ಎಸಿಬಿ ರದ್ದು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಭ್ರಷ್ಟಚಾರ ನಿಗ್ರಹದಳ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪುನ್ನು ಪ್ರಶ್ನಿಸಿ ಖಾಸಗಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸರ್ವೋಚ್ಛ ನ್ಯಾಯಾಲಯ ಸೋಮವಾರ ನಿರಾಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭ್ರಷ್ಟಚಾರ ನಿಗ್ರಹದಳ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪುನ್ನು ಪ್ರಶ್ನಿಸಿ ಖಾಸಗಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸರ್ವೋಚ್ಛ ನ್ಯಾಯಾಲಯ ಸೋಮವಾರ ನಿರಾಕರಿಸಿದೆ.

ಈ ಹಿಂದೆ ಈ ಅರ್ಜಿಯ ವಿಚಾರಣೆ ಪಟ್ಟಿಗೆ ಸೇರಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿತ್ತು. ಆದರೆ ಇಂದು ಸಲ್ಲಿಸಿದ್ದ ಅರ್ಜಿಯ ಪರಿಶೀಲನೆ ನಡೆಸಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದೆ. 2016ರಲ್ಲಿ ಸ್ಥಾಪಿಸಲಾದ ಭ್ರಷ್ಟಚಾರ ನಿಗ್ರಹದಳ (ಎಸಿಬಿ)ವನ್ನು ರದ್ದುಗೊಳಿಸುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಕನಕರಾಜು ಎಂಬುವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಂದು ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಿ.ಟಿ. ರವಿ ಕುಮಾರ್ ಅವರ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದು ಈ ಅರ್ಜಿಯನ್ನು ವಿಚಾರಣೆಗಳ ಪಟ್ಟಿಗೆ ಸೇರಿಸಲು ಒಪ್ಪಿಗೆ ಸೂಚಿಸಿತ್ತು.

ಅರ್ಜಿದಾರ ಕನಕರಾಜು ಪರವಾಗಿ ವಕೀಲ ಅಶೋಕ್ ಪಾಣಿಗ್ರಾಹಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದರಿಂದಾಗಿ ಕಾನೂನು ಹೋರಾಟದಲ್ಲಿ ಕನಕರಾಜು ಅವರಿಗೆ ಹಿನ್ನೆಡೆಯಾಗಿದ್ದು, ತಮಗೆ ಲಂಚ ಬೇಡಿಕೆಯಿಟ್ಟಿದ್ದ ಬೆಸ್ಕಾಂ ವಿಚಕ್ಷಣ ದಳದ ಇಬ್ಬರು ಅಧಿಕಾರ ವಿರುದ್ಧ ಅರ್ಜಿದಾರರು ದೂರು ನೀಡಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ಎಸಿಬಿಯನ್ನು ರದ್ದುಗೊಳಿಸಿ, ಎಲ್ಲ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆ ಮಾಡಿತ್ತು.

ಈ ಹಂತದಲ್ಲಿ ಎಸಿಬಿ ರದ್ದುಗೊಳಿಸುವುದು ಆ ಪ್ರಕರಣಗಳಲ್ಲಿ ಲೋಕಾಯುಕ್ತಕ್ಕೆ ವರ್ಗಾಯಿಸುವುದರಿಂದ ಆರೋಪಿಗಳಿಗೆ ವರದಾನವಾಗುಬಹುದು. 1988ರ ಭ್ರಷ್ಟಚಾರ ಕಾಯ್ದೆಯಡಿ ನಡೆಯುತ್ತಿರುವ ವಿವಿಧ ಕ್ರಿಮಿನಲ್ ವಿಷಯಗಳ ತನಿಖೆ ಮತ್ತು ಅದರ ಪರಿಣಾಮ ಇತರ ಪ್ರಕರಣಗಳು ಅಪಾಯಕ್ಕೆ ಸಿಲುಕಲಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಭ್ರಷ್ಟ ರಾಜಕಾರಣಿಗಳು, ಸಚಿವರು ಮತ್ತು ಅಧಿಕಾರಿಗಳನ್ನು ಲೋಕಾಯುಕ್ತರ ಕಣ್ಗಾವಲಿನಿಂದ ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ ಎಸಿಬಿ ಯನ್ನು ಸ್ಥಾಪಿಸಿದೆ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡು ಆಗಸ್ಟ್ 11 ರಂದು ಎಸಿಬಿಯನ್ನು ರದ್ದುಪಡಿಸಿ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತ ವರ್ಗಾಯಿಸಿ ಮಹತ್ವದ ಆದೇಶ ಹೊರಡಿಸಿತ್ತು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಲೋಕಾಯುಕ್ತಕ್ಕಿದ್ದ ಅಧಿಕಾರವನ್ನು ಮೊಟಕುಗೊಳಿಸಿ, ಭ್ರಷ್ಟಚಾರ ನಿಗ್ರಹದಳ ಸ್ಥಾಪಿಸಿದ್ದರು. ರಾಜ್ಯ ಸರ್ಕಾರ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದೆ ಕೋರ್ಟ್ ಆದೇಶವನ್ನು ಅನುಷ್ಟಾನಗೊಳಿಸಿ ಎಸಿಬಿಯನ್ನು ರದ್ದುಪಡಿಸಿ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿ, ಆದೇಶ ಹೊರಡಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com