ಆತ್ಮಹತ್ಯೆಗೆ ಶರಣಾದ ಪುತ್ರ: ಮಾಹಿತಿ ನೀಡದೆ ಅಂತ್ಯಕ್ರಿಯೆ ನಡೆಸಿದ ಪೋಷಕರಿಗಾಗಿ ಪೊಲೀಸರ ಹುಡುಕಾಟ!
ನೇಣು ಬಿಗಿದುಕೊಂಡು ಪುತ್ರ ಆತ್ಮಹತ್ಯೆಗೆ ಶರಣಾಗಿದ್ದರು, ಪೊಲೀಸರಿಗೆ ಮಾಹಿತಿ ನೀಡದೆ ಪೋಷಕರು ಅಂತ್ಯಕ್ರಿಯೆ ನೆರವೇರಿಸಿರುವ ಘಟನೆಯೊಂದು ಕಲ್ಲೇರಪಾಳ್ಯ ಚೆಕ್ ಡ್ಯಾಂ ಬಳಿ ಭಾನುವಾರ ನಡೆದಿದೆ.
Published: 21st June 2022 11:24 AM | Last Updated: 21st June 2022 12:03 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ನೇಣು ಬಿಗಿದುಕೊಂಡು ಪುತ್ರ ಆತ್ಮಹತ್ಯೆಗೆ ಶರಣಾಗಿದ್ದರು, ಪೊಲೀಸರಿಗೆ ಮಾಹಿತಿ ನೀಡದೆ ಪೋಷಕರು ಅಂತ್ಯಕ್ರಿಯೆ ನೆರವೇರಿಸಿರುವ ಘಟನೆಯೊಂದು ಕಲ್ಲೇರಪಾಳ್ಯ ಚೆಕ್ ಡ್ಯಾಂ ಬಳಿ ಭಾನುವಾರ ನಡೆದಿದೆ.
ನಾಗರಾಜು ಹಾಗೂ ಪದ್ಮ ಎಂಬ ದಂಪತಿಯ ಪುತ್ರ ಎನ್.ಜಗದೀಶ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾರೆ. ಭಾನುವಾರ ಬೆಳಿಗ್ಗೆ 9.45ರ ಸುಮಾರಿಗೆ ಜಗದೀಶ್ ಹುಚ್ಚಪ್ಪನಗುಡ್ಡೆ ಬಳಿಯಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಈ ಬಗ್ಗೆ ಮಾಹಿತಿ ತಿಳಿದ ನಾಗರಾಜು ಅವರು ಸ್ಥಳಕ್ಕೆ ತೆರಳಿದ್ದಾರೆ. ಬಳಿಕ ಸ್ಥಳೀಯರ ಸಹಾಯದೊಂದಿಗೆ ಮೃತದೇಹವನ್ನು ಕೆಳಗಿಳಿಸಿದ್ದು, ಬಳಿಕ ಕಲ್ಲೇರಪಾಳ್ಯ ಚೆಕ್ ಡ್ಯಾಂ ಬಳಿಯಿರುವ ತಮ್ಮ ಹೊಲದಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಇಬ್ಬರನ್ನು ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ ಮರಣದಂಡನೆ
ಬೆಳಿಗ್ಗೆ 11.30ರ ಸುಮಾರಿಗೆ ಪೊಲೀಸರಾದ ಕೃಷ್ಣಪ್ಪ ಮತ್ತು ಮುತ್ತುರಾಜ್ ಅವರಿಗೆ ಮಾಹಿತಿ ತಿಳಿದುಬಂದಿದ್ದು, ಅಂತ್ಯಸಂಸ್ಕಾರ ನೆರವೇರಿಸುತ್ತಿರುವ ಬಗ್ಗೆ ಸುಳಿವು ಸಿಕ್ಕಿ ಕೂಡಲೇ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡ ಪೋಷಕರು ತರಾತುರಿಯಲ್ಲಿ ಚಿತೆಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದೆ.
ವ್ಯಕ್ತಿಯ ಸಾವಿಗೆ ನಿಖರ ಮಾಹಿತಿಗಳು ತಿಳಿದುಬಂದಿಲ್ಲ. ಇದೀಗ ಅಂತ್ಯಕ್ರಿಯೆ ನಡೆಸಿದ ಪೋಷಕರು ಹಾಗೂ ಇತರೆ 10 ಮಂದಿಗಾಗಿ ಹುಡುಕಾಟ ಆರಂಭಿಸಲಾಗಿದ್ದು, ಶೀಘ್ರದಲ್ಲೇ ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.