ಹೆಲ್ಮೆಟ್‌ ಧರಿಸದಿದ್ದಕ್ಕೆ ದಂಡ: ಸಾಕ್ಷ್ಯ ಕೇಳಿದ ವ್ಯಕ್ತಿಗೆ ಫೋಟೋ ಸಹಿತ ಉತ್ತರ ನೀಡಿದ ಬೆಂಗಳೂರು ಟ್ರಾಫಿಕ್‌ ಪೊಲೀಸ್‌!

ಹೆಲ್ಮೆಟ್‌ ಧರಿಸದಿದ್ದಕ್ಕೆ ದಂಡ ಹಾಕಿದ್ದ ಪೊಲೀಸರಿಗೆ ಸಾಕ್ಷ್ಯ ಕೇಳಿದ ವ್ಯಕ್ತಿಗೆ ಫೋಟೋ ಸಹಿತ ಟ್ರಾಫಿಕ್‌ ಪೊಲೀಸರು ಖಡಕ್ ಉತ್ತರ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪೊಲೀಸರಿಂದ ಸಾಕ್ಷ್ಯಕೇಳಿ ಪೇಚಿಗೆ ಸಿಲುಕಿದ ವ್ಯಕ್ತಿ
ಪೊಲೀಸರಿಂದ ಸಾಕ್ಷ್ಯಕೇಳಿ ಪೇಚಿಗೆ ಸಿಲುಕಿದ ವ್ಯಕ್ತಿ

ಬೆಂಗಳೂರು: ಹೆಲ್ಮೆಟ್‌ ಧರಿಸದಿದ್ದಕ್ಕೆ ದಂಡ ಹಾಕಿದ್ದ ಪೊಲೀಸರಿಗೆ ಸಾಕ್ಷ್ಯ ಕೇಳಿದ ವ್ಯಕ್ತಿಗೆ ಫೋಟೋ ಸಹಿತ ಟ್ರಾಫಿಕ್‌ ಪೊಲೀಸರು ಖಡಕ್ ಉತ್ತರ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ಬೆಂಗಳೂರು ಸಂಚಾರ ಪೊಲೀಸರು ದಂಡ ಕಟ್ಟಲು ಚಲನ್ ನೀಡಿದ್ದರು. ತನ್ನ ತಪ್ಪನ್ನು ಒಪ್ಪಿ ದಂಡ ಕಟ್ಟುವ ಬದಲು, ನಿಯಮ ಉಲ್ಲಂಘಿಸಿದ ʼಸಾಕ್ಷ್ಯ ನೀಡಿʼ ಎಂದು ಚಲನ್‌ ಸ್ವೀಕರಿಸಿದ ವ್ಯಕ್ತಿ ಪೊಲೀಸರಿಗೆ ಸವಾಲು ಹಾಕಿ ಪೇಚಿಗೆ ಸಿಲುಕಿದ್ದಾರೆ. ಇದಾಗಿ, ಕೆಲವೇ ನಿಮಿಷಗಳಲ್ಲಿ ಪೊಲೀಸರು ವ್ಯಕ್ತಿ ಸಂಚಾರಿ ನಿಯಮ ಉಲ್ಲಂಘಿಸಿದ ಫೋಟೋವನ್ನು ಸರಣಿ ಟ್ವೀಟ್‌ ಮೂಲಕವೇ ಬಹಿರಂಗಪಡಿಸಿದ್ದಾರೆ.

ಬೆಂಗಳೂರಿನ ಫೆಲಿಕ್ಸ್ ರಾಜ್ ಎಂಬುವವರಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ಚಲನ್ ಜಾರಿ ಮಾಡಲಾಗಿತ್ತು. ದಂಡದ ಬಗ್ಗೆ ಅಸಮಾಧಾನಗೊಂಡಿದ್ದ ಆತ ಪೊಲೀಸರಲ್ಲಿ ಸಾಕ್ಷ್ಯ ಕೇಳಲು ನಿರ್ಧರಿಸಿದ್ದ. ಪೊಲೀಸರು ಆರಂಭದಲ್ಲಿ ಕಳಿಸಿದ್ದ ಫೋಟೋದಲ್ಲಿ ಕೇವಲ ವಾಹನದ ನಂಬರ್‌ ಪ್ಲೇಟ್‌ ಮಾತ್ರ ಇತ್ತು. ಆದರೆ, ಅವರು ಹೆಲ್ಮೆಟ್‌ ಧರಿಸದೆ ಇರುವುದು ಆ ಫೋಟೋದಲ್ಲಿ ಕಾಣಿಸುತ್ತಿರಲಿಲ್ಲ. ಸಾಕ್ಷ್ಯ ಕೇಳಿದ ಬೆನ್ನಿಗೆ ಫೋಟೋದ ಸಂಪೂರ್ಣ ಭಾಗವನ್ನು ಪೊಲೀಸರು ಅಪ್ಲೋಡ್ ಮಾಡಿದ್ದಾರೆ.

"ಹಲೋ @blrcitytraffic @BlrCityPolice ನಾನು ಹೆಲ್ಮೆಟ್ ಧರಿಸಿಲ್ಲ ಎಂಬುದಕ್ಕೆ ಯಾವುದೇ ಸರಿಯಾದ ಪುರಾವೆಗಳಿಲ್ಲ. ದಯವಿಟ್ಟು ಸರಿಯಾದ ಚಿತ್ರವನ್ನು ಒದಗಿಸಿ ಅಥವಾ ಪ್ರಕರಣವನ್ನು ತೆಗೆದುಹಾಕಿ. ಮೊದಲು ಕೂಡ ಇದೇ ವಿಷಯ ಸಂಭವಿಸಿದೆ. ಆಗ ನಾನು ದಂಡ ಪಾವತಿಸಿದ್ದೇನೆ. ಈಗ ನಾನು ಮತ್ತೊಮ್ಮೆ ದಂಡವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಫೆಲಿಕ್ಸ್ ರಾಜ್‌ ಟ್ವೀಟ್‌ ಮಾಡಿದ್ದರು. ಇದಕ್ಕೆ ಪೊಲೀಸರು ಕೂಡ ಸೂಕ್ತ ರೀತಿಯಲ್ಲೇ ಪ್ರತಿಕ್ರಿಯೆ ನೀಡಿದ್ದು, ಫೆಲಿಕ್ಸ್ ರಾಜ್ ಹೆಲ್ಮೆಟ್ ಧರಿಸದೇ ಗಾಡಿ ಚಲಾಯಿಸಿರುವ ಫೋಟೋ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಬಂದ ಬೆನ್ನಿಗೆ ತಮ್ಮ ತಪ್ಪಿನ ಅರಿವಾಗಿ ಆ ಟ್ವೀಟನ್ನು ಡಿಲಿಟ್‌ ಮಾಡಿದ್ದಾರೆ.

ಅಲ್ಲದೆ ತಮ್ಮ ಗೊಂದಲ ನಿವಾರಿಸಿದ ಪೊಲೀಸರಿಗೆ ಧನ್ಯವಾದ ಹೇಳಿರುವ ಅವರು, "ಸಾಕ್ಷ್ಯಕ್ಕಾಗಿ ಧನ್ಯವಾದಗಳು. ಪ್ರತಿಯೊಬ್ಬ ಸಾಮಾನ್ಯ ಸಾರ್ವಜನಿಕವಾಗಿ ಇದನ್ನು ಕೇಳುವ ಹಕ್ಕು ಇದೆ. ಈ ಬಗ್ಗೆ ಸ್ಪಷ್ಟಪಡಿಸಿದ್ದಕ್ಕಾಗಿ @blrcitytraffic ಅನ್ನು ನಾನು ಪ್ರಶಂಸಿಸುತ್ತೇನೆ. ನಾನು ದಂಡವನ್ನು ಪಾವತಿಸುತ್ತೇನೆ. “ಎಂದು ಇನ್ನೊಂದು ಟ್ವೀಟ್‌ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com