ಮುಂಬೈ-ಕರ್ನಾಟಕದ ಭಾಗದ ಅಭಿವೃದ್ದಿಯಲ್ಲಿ ಪ್ರಭಾಕರ್ ಕೋರೆ ಪ್ರಮುಖ ಪಾತ್ರ: ಸಿಎಂ ಬೊಮ್ಮಾಯಿ

ಮುಂಬೈ-ಕರ್ನಾಟಕದ ಭಾಗದ ಅಭಿವೃದ್ದಿಯಲ್ಲಿ ಪ್ರಭಾಕರ್ ಕೋರೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಳಗಾವಿ: ಮುಂಬೈ-ಕರ್ನಾಟಕದ ಭಾಗದ ಅಭಿವೃದ್ದಿಯಲ್ಲಿ ಪ್ರಭಾಕರ್ ಕೋರೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಅವರು, 'ಮುಂಬೈ ಕರ್ನಾಟಕದಲ್ಲಿ ಆರೋಗ್ಯ, ಶಿಕ್ಷಣ, ಕೃಷಿ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಗಮನಾರ್ಹ ಕಾರ್ಯನಿರ್ವಹಿಸುವಲ್ಲಿ ಸಮಯ ಕೊಡುವ ಡಾ. ಪ್ರಭಾಕರ ಕೋರೆ ಅವರು, ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಮಯ ನೀಡಿದ್ದರೆ ಅತ್ಯಂತ ಪ್ರಭಾವಿ ನಾಯಕರಾಗುತ್ತಿದ್ದರು. ಆದರೆ ಕೋರೆ ಅವರು ಅದನ್ನು ಕಡೆಗಣಿಸಿ ತಾನೊಬ್ಬ ನಾಯಕನಾಗದೇ ಕೆಎಲ್‌ಇ ಸಂಸ್ಥೆ ಮೂಲಕ ನಾಯಕರನ್ನು ಬೆಳೆಸುತ್ತಿದ್ದಾರೆ ಎಂದು ಹೇಳಿದರು. 

ತಮ್ಮ ಬುದ್ಧಿ ಶಕ್ತಿಯಿಂದ ಎದುರಾದ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಂಡು ಸರ್ವ ಸ್ವತಂತ್ರ ಸಂಸ್ಥೆಯಾಗಿ ಕೆಎಲ್‌ ಇಯನ್ನು ಬೆಳೆಸಿದ್ದಾರೆ. ಕೆಎಲ್‌ಇ ಸಂಸ್ಥೆ ದೇಶದಲ್ಲೇ ದೊಡ್ಡ ವಿವಿಯಾಗಿ ಪರಿವರ್ತನೆಯಾಗಿದೆ. ಗ್ರಾಮೀಣ ಬಡ ಜನರಿಗೆ ಶಿಕ್ಷಣ ಒದಗಿಸುವುದು ಕೋರೆ ಅವರ ಮುಖ್ಯ ಗುರಿಯಾಗಿತ್ತು. ತಮ್ಮ ರಾಜಕೀಯ ಜೀವನ ತ್ಯಾಗದ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಿ ಈ ಸಾಧನೆಯ ಶಿಖರವನ್ನು ಏರಿದ್ದಾರೆ. ಸರ್ಕಾರ ಮಾಡುವ ಅನೇಕ ಕೆಲಸಗಳನ್ನು ಕೆಎಲ್‌ಇ ಮಾಡಿದೆ. ಈ ಸಂಸ್ಥೆಯ ಪ್ರೇರಣೆಯಿಂದ ಅನೇಕ ಸೊಸೈಟಿ, ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿ ಉತ್ತಮ ಸೇವೆ ನೀಡುತ್ತಿವೆ. ಪ್ರಭಾಕರ ಕೋರೆ ಅವರು ಈ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ ಎಂದರು.

ಕೇಂದ್ರ ಶಿಕ್ಷಣ ಹಾಗೂ ಉದ್ಯಮಶೀಲ ಮತ್ತು ಕೌಶಲ ಸಚಿವ ಧಮೇಂದ್ರ ಪ್ರಧಾನ್‌ ಮಾತನಾಡಿ, ಕೋರೆ ಅವರು ಓರ್ವ ಜೀವಂತ ವಿವಿ. 4 ದಶಕಗಳಿಂದ ಕೆಎಲ್‌ಇ ಮೂಲಕ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆಎಲ್‌ಇಯ ಹೆಸರನ್ನು ಜಗತ್ಪ್ರಸಿದ್ಧಗೊಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಈಗ ರಚಿಸಲಾಗಿದೆ. ಆದರೆ, 1000 ವರ್ಷಗಳ ಮೊದಲೇ ಈ ನೀತಿಗಳು ಅದರಲ್ಲಿ ಇದ್ದವು ಎಂದರು. ಬಸವಣ್ಣವರು ವಚನಗಳ ಮೂಲಕ ಕ್ರಾಂತ್ರಿ ಮೂಡಿಸಿದ ನೆಲದಲ್ಲಿ ಕೋರೆ ಅವರು ಶಿಕ್ಷಣ ಹಾಗೂ ಆರೋಗ್ಯದ ಮೂಲಕ ಕ್ರಾಂತಿ ಮೂಡಿಸುತ್ತಿದ್ದಾರೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ನಿಜವಾದ ಸತ್ಪರುಷರು ಎಂದರೆ, ಮಾತು, ಮನಸ್ಸು ಮತ್ತು ಕೃತಿಯಲ್ಲಿ ಒಂದೇ ಆಗಿರುವವರು. ಡಾ. ಪ್ರಭಾಕರ ಕೋರೆ ಅವರು ಇದಕ್ಕೆ ಉದಾಹರಣೆಯಾಗಿದ್ದಾರೆ ಎಂದರು. ಈ ಹಿಂದೆ ಕೆಎಲ್‌ಇ ಸಂಸ್ಥಗೆ ಪ್ರಧಾನಿ ಮೋದಿ ಅವರು ಆಗಮಿಸಿದ್ದ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯಿಂದ ಓಲಂಪಿಕ್ಸ್‌ಗೆ ಕನಿಷ್ಠ ನಾಲ್ಕು ಜನರನ್ನಾದರೂ ಕಳುಹಿಸುವಂತೆ ತರಬೇತಿ ನೀಡುವಂತೆ ತಿಳಿಸಿದ್ದರು. ಮೋದಿ ಅವರ ಮಾತಿನಂತೆ ಓಲಂಪಿಕ್ಸ್‌ಗೆ ಕಳುಹಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ, ಮಾಜಿ ಸಚಿವ ಆರ್‌.ವಿ.ದೇಶಪಾಂಡೆ, ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಕೆ ಪಾಟೀಲ ಸೇರಿದಂತೆ ಇನ್ನೀತರರು ಮಾತನಾಡಿ, ಕೋರೆ ಅವರೊಂದಗಿನ ಒಡನಾಟವನ್ನು ಸ್ಮರಿಸಿ ಶುಭ ಹಾರೈಯಿಸಿದರು.ಇದೇ ಸಂದರ್ಭದಲ್ಲಿ ಡಾ. ಪ್ರಭಾಕರ ಕೋರೆ ಅವರಿಗೆ ಗ್ರಂಥ, ಪುಸ್ತಕಗಳ ತುಲಾಭಾರ ಮಾಡಲಾಯಿತು. ಡಾ.ಪ್ರಭಾಕರ ಕೋರೆ 75ನೇ ಅಮೃತ ಮಹೋತ್ಸವ ಅಂಗವಾಗಿ ಅವರ ಜೀವನ ಚರಿತ್ರೆ, ವಿವಿಧ ಕ್ಷೇತ್ರಗಳಲ್ಲಿ ಸಾಧೆಗೈದ ಕುರಿತು ಅನನ್ಯ ಸಾಧನೆ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ.ಪ್ರಭಾಕರ ಕೋರೆ ಹಾಗೂ ಪತ್ನಿ ಆಶಾ ಕೋರೆ ಅವರಿಗೆ ಗೌರವಿಸಿ, ಸನ್ಮಾನಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com