ಪಿಎಸ್‌ಐ ನೇಮಕಾತಿ ಪ್ರಕರಣ: ಎಲ್ಲಾ ದಾಖಲೆ ಸಲ್ಲಿಸುವಂತೆ ಎಸಿಎಂಎಂಗೆ ವಿಶೇಷ ನ್ಯಾಯಾಲಯ ನಿರ್ದೇಶನ
ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಪಿಎಸ್ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಎಸಿಎಂಎಂಗೆ ವಿಶೇಷ ನ್ಯಾಯಾಲಯ ನಿರ್ದೇಶನ ನೀಡಿದೆ.
Published: 16th October 2022 12:53 PM | Last Updated: 16th October 2022 12:53 PM | A+A A-

ಪೊಲೀಸ್ (ಸಾಂಕೇತಿಕ ಚಿತ್ರ)
ಬೆಂಗಳೂರು: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಪಿಎಸ್ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಎಸಿಎಂಎಂಗೆ ವಿಶೇಷ ನ್ಯಾಯಾಲಯ ನಿರ್ದೇಶನ ನೀಡಿದೆ.
ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ (ಪಿಸಿ) ಕಾಯಿದೆಯ ವಿವಿಧ ಸೆಕ್ಷನ್‌ಗಳನ್ನು ಸೇರಿಸಿರುವುದರಿಂದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವರ್ಗಾಯಿಸುವಂತೆ ಬೆಂಗಳೂರಿನ ಒಂದನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯಕ್ಕೆ ಪಿಸಿ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯವು ಆದೇಶಿಸಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣ: ಆರೋಪಿಗಳ ಆಸ್ತಿ, ಹಣಕಾಸು ವ್ಯವಹಾರದ ಬಗ್ಗೆ ತನಿಖೆಗೆ ಇಡಿ ಎಂಟ್ರಿ!
ಸಿಐಡಿಯ ಡಿವೈಎಸ್‌ಪಿ ಬಿ ಕೆ ಶೇಖರ್ ಅವರು ಪಿಎಸ್‌ಐ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ತರಿಸಿಕೊಳ್ಳುವಂತೆ ವಿಶೇಷ ನ್ಯಾಯಾಲಯಕ್ಕೆ ಕೋರಿದ್ದರು. ತನಿಖಾಧಿಕಾರಿಯ ಕೋರಿಕೆಯನ್ನು ವಿಶೇಷ ನ್ಯಾಯಾಲಯ ಅನುಮತಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಆದೇಶಿಸಿದೆ. ಹೀಗಾಗಿ, ಇಡೀ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಕೋರುತ್ತೇನೆ ಎಂದು ವಿಶೇಷ ನ್ಯಾಯಾಲಯದ ಶಿರಸ್ತೇದಾರ್ ಅವರು ಈಚೆಗೆ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಪತ್ರ ಬರೆದಿದ್ದಾರೆ.
ಪಿಎಸ್‌ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಸಿ ಕಾಯಿದೆಯ ವಿವಿಧ ಸೆಕ್ಷನ್‌ಗಳನ್ನು ಅಳವಡಿಸಿರುವುದರಿಂದ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್, ಆರೋಪ ಪಟ್ಟಿ ಮತ್ತು ಇತರೆ ದಾಖಲೆಗಳನ್ನು ಒಂದನೇ ಎಸಿಎಂಎಂನಿಂದ ತರಿಸಿಕೊಳ್ಳುವಂತೆ ಸಿಐಡಿ ಡಿವೈಎಸ್‌ಪಿ ಬಿ ಕೆ ಶೇಖರ್ ಅವರು ವಿಶೇಷ ನ್ಯಾಯಾಲಯಕ್ಕೆ ಕೋರಿದ್ದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ: ಅಕ್ಟೋಬರ್ ಗೆ ಚಾರ್ಜ್ ಶೀಟ್; ಮರುಪರೀಕ್ಷೆ ದಿನಾಂಕ ಶೀಘ್ರ ಪ್ರಕಟ- ಡಿಜಿಪಿ ಪ್ರವೀಣ್ ಸೂದ್
ಡಿವೈಎಸ್‌ಪಿ ನರಸಿಂಹಮೂರ್ತಿ 2022ರ ಏಪ್ರಿಲ್ 29ರಂದು ಹೈಗ್ರೌಂಡ್ಸ್ ಠಾಣೆಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ 22 ಮಂದಿಯ ವಿರುದ್ದ ದೂರು ನೀಡಿದ್ದರು. ಆನಂತರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದ್ದು, ಡಿವೈಎಸ್‌ಪಿ ಬಿ ಕೆ ಶೇಖರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 27ರಂದು ಮೊದಲ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮಾನತುಗೊಂಡಿರುವ ಎಡಿಜಿಪಿ ಅಮೃತ್ ಪೌಲ್ ವಿರುದ್ಧ ಸೆಪ್ಟೆಂಬರ್ 28ರಂದು ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣ ಪೊಲೀಸರು, ಮಧ್ಯವರ್ತಿಗಳು, ಅಭ್ಯರ್ಥಿಗಳನ್ನು ಒಳಗೊಂಡ ಜೇಡರ ಬಲೆ: ಪ್ರಾಸಿಕ್ಯೂಟರ್
ಪ್ರಕರಣದಲ್ಲಿ 25, 26, 28, 31, 32, 33, 34ನೇ ಆರೋಪಿಗಳು ಪೊಲೀಸ್ ಅಧಿಕಾರಿಗಳಾಗಿದ್ದು, 29 ಮತ್ತು 30ನೇ ಆರೋಪಿಗಳು ಪೊಲೀಸ್ ಇಲಾಖೆಯಲ್ಲಿ ಲಿಪಿಕ ಸಿಬ್ಬಂದಿಯಾಗಿದ್ದಾರೆ. ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 170 ಮತ್ತು ಸಿಆರ್‌ಪಿಸಿ ಸೆಕ್ಷನ್ 197 ಅಡಿ ಅಧಿಕಾರಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ರಾಜ್ಯ ಸರ್ಕಾರವು ಅಭಿಯೋಜನಾ ಮಂಜೂರಾತಿ ನೀಡಿದೆ. ಪೊಲೀಸ್ ನೇಮಕಾತಿ ವಿಭಾಗದ ಅಧಿಕಾರಿಗಳು ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ರೂ. 3.12 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಅಡಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ. ಹೀಗಾಗಿ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಎಸಿಎಂಎಂ ನ್ಯಾಯಾಲಯದಿಂದ ತರಿಸಿಕೊಂಡು, ಪ್ರಕ್ರಿಯೆ ಮುಂದುವರಿಸುವಂತೆ ತನಿಖಾಧಿಕಾರಿ ಕೋರಿಕೆ ಸಲ್ಲಿಸಿದ್ದರು. ಇದನ್ನು ವಿಶೇಷ ನ್ಯಾಯಾಲಯವು ಪುರಸ್ಕರಿಸಿದೆ.