ಕೋವಿಡ್ ಸಂದರ್ಭದಲ್ಲೂ 'ಅಕ್ಷಯ ಪಾತ್ರೆ' ಸೇವೆ: ಇಸ್ಕಾನ್ ಕೊಂಡಾಡಿದ ರಾಷ್ಟ್ರಪತಿ ಕೋವಿಂದ್

ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಅಕ್ಷಯ ಪಾತ್ರೆ ಸೇವೆ ನೀಡಿದ ಇಸ್ಕಾನ್ ತಂಡವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೋಮವಾರ ಶ್ಲಾಘಿಸಿದರು.
ಇಸ್ಕಾನ್ ಶ್ರೀ ರಾಜಾಧಿ ರಾಜ ಗೋವಿಂದ ದೇವಾಲಯ.
ಇಸ್ಕಾನ್ ಶ್ರೀ ರಾಜಾಧಿ ರಾಜ ಗೋವಿಂದ ದೇವಾಲಯ.
Updated on

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಅಕ್ಷಯ ಪಾತ್ರೆ ಸೇವೆ ನೀಡಿದ ಇಸ್ಕಾನ್ ತಂಡವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೋಮವಾರ ಶ್ಲಾಘಿಸಿದರು.

ಇಸ್ಕಾನ್ ಸಂಸ್ಥೆಯು ಕನಕಪುರ ರಸ್ತೆಯ ವಸಂತಪುರದಲ್ಲಿ ಸುಮಾರು ರೂ.100 ಕೋಟಿ ವೆಚ್ಚದಲ್ಲಿ 28 ಎಕರೆ ಪ್ರದೇಶದಲ್ಲಿ ತಿರುಪತಿ ತಿರುಮಲ ದೇವಾಲಾಯದ ಪ್ರತಿರೂಪದಂತೆ ನಿರ್ಮಿಸಿರುವ ರಾಜಾಧಿರಾಜ ಗೋವಿಂದ ದೇವಾಲಯ ಮತ್ತು ಸಾಂಸ್ಕೃತಿ ಸಂಕೀರ್ಣವನ್ನು ಸೋಮವಾರ ರಾಮನಾಥ್ ಕೋವಿಂದ್ ಅವರು ಲೋಕಾರ್ಪಣೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಇಸ್ಕಾನ್ ಬೆಂಗಳೂರು ಕಳೆದ 25 ವರ್ಷಗಳಿಂದ ಲಕ್ಷಾಂತರ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿದೆ. ಇಸ್ಕಾನ್‌ನ ಅಕ್ಷಯ ಪಾತ್ರ ಉಪಕ್ರಮವು ಪ್ರತಿ ದಿನ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತಾಜಾ, ಪೌಷ್ಟಿಕ ಮಧ್ಯಾಹ್ನದ ಊಟವನ್ನು ನೀಡುತ್ತಿದೆ. “ಸಾಂಕ್ರಾಮಿಕ ಸಮಯದಲ್ಲಿ, ಅಕ್ಷಯ ಪಾತ್ರೆಯ ಸೇವೆಯು ಸಂಕಷ್ಟದಲ್ಲಿರುವ 25 ಕೋಟಿಗೂ ಹೆಚ್ಚು ಜನರಿಗೆ ಊಟವನ್ನು ಒದಗಿಸಿದೆ. ಇಂತಹ ಮಾನವೀಯ ಮಧ್ಯಸ್ಥಿಕೆಗಳು ಸಮಾಜದ ಎಲ್ಲಾ ವರ್ಗಗಳಿಗೆ ಪ್ರಯೋಜನವನ್ನು ನೀಡಿದೆ ಎಂದು ಹೇಳಿದರು.

ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧು ಪಂಡಿತ್ ದಾಸ ಮಾತನಾಡಿ, ಶ್ರೀಲ ಪ್ರಭುಪಾದರ ಆಶಯದಂತೆಯೇ ತಿರುಮಲದಲ್ಲಿರುವಂತೆ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

 ಇಸ್ಕಾನ್ ಬೆಂಗಳೂರಿನ ಹಿರಿಯ ಉಪಾಧ್ಯಕ್ಷ ಚಂಚಲಪತಿ ದಾಸ ಮಾತನಾಡಿ, ಲೋಕಾರ್ಪಣೆ ಬಳಿ ದೇವಸ್ಥಾನದಲ್ಲಿ 48 ದಿನ ಮಂಡಲ ಪೂಜೆ ನಡೆಯಲಿದ್ದು, ಆ ಬಳಿಕ ಆಗಸ್ಟ್ 1 ರಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರಲಿದೆ. ರಾಜಾಜಿನಗರ ಇಸ್ಕಾನ್ ಮಾದರಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ಇರಲಿದ್ದು, ದೇವಸ್ಥಾನ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1, ಸಂಜೆ 4 ರಿಂದ ರಾತ್ರಿ 8.30ರವರೆಗೂ ತೆರೆದಿರುತ್ತದೆ. ಉಚಿತ ಪ್ರವೇಶ, ಪ್ರಸಾದ ವ್ಯವಸ್ಥೆ ಇರಲಿದೆ. ಸಮೀಪದಲ್ಲಿ ನಮ್ಮ ಮೆಟ್ರೋ ಹಸಿರು ಮಾರ್ಗದ ದೊಡ್ಡಕಲ್ಲಸಂದ್ರ ನಿಲ್ದಾಣವಿದ್ದು, ಅಲ್ಲಿಂದ ದೇವಸ್ಥಾನ ಒಂದು ಕಿ.ಮೀ ದೂರದಲ್ಲಿದೆ ಎಂದು ಮಾಹಿತಿ ನೀಡಿದರು.

ಇತರೆ ಇಸ್ಕಾನ್ ದೇವಸ್ಥಾನಗಳಂತೆ ಭಕ್ತಾಗಳಿಗೆ ಎಲ್ಲಾ ಸೌಲಭ್ಯಗಳಿರಲಿದೆ. ದೇವಾಲಯ ಮಾತ್ರವಲ್ಲದೇ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿ ಶಿಕ್ಷಣ ಕೇಂದ್ರವು ಆಗಿದ್ದು, ಇದರ ಮೂಲಕ ಸಮಾಜದ ಎಲ್ಲಾ ವರ್ಗಗಳ ಜನರಿಗೆ ಸೇವೆ ಸಲ್ಲಿಸಲು ನಾವು ಬದ್ಧರಾಗಿದ್ದೇವೆಂದು ತಿಳಿಸಿದರು.

ಸಾಂಪ್ರದಾಯಿಕ ಶಿಲ್ಪಶಾಸ್ತ್ರದ ಪ್ರಕಾರ ದ್ರಾವಿಡ ವಾಸ್ತುಶೈಲಿಯಲ್ಲಿ ಕಲ್ಲಿನ ದೇವಾಲಯವನ್ನು ನಿರ್ಮಿಸಲಾಗಿದೆ. ಗರ್ಭಗುಡಿಯ ಏಳು ಬಾಗಿಲುಗಳನ್ನು ಒಳಗೊಂಡಂತೆ ವಿನ್ಯಾಸ ಮತ್ತು ಸೌಂದರ್ಯಶಾಸ್ತ್ರವು ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಿಂದ ಪ್ರೇರಿತವಾಗಿದೆ. ಶ್ರೀನಿವಾಸನ ಮೂರ್ತಿಯಂತೆಯೇ ಅದೇ ಎತ್ತರದಲ್ಲಿ ಇಲ್ಲಿಯೂ ಮೂರ್ತಿಯಿದೆ. ಇದಕ್ಕೆ ಶ್ರೀ ರಾಜಾಧಿರಾಜ ಗೋವಿಂದ ಎಂದು ಹೆಸರಿಸಲಾಗಿದೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com