ಬೆಂಗಳೂರು/ಮೈಸೂರು: ಕಬ್ಬಿನ ಗದ್ದೆಯಲ್ಲಿ ಚಿರತೆಯೊಂದು ಎರಡು ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳ ಕೂಗು ಕೇಳಿದ ಕಬ್ಬಿನ ಗದ್ದೆ ಮಾಲೀಕರು ಗ್ರಾಮಸ್ಥರಿಗೆ ಮಾಹಿತಿ ನೀಡಿ ನಂತರ ಚಿರತೆ ಹಾಗೂ ಅದರ ಮರಿಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಮೈಸೂರಿನ ಟಿ.ನರಸೀಪುರದಲ್ಲಿ ನಡೆದಿದೆ.
ಚಿರತೆ ಶಬ್ಧ ಕೇಳಿದ ಕಬ್ಬಿನ ಗದ್ದೆ ಮಾಲೀಕರು ಭಯಭೀತರಾಗಿದ್ದರು. ನಂತರ ಈ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಚಿರತೆ ಹಾಗೂ ಮರಿಗಳನ್ನು ಅಧಿಕಾರಿಗಳ ವಶಕ್ಕೆ ನೀಡಿದರು.
ಸೋಸಲೆ ಹೋಬಳಿಯ ಕೆಂಪಾಪುರದ ರೈತ ಶಂಕರ ಚಿಕ್ಕಣ್ಣ ಅವರು ಮಾತನಾಡಿ, ಈ ಹಿಂದೆ ನಾನು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೆ. 11 ದಿನಗಳ ಹಿಂದೆ ಚಿರತೆ ತನ್ನ ಜಮೀನಿನಲ್ಲಿದ್ದ ನಾಯಿಗಳನ್ನು ಹೊತ್ತೊಯ್ದಿರುವುದಾಗಿ ತಿಳಿಸಿದ್ದೆ ಎಂದು ಹೇಳಿದ್ದಾರೆ.
ಮತ್ತೋರ್ವ ರೈತ ಜಗನ್ನಾಥ್ ಕೆ ಮಾತನಾಡಿ, ಚಿರತೆ ಮುಧೋಳ ನಾಯಿಯನ್ನು ಕೊಂದು ಹಾಕಿತ್ತು. ನಾಯಿಯ ಮೇಲೆ ಚಿರತೆ ದಾಳಿ ನಡೆಸುತ್ತಿರುವುದು ಅವರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು. ಸುಮಾರು 30 ಕಿ.ಮೀ ದೂರದಲ್ಲಿರುವ ಕೆಆರ್‌ಎಸ್ ಅಣೆಕಟ್ಟೆಯ ಬೃಂದಾವನ ಗಾರ್ಡನ್ಸ್‌ನಲ್ಲಿ ಚಿರತೆ ಕಾಣಿಸಿಕೊಂಡಿರುವುದು ಜನರ ಭಯವನ್ನು ಮತ್ತಷ್ಟು ಹೆಚ್ಚಿಸಿದೆ. ಕೂಲಿ ಕಾರ್ಮಿಕರು ಇದೀಗ ಹೊಲಗಳಲ್ಲಿ ಕೆಲಸ ಮಾಡಲು ಹೆದರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಪಿಸಿಸಿಎಫ್ ವಿಜಯ್ ಗೋಗಿ ಮತ್ತು ಎಪಿಸಿಸಿಎಫ್ ಕುಮಾರ್ ಪುಷ್ಕರ್ ಅವರನ್ನು ಸಂಪರ್ಕಿಸಲು ಯತ್ನ ನಡೆಸಲಾಗಿದೆ. ಆದರೂ ಇಬ್ಬರೂ ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ.
ಸಚಿವ ಉಮೇಶ ಕತ್ತಿ ಅವರು ಇತ್ತೀಚೆಗೆ ನಿಧನರಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರಣ್ಯ ಖಾತೆಯನ್ನು ನಿಭಾಯಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಇತರೆ ಕಾರ್ಯಗಳಲ್ಲಿ ನಿರತರಾಗಿರುವ ಕಾರಣ ಇಲಾಖೆಗೆ ಸಂಬಂಧಿಸಿದ ಪ್ರಮುಖ ಕಡತಗಳು ಬಾಕಿ ಉಳಿದಿವೆ. ಅವುಗಳ ಜವಾಬ್ದಾರಿಯನ್ನು ಸಮರ್ಥ ವ್ಯಕ್ತಿಗೆ ಹಸ್ತಾಂತರಿಸಬೇಕೆಂಬ ಬೇಡಿಕೆಗಳು ಕೇಳಿ ಬರುತ್ತಿವೆ.
Advertisement