ಹಲವರಿಂದ ಸಾಲ ಪಡೆದು ಹಿಂತಿರುಗಿಸಲಾಗದೆ ಸಂತ್ರಸ್ತೆಯರಂತೆ ನಾಟಕವಾಡಿದ ಸಹೋದರಿಯರು!

ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಹೋದರಿಯರಿಬ್ಬರ ಮೇಲೆ ನಡೆದಿದೆ ಎನ್ನಲಾಗಿದ್ದ ಮಾರಣಾಂತಿಕ ಹಲ್ಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಹೋದರಿಯರಿಬ್ಬರ ಮೇಲೆ ನಡೆದಿದೆ ಎನ್ನಲಾಗಿದ್ದ ಮಾರಣಾಂತಿಕ ಹಲ್ಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. 

ಹಲವರಿಂದ ಸಾಲ ಪಡೆದಿದ್ದ ಸಹೋದರಿಯರು ಅದನ್ನು ಹಿಂತಿರುಗಿಸಲಾಗದೆ, ಸಂತ್ರಸ್ತೆಯರಂತೆ ನಾಟವಾಡಿರುವುದು ಇದೀಗ ಬೆಳಕಿಗೆ ಬಂದಿದೆ. 

ಸಹೋದರಿಯರು ಇಂದಿರಮ್ಮ ಎಂಬುವವರ ಬಳಿ ಹಣ ಕೇಳಿದ್ದು, ಹೆಚ್ಚಿನ ಬಡ್ಡಿ ನೀಡುವುದಾಗಿ ತಿಳಿಸಿದ್ದಾರೆ. ಇದರಂತೆ ಹಣ ಪಡೆದು ಅಸಲು-ಬಡ್ಡಿ ನೀಡದ ಹಿನ್ನೆಲೆಯಲ್ಲಿ ಇಂದಿರಮ್ಮ ಅವರು ತಮ್ಮ ಪತಿ, ಹಾಗೂ ಪುತ್ರನೊಂದಿಗೆ ಸಹೋದರಿಯರ ಮನೆಗೆ ತೆರಳಿ ಕೊಟ್ಟ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈ-ಕೈ ಮಿಲಾಯಿಸಿದ್ದಾರೆ. 

ಬಳಿಕ ಇಬ್ಬರೂ ಸರ್ಜಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಕೆಲ ಸಮಯದ ಬಳಿಕ ಠಾಣೆಗೆ ಬಂದಿರುವ ಸಹೋದರಿಯರ ಚಿಕ್ಕಪ್ಪ, ತಮ್ಮಿದಲೇ ತಪ್ಪಾಗಿದ್ದು, ಸಮಸ್ಯೆ ಇತ್ಯರ್ಥಪಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಪೊಲೀಸ್ ಡೈರಿಯಲ್ಲೂ ಬರೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಸಹೋದರಿಯರು ಇಂದಿರಮ್ಮ ಅವರಿಂದಷ್ಟೇ ಅಲ್ಲದೆ, ಇತರರಿಂದಲೂ ಇದೂವರೆಗೂ ರೂ.1 ಕೋಟಿಯಷ್ಟು ಸಾಲ ಪಡೆದುಕೊಂಡಿದ್ದಾರೆ. ಆದರೆ, ಈ ಹಣ ಹಿಂದಿರಿಗಿಸಲು ಸಾಧ್ಯವಾಗದೆ, ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೇಹದ ಮೇಲಿನ ಗಾಯದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಪೊಲೀಸರ ವಿರುದ್ಧ ಹಲವರು ಕಿಡಿಕಾರಿದ್ದಾರೆ. 

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಇಂದಿರಮ್ಮ, ರಾಮಕೃಷ್ಣ ರೆಡ್ಡಿ ಹಾಗೂ ಅವರ ಪುತ್ರ ಸುನೀಲ್ ಕುಮಾರ್ ಅವರನ್ನು ಬಂಧನಕ್ಕೊಳಪಡಿಸಿದ್ದರು. 

ಎಸ್'ಪಿ ವಂಶಿ ಕೃಷ್ಣ ಅವರು ಮಾತನಾಡಿ, ಇದರಲ್ಲಿ ಪೊಲೀಸರ ಯಾವುದೇ ತಪ್ಪಿಲ್ಲ. ಇದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಇತರರು ಯಾರೂ ತಮ್ಮ ಬಳಿ ಬಡ್ಡಿ ದುಡ್ಡು ಕೇಳಬಾರದು ಎಂದು ಸಹೋದರಿಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಇಬ್ಬರೂ ಸಹೋದರಿಯರಿಗೂ ಸಮನ್ಸ್ ಜಾರಿ ಮಾಡಲಾಗಿದ್ದು, ಮಂಗಳವಾರ ರಾತ್ರಿಯೇ ಇಬ್ಬರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಇಂದ್ರಮ್ಮ ಅವರು ಇಬ್ಬರ ಮೇಲೆ ಹಲ್ಲೆ ನಡೆಸದೇ ಇದ್ದಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com