ಬಿಸಿನೆಸ್ ಡಿಸ್ಟ್ರಿಕ್ಟ್ ಕಡೆ ಸಿಗ್ನಲ್ ಜೋಡಣೆ ಕಾರ್ಯ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ
ಬೆಂಗಳೂರು: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆಗಳು ಬಗೆಹರಿಯದೆ ಉಳಿದಿದ್ದು, ನಗರ ಮತ್ತು ಸುತ್ತಮುತ್ತಲಿನ 10 ಪ್ರಮುಖ ಸ್ಥಳಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಪರಿಹಾರಗಳನ್ನು ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾಸ ಸೂಚನೆ ನೀಡಿದರು.
ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ, ಬಿಎಂಆರ್‌ಸಿಎಲ್, ಬೆಸ್ಕಾಂ, ನಗರಾಭಿವೃದ್ಧಿ ಇಲಾಖೆ ಮತ್ತು ಗೃಹ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಟ್ರಾಫಿಕ್ ಸಿಗ್ನಲ್‌ಗಳ ಸಿಂಕ್ರೊನೈಸೇಶನ್ ಮತ್ತು ಸುಗಮ ಸಂಚಾರಕ್ಕೆ ಅಡೆತಡೆಗಳನ್ನು ನಿವಾರಿಸುವತ್ತ ಗಮನಹರಿಸಬೇಕೆಂದು ಸೂಚಿಸಿದರು.
ಟ್ರಾಫಿಕ್ ಸಮಸ್ಯೆ ಪರಿಹರಿಸುವ ಕ್ರಮಗಳ ಬಗ್ಗೆ ಆಯಾ ವ್ಯಾಪ್ತಿಯ ಡಿಸಿಪಿಗಳು ಉಸ್ತುವಾರಿ ನೋಡಿಕೊಳ್ಳಬೇಕು. ಬಿಬಿಎಂಪಿ, ಬಿಡ್ಲ್ಯುಎಸ್ಎಸ್ಬಿ, ಬಿಎಂಆರ್‌ಸಿಎಲ್ ಮತ್ತು ಬೆಸ್ಕಾಂ ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ನಗರಾಭಿವೃದ್ಧಿ ಇಲಾಖೆ ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ನಗರದ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ರೂಪಿಸಬೇಕು.
ನಗರ ವ್ಯಾಪ್ತಿಯ ರಸ್ತೆಗಳಲ್ಲಿರುವ ಗುಂಡಿಗಳನ್ನು ಶೀಘ್ರ ಮುಚ್ಚಬೇಕು. ಗುಂಡಿ ಮುಚ್ಚುವ ಕಾಮಗಾರಿಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ಆದ್ಯತೆ ಸಿಗಬೇಕು. ಕಳೆದ ಬಾರಿ ಭಾರೀ ಮಳೆಯಾದಾಗ ಹಾಳಾಗಿದ್ದ 50 ಸ್ಥಳಗಳ ರಿಪೇರಿ ಕಾಮಗಾರಿಗಳನ್ನು ಶೀಘ್ರ ನಿರ್ವಹಿಸಬೇಕು ಎಂದು ಹೇಳಿದರು. ಹೆಚ್ಚು ಟ್ರಾಫಿಕ್ ಇರುವ ರಸ್ತೆಗಳಲ್ಲಿ ಸಿಗ್ನಲ್ ವ್ಯವಸ್ಥೆ ಸುಧಾರಣೆಗೆ ಜಾರಿಗೊಳಿಸಲು ಉದ್ದೇಶಿಸಿರುವ ರೂ.48 ಕೋಟಿ ಮೊತ್ತದ ಕಾಮಗಾರಿಯನ್ನು ಆರಂಭಿಸುವಂತೆ ಮತ್ತು ಟ್ರಾಫಿಕ್ ಸಾಂದ್ರತೆ ಹೆಚ್ಚಾಗಿರುವ ಸ್ಥಳಗಳನ್ನು ಗುರುತಿಸಿ, ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್ ರೂಪಿಸಬೇಕು ಎಂದು ಸೂಚಿಸಿದರು.
ಮುಂದಿನ ದಿನಗಳಲ್ಲಿ ವಲಯವಾರು ಟ್ರಾಫಿಕ್ ನಿರ್ವಹಣೆ ಸಭೆಗಳನ್ನು ನಡೆಸಲಾಗುವುದು. ರಸ್ತೆಗಳ ಅತಿಕ್ರಮಣ ತೆರವುಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಟ್ರಾಫಿಕ್ ಜಂಕ್ಷನ್ಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಮತ್ತು ನಿರ್ಭಯಾ ಯೋಜನೆಯಲ್ಲಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ