ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಮುಖ್ಯದ್ವಾರದಲ್ಲಿ 'ನ್ಯಾಯಾಧೀಶರಿಗೆ ಮಾತ್ರ ಪ್ರವೇಶ' ಫಲಕ; ಮಂಗಳೂರು ವಕೀಲರ ಸಂಘ ವಿರೋಧ

ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಕಟ್ಟಡದ ಮುಖ್ಯ ದ್ವಾರದಲ್ಲಿ ಏಕಾಏಕಿಯಾಗಿ ‘ನಿರ್ಬಂಧಿತ ಪ್ರವೇಶ - ನ್ಯಾಯಾಧೀಶರಿಗೆ ಮಾತ್ರ ಪ್ರವೇಶʼ ಎಂಬ ಫಲಕ ಹಾಕಿರುವುದಕ್ಕೆ ಮಂಗಳೂರು ವಕೀಲರ ಸಂಘ ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ
ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ
Updated on

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಕಟ್ಟಡದ ಮುಖ್ಯ ದ್ವಾರದಲ್ಲಿ ಏಕಾಏಕಿಯಾಗಿ ‘ನಿರ್ಬಂಧಿತ ಪ್ರವೇಶ - ನ್ಯಾಯಾಧೀಶರಿಗೆ ಮಾತ್ರ ಪ್ರವೇಶʼ ಎಂಬ ಫಲಕ ಹಾಕಿರುವುದಕ್ಕೆ ಮಂಗಳೂರು ವಕೀಲರ ಸಂಘ ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

"ಫಲಕ ಹಾಕಿರುವ ವಿಚಾರ ವಕೀಲರ ಗಮನಕ್ಕೆ ಬಂತು. ಅನೌಪಚಾರಿಕವಾಗಿ ಜಿಲ್ಲಾ ನ್ಯಾಯಾಧೀಶರಾದ ರವೀಂದ್ರ ಎಂ ಜೋಷಿ ಅವರನ್ನು ವಕೀಲರ ಸಂಘದ ತುರ್ತು ಸಮಿತಿ ಭೇಟಿಯಾದಾಗ ಅವರು ಭದ್ರತಾ ಪರಿಶೀಲನಾ ಸಮಿತಿ ಸಭೆ ಬಳಿಕ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು” ಎಂದು ಸಂಘದ ಕಾರ್ಯದರ್ಶಿಯಾದ ಶ್ರೀಧರ ಎಣ್ಮಕಜೆ ಅವರು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, 'ಫಲಕದಲ್ಲಿ ತಿಳಿಸಿರುವ ಪ್ರಕಾರ ಸಾರ್ವಜನಿಕರೊಟ್ಟಿಗೆ ವಕೀಲರಿಗೂ ನಿರ್ಬಂಧವಿದೆ. ಆದರೆ ವಕೀಲರಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ನ್ಯಾಯಾಧೀಶರು ಮೌಖಿಕವಾಗಿ ಹೇಳಿದ್ದಾರೆ. ಹಾಗಾದರೆ ಪೋಸ್ಟರ್‌ ತೆಗೆದುಹಾಕಿ ಎಂಬ ವಕೀಲರ ಮನವಿಗೆ ಸೂಕ್ತ ಸ್ಪಂದನೆ ದೊರೆತಿಲ್ಲ. ಮುಂದಿನ ಭದ್ರತಾ ಪರಿಶೀಲನಾ ಸಭೆ ವೇಳೆ ಪರಿಶೀಲಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ ಎಂದು ಹೇಳಿದರು,

ಅಂತೆಯೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಟ್ಟಿಗೆ ನಡೆಯುವ ಈ ಸಭೆ ಮತ್ತೆ ಆಯೋಜನೆಯಾಗುವುದು ಒಂದು ಅಥವಾ ಎರಡು ತಿಂಗಳ ಬಳಿಕ ಎಂಬ ಮಾಹಿತಿ ನ್ಯಾಯಾಧೀಶರಿಂದ ದೊರೆತಿದೆ. ನಿರ್ಬಂಧ ಜಾರಿಯಾದರೆ ಅಷ್ಟು ದಿನಗಳ ಕಾಲ  ವಕೀಲರು ತೊಂದರೆ ಎದುರಿಸುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ದೂರು ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸಂಘದ ಅಧ್ಯಕ್ಷರಾದ ಕೆ ಪೃಥ್ವಿರಾಜ್‌ ರೈ ಅವರ ನೇತೃತ್ವದಲ್ಲಿ ಸಮಿತಿ ಮಂಗಳವಾರ ಮತ್ತೆ ಸಭೆ ಸೇರಲಿದ್ದು ಎಲ್ಲಾ ವಕೀಲರನ್ನು ಸಭೆಗೆ ಆಹ್ವಾನಿಸಲಾಗುತ್ತಿದೆ. ಆಗ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಮುಖ್ಯ ಪ್ರವೇಶ ದ್ವಾರ ಸಾರ್ವಜನಿಕ ಸ್ಥಳವಾಗಿದ್ದು ಅಲ್ಲಿ ನಿರ್ಬಂಧ ವಿಧಿಸಿರುವುದಕ್ಕೆ ಮಂಗಳೂರಿನ ವಕೀಲ ಸುಕೇಶ್‌ ಶೆಟ್ಟಿ ಅವರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. 'ವಕೀಲರನ್ನು ನ್ಯಾಯಾಲಯ ಅಧಿಕಾರಿಗಳು ಎಂದು ಕೂಡ ಕರೆಯುತ್ತಾರೆ. ನ್ಯಾಯಾಧೀಶರುಗಳು ಕೂಡ ಒಂದೊಮ್ಮೆ ವಕೀಲರೇ ಆಗಿದ್ದವರು. ನ್ಯಾಯದಾನ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಮಹತ್ವವಾದುದು. ಅವರನ್ನು ಕೀಳರಿಮೆಯಿಂದ ಕಾಣುವುದು ಸರಿಯಲ್ಲ. ನ್ಯಾಯಾಧೀಶರು ಮತ್ತು ವಕೀಲ ವರ್ಗದ ಉತ್ತಮ ಬಾಂಧವ್ಯದ ನಿಟ್ಟಿನಲ್ಲಿ ನ್ಯಾಯಾಧೀಶರು ಸೂಕ್ತ ಕ್ರಮ ಕೈಗೊಳ್ಳyಬೇಕು ಎಂದು ಆಶಿಸುವೆ” ಎಂದು ಅವರು ಹೇಳಿದರು.

ಬಗೆಹರಿದ ವಿವಾದ
ಸಂಜೆಯ ಹೊತ್ತಿಗೆ ವಿವಾದಕ್ಕೆ ತೆರೆ ಬಿದ್ದಿದೆ. “ರಿಜಿಸ್ಟ್ರಾರ್‌ ಜನರಲ್‌ ಅವರು ನ್ಯಾಯಾಧೀಶರು ಮತ್ತು ವಕೀಲ ವರ್ಗದ ನಡುವಣ ಸಂಘರ್ಷಕ್ಕೆ ತೆರೆ ಎಳೆಯುವುದಾಗಿ ಭರವಸೆ ನೀಡಿದ್ದಾರೆ. ಫಲಕ ಬದಲಾವಣೆ ಮಾಡುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ. ವಕೀಲರು ಮುಖ್ಯದ್ವಾರ ಬಳಕೆಯನ್ನು ಮುಂದುವರೆಸಬಹುದು” ಎಂದು ಸಂಘದ ಮಾಧ್ಯಮ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com