದ ಕೊಪ್ಪಳ ಜಿಲ್ಲೆಗೆ ಶಶಿಕಲಾ ಜೊಲ್ಲೆ ಅವರನ್ನು ಬದಲಾವಣೆ ಮಾಡಿದ್ದು, ಶನಿವಾರ ಬೆಳಗ್ಗೆ ಜನರಿಗೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಉಸ್ತುವಾರಿಗಳ ಬದಲಾವಣೆ ಯಾಕೆ ಆಗಿದೆ ಎಂಬ ವ್ಯಾಪಕ ಚರ್ಚೆಯಾಗತೊಡಗಿದ್ದವು. ಇದರ ಬೆನ್ನಲ್ಲೆ ಉಸ್ತುವಾರಿಗಳ ಬದಲಾವಣೆ ಚರ್ಚೆಗೆ ಮತ್ತಷ್ಟು ಇಂಬು ಸಿಗುವಂತೆ ಸರ್ಕಾರ ಶನಿವಾರ ಸಂಜೆ ವೇಳೆಗೆ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ ಆದೇಶವನ್ನು ರದ್ದುಪಡಿಸಿದೆ.

ಶುಕ್ರವಾರ ಸರ್ಕಾರವೇ ಆದೇಶ ಮಾಡಿ ಮತ್ತೆ ಒಂದೇ ದಿನದಲ್ಲಿ ಆದೇಶ ರದ್ದು ಮಾಡಿರುವುದು ಸರ್ಕಾರದ ಕಾರ್ಯವೈಖರಿಯನ್ನೆ ಪ್ರಶ್ನೆ ಮಾಡುವಂತಾಗಿದೆ. ಸದ್ಯ ಕೊಪ್ಪಳ ಜಿಲ್ಲೆಗೆ ಮೊದಲಿನಂತೆಯೇ ಸಚಿವ ಆನಂದ ಸಿಂಗ್‌ ಹಾಗೂ ವಿಜಯನಗರಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಉಸ್ತುವಾರಿಯಾಗಿ ಮುಂದುವರಿದಿದ್ದಾರೆ.

ವಿಜಯನಗರ ಅವರ ತವರು ಜಿಲ್ಲೆಯಾಗಿರುವುದರಿಂದ ಮತ್ತು ಸಚಿವರು ಬಂದಿರುವ ಜಿಲ್ಲೆಗಳನ್ನು ಹಂಚಿಕೆ ಮಾಡದಿರಲು ಸರ್ಕಾರ ಈ ಹಿಂದೆ ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಂಡಿದ್ದರಿಂದ ಸರ್ಕಾರ ತ್ವರಿತವಾಗಿ ಆದೇಶವನ್ನು ಹಿಂಪಡೆದಿದೆ. ಅಲ್ಲದೆ, ಆದೇಶ ಜಾರಿಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತವರು ಜಿಲ್ಲೆಗಳನ್ನು ನೀಡುವಂತೆ ಸಚಿವರಿಂದ ಒತ್ತಡ ಬರಲಾರಂಭಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಜನವರಿಯಲ್ಲಿ, ಪಕ್ಷದ ಹೈಕಮಾಂಡ್ ಸೂಚನೆಗಳನ್ನು ಅನುಸರಿಸಿ ಸಿಎಂ ಬೊಮ್ಮಾಯಿ ಅವರು ತಮ್ಮ ಕ್ಯಾಬಿನೆಟ್ ಸಹೋದ್ಯೋಗಿಗಳಿಗೆ ಅವರ ತವರು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳನ್ನು ಹಂಚಿಕೆ ಮಾಡಿದ್ದರು. ಬೇರೆ ಜಿಲ್ಲೆಗಳ ಸಚಿವರು ಪಕ್ಷದ ಕಾರ್ಯಕರ್ತರಿಗೆ ಪಕ್ಷಾತೀತವಾಗಿ ನಡೆದುಕೊಂಡು ಪಕ್ಷದ ಸುಧಾರಣೆಗೆ ಶ್ರಮಿಸಬೇಕು ಎಂಬ ಚಿಂತನೆಯೊಂದಿಗೆ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ ಕೆಲವು ಸಚಿವರು ತಮ್ಮ ಊರಿನಿಂದ ದೂರವಿರುವ ಜಿಲ್ಲೆಗಳನ್ನು ನಿಭಾಯಿಸುವುದು ಕಷ್ಟ ಮತ್ತು ಸಮಯ ತೆಗೆದುಕೊಳ್ಳುತ್ತದೆ ಎಂದು ಭಾವಿಸಿದ್ದರು.

ಇದೀಗ ವಿಧಾನಸಭೆ ಚುನಾವಣೆಗೆ ಒಂಬತ್ತು ತಿಂಗಳು ಬಾಕಿ ಇರುವಾಗ ತಮ್ಮ ಕ್ಷೇತ್ರಗಳತ್ತ ಗಮನ ಹರಿಸಬೇಕಾಗಿರುವುದರಿಂದ ತಮಗೆ ಹಂಚಿಕೆಯಾದ ಜಿಲ್ಲೆಗಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನ ಸಚಿವರಲ್ಲಿ ಹೆಚ್ಚುತ್ತಿದೆ. ಆದರೆ ಸ್ಥಾಪಿತ ನಾಯಕರು ತಮ್ಮ ಹುಟ್ಟೂರಿನ ಹೊರಗೂ ತಮ್ಮ ವರ್ಚಸ್ಸು ಹೊಂದುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೈಕಮಾಂಡ್ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com