ಬೆಂಗಳೂರು: ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಹಮ್ಮಿಕೊಳ್ಳಲಾಗಿದ್ದ 3 ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ಬರೋಬ್ಬರಿ ರೂ.9.08 ಲಕ್ಷ ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಒಪ್ಪಂದ ಘೋಷಣೆಯಾಗಿದೆ.
ಈ ಮೂಲಕ 5ನೇ ಜಾಗತಿಕ ಹೂಡಿಕೆದಾರರ ಸಮಾವೇಶ ಬಂಡವಾಳ ಆಕರ್ಷಣೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಕೇವಲ ರೂ.5 ಲಕ್ಷ ಕೋಟಿ ಹೂಡಿಕೆ ನಿರೀಕ್ಷಿಸಿದ್ದ ಸಮಾವೇಶದಲ್ಲಿ ನಿರೀಕ್ಷೆಗಿಂತ ಹೆಚ್ಚು ಹೂಡಿಕೆ ಹರಿದು ಬಂದಿದೆ. ಬೆಂಗಳೂರಿನಲ್ಲಿ ನ.2 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದ್ದರು.
ಸಮಾವೇಶಕ್ಕೆ ತೆರೆಬಿದ್ದ ಹಿನ್ನೆಲೆಯಲ್ಲಿ ಸಹಿ ಮಾಡಲಾಗಿರುವ ಒಡಂಬಡಿಕೆಗಳನ್ನು ಕಾರ್ಯಗತಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು, ಕಂಪನಿಗಳೊಂದಿಗೆ ಅನುಸರಿಸಲು ಮತ್ತು ಮುಂದಿನ ಮೂರು ತಿಂಗಳಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮಗಳ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಜಿಐಎಂ-2022 ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ರಾಜ್ಯದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ನಿರಂತರ ಬೆಂಬಲ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕಂಪನಿಗಳು ಮತ್ತು ಸರ್ಕಾರಕ್ಕೆ ಸವಾಲುಗಳಿವೆ. ಸವಾಲುಗಳನ್ನು ಎದುರಿಸಲು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಹೇಳಿದ್ದಾರೆ.
ಹಸಿರು ಇಂಧನ ವಲಯಕ್ಕೆ 2 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸುವ ಕುರಿತು ಮಾತನಾಡಿದ ಸಿಎಂ, “ನಾವು (ಕರ್ನಾಟಕ) ದೇಶದಲ್ಲಿ ಶೇ 63 ರಷ್ಟು ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುತ್ತಿದ್ದೇವೆ. ಹೈಡ್ರೋಜನ್ ಇಂಧನ ಮತ್ತು ಅಮೋನಿಯಾ ಉತ್ಪಾದನೆಯಲ್ಲಿ ಗಲ್ಫ್ ರಾಷ್ಟ್ರಗಳು ಉತ್ತಮ ಮೂಲಸೌಕರ್ಯ ಹೊಂದಿದ್ದು, ಈ ರಾಷ್ಟ್ರಗಳೊಂದಿಗೆ ಕರ್ನಾಟಕ ಸ್ಪರ್ಧಿಸಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಆರ್ಥಿಕ ಹಿಂಜರಿತದ ಆತಂಕದ ನಡುವೆಯೂ ಜಿಐಎಂ ನಡೆಸಲಾಗಿದೆ: ಸಿಎಂ
ಬುದ್ದಿಮತ್ತೆ ಮತ್ತು ಪರಿಶ್ರಮ ಯಾರೊಬ್ಬರ ಸ್ವತ್ತಲ್ಲ. ಈ ಸಮಾವೇಶದಲ್ಲಿ ಬಂಡವಾಳ ಹೂಡಿಕೆಯಾಗಿದೆ ಮತ್ತು ಪ್ರೇರಣೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹರಿದು ಬರಲು ಅಧಿಕಾರಿ ವರ್ಗ ಬಹಳ ಕೆಲಸ ಮಾಡಿದೆ. ಪ್ರಪಂಚದಲ್ಲಿ ಆರ್ಥಿಕ ಹಿಂಜರಿತ ಇದೆ. ಇಂತಹ ಪರಿಸ್ಥಿತಿಯಲ್ಲಿಯೂ ಹೂಡಿಕೆದಾರರ ಸಮಾವೇಶ ಮಾಡಲು ನಾವು ಧೈರ್ಯ ತೋರಿದೆವು. ನಮ್ಮ ಜನವೇ ನಮಗೆ ಬಲ. ಕೌಶಲ್ಯಯುತ ಜನರೇ ನಮಗೆ ಬಲ. ನಮ್ಮ ನೀತಿಗಳೇ ನಮಗೆ ಬಲ. ಕರ್ನಾಟಕ ಇಂದು ಯೋಚನೆ ಮಾಡೋದನ್ನು ಭಾರತ ನಾಳೆ ಯೋಚನೆ ಮಾಡುತ್ತದೆ. ಬೆಂಗಳೂರಿಗೆ ಪ್ರತಿದಿನ 10 ಸಾವಿರ ಇಂಜಿನಿಯರ್ಗಳು ಬರುತ್ತಾರೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ನಮ್ಮ ನೀತಿ, ಚಿಂತನೆಗಳ ಬದಲಾವಣೆಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಹೊಸ ಸವಾಲುಗಳನ್ನು ಎದುರಿಸುತ್ತಿದ್ದೇವೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಮ್ಮ ಕಾರ್ಯದಕ್ಷತೆ ಹೆಚ್ಚಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಾವು ಗಲ್ಫ್ ರಾಷ್ಟ್ರಗಳ ಜೊತೆಗೆ ಸ್ಪರ್ಧೆಗೆ ಮುಂದಾಗುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದ ಮೂಲಸೌಕರ್ಯಗಳ ಬಗ್ಗೆ ನಕಾರಾತ್ಮಕ ವರದಿಗಳ ಹೊರತಾಗಿಯೂ, ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ನೀಡುತ್ತಿರುವ ಮೂಲಸೌಕರ್ಯವನ್ನು ಬೇರೆ ಯಾವುದೇ ರಾಜ್ಯ ನೀಡಲು ಸಾಧ್ಯವಿಲ್ಲ. ಹುಬ್ಬಳ್ಳಿ, ಧಾರವಾಡ, ಮಂಗಳೂರು, ಕಲಬುರಗಿ, ಬಳ್ಳಾರಿ, ತುಮಕೂರು ಮತ್ತು ಮೈಸೂರಿನಲ್ಲಿ 50,000 ಎಕರೆ ಭೂ ಪ್ರದೇಶವನ್ನು ಹೊಂದಿದ್ದೇವೆ. ಶಿವಮೊಗ್ಗ, ವಿಜಯಪುರ ಮತ್ತು ಕಾರವಾರದಲ್ಲಿ ಶೀಘ್ರದಲ್ಲೇ ವಿಮಾನ ನಿಲ್ದಾಣಗಳು ಬರಲಿವೆ. ರಾಷ್ಟ್ರೀಯ ಹೆದ್ದಾರಿಗಳನ್ನು ವಿಸ್ತರಿಸಿ ಅಭಿವೃದ್ಧಿಪಡಿಸುತ್ತಿದ್ದೇವೆ. ಇಷ್ಟು ವರ್ಷ ಬೆಂಗಳೂರನ್ನು ಕೇವಲ ಐಟಿ ಹಬ್ ಎಂದು ಕರೆಯಲಾಗುತ್ತಿತ್ತು, ಆದರೆ, ಈಗ ಹೊರವಲಯದಲ್ಲಿಯೂ ಅಭಿವೃದ್ಧಿಯಾಗುತ್ತಿದೆ. ಶೀಘ್ರದಲ್ಲೇ ಬೆಂಗಳೂರು ಪ್ರಮುಖ ಆರ್ಥಿಕ ಕೇಂದ್ರವಾಗಲಿದೆ ಎಂದು ತಿಳಿಸಿದರು.
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಮಾತನಾಡಿ, ಬೆಂಗಳೂರು ಹೊರತುಪಡಿಸಿ ಇತರೆ ಜಿಲ್ಲೆಗಳು ಶೇ 70ರಷ್ಟು ಹೂಡಿಕೆಯನ್ನು ಆಕರ್ಷಿಸಿರುವುದರಿಂದ ರಾಜ್ಯದ ಇತರ ಭಾಗಗಳಿಗೆ ಹೂಡಿಕೆ ಆಕರ್ಷಿಸುವ ಸರ್ಕಾರದ ಪ್ರಯತ್ನ ಯಶಸ್ವಿಯಾಗಿದೆ ಎಂದರು. ಇದೇ ವೇಳೆ ಜಿಮ್‌ನ ಮುಂದಿನ ಆವೃತ್ತಿಯು 2025ರ ಜನವರಿಯಲ್ಲಿ ನಡೆಯಲಿದೆ ಎಂದರು.
Advertisement