ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಕಾಮಗಾರಿಯಲ್ಲಿ ಹಗರಣ ಆರೋಪ: ಸಿಬಿಐ ತನಿಖೆಗೆ ಮಾಗಡಿ ಶಾಸಕ ಆಗ್ರಹ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಕಾಮಗಾರಿಯಲ್ಲಿ ದೊಡ್ಡ ಹಗರಣವೇ ನಡೆದಿದ್ದು, ಇದರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮಾಗಡಿ ಕ್ಷೇತ್ರದ ಜೆಡಿಎಸ್‍ ಶಾಸಕ ಎ.ಮಂಜುನಾಥ್ ಆಗ್ರಹಿಸಿದ್ದಾರೆ.
ಮಾಗಡಿ ಶಾಸಕ ಎ.ಮಂಜುನಾಥ್
ಮಾಗಡಿ ಶಾಸಕ ಎ.ಮಂಜುನಾಥ್
Updated on

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಕಾಮಗಾರಿಯಲ್ಲಿ ದೊಡ್ಡ ಹಗರಣವೇ ನಡೆದಿದ್ದು, ಇದರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮಾಗಡಿ ಕ್ಷೇತ್ರದ ಜೆಡಿಎಸ್‍ ಶಾಸಕ ಎ.ಮಂಜುನಾಥ್ ಆಗ್ರಹಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು, ಭೂ ಪರಿಹಾರ ಹಾಗೂ ಹೆದ್ದಾರಿ ಅವ್ಯವಹಾರದ ಬಗ್ಗೆ ಇಡಿ ಹಾಗೂ ಸಿಬಿಐ ತನಿಖೆಯಾಗಬೇಕು. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಶಾಸಕರ ನಿಯೋಗ ಸೆಪ್ಟೆಂಬರ್ 7 ರಂದು ದೆಹಲಿಗೆ ತೆರಳಿ ಕೇಂದ್ರದ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ದೂರು ನೀಡಿ ಚರ್ಚಿಸಲಾಗುವುದು. ಅದಕ್ಕಾಗಿ ಗಡ್ಕರಿ ಅವರ ಸಮಾಯವಕಾಶ ಕೇಳಲಾಗಿದೆ ಎಂದು ಹೇಳಿದರು.

ಮಳೆಯಿಂದಾಗಿ ಹೆದ್ದಾರಿ ಹಾನಿಯಾಗಿದೆ. ಇಡೀ‌ ರಸ್ತೆಯುದ್ಧಕ್ಕೂ ಮಳೆಯಿಂದ ನೀರು ತುಂಬಿದೆ. ಆ ಭಾಗದ ರೈತರು, ಜನರಿಗೆ ಅನಾನುಕೂಲವಾಗಿದೆ. ನಾನು ಆ ಭಾಗದ ಜನಪ್ರತಿನಿಧಿಯಾಗಿದ್ದೇನೆ. ನಾವು ಕಳೆದ ನಾಲ್ಕು ವರ್ಷಗಳ ಹಿಂದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಸಿದ್ದೆವು. ಅವರ ದುರ್ನಡತೆಯಿಂದಾಗಿ ಈ ಸ್ಥಿತಿ ತಲುಪಿದೆ ಎಂದು ಹೆದ್ದಾರಿ ಕಾಮಗಾರಿ ಬಗ್ಗೆ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಭೂ ಸ್ವಾಧೀನ ಪರಿಹಾರದಲ್ಲೂ ಲೋಪ:  ಭೂ ಸ್ವಾಧೀನ ವೇಳೆ ರೈತರ ಮನವೊಲಿಸಿದ್ದೆವು. ಭೂ ಪರಿಹಾರ ಕೊಡಿಸುತ್ತೇವೆಂದು ಮನವಿ ಮಾಡಿದ್ದೆವು. ಎಲ್ಲರ ಸಹಕಾರವನ್ನು ಪಡೆದಿದ್ದೆವು. ಭೂ ಸ್ವಾಧೀನ ಪರಿಹಾರದಲ್ಲೂ ಲೋಪವಾಗಿದೆ. ಹೆದ್ದಾರಿ ಪ್ರಾಧಿಕಾರಕ್ಕೆ ಗಮನಕ್ಕೆ ತಂದರೂ ಪರಿಹಾರ ಆಗಲಿಲ್ಲ. ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಎಂಬ ವ್ಯಕ್ತಿಯಿಂದ ಹೀಗಾಗಿದೆ. ಆ ವ್ಯಕ್ತಿಯಿಂದ ಭೂಮಿ ಕಳೆದುಕೊಂಡ ರೈತರಿಗೆ ಭಾರೀ ಅನ್ಯಾಯ ಆಗಿದೆ ಎಂದು ಆರೋಪಿಸಿದರು.

ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ:  ರಸ್ತೆಯಾದರೆ ಒಳ್ಳೆಯದು ಎಂಬ ಕಾರಣಕ್ಕೆ ಸುಮ್ಮನಿದ್ದೆವು. ಸಂಸದ ಪ್ರತಾಪ್ ಸಿಂಹ ಬಂದು ಪೋಸ್ ಕೊಡ್ತಿದ್ರು. ರಸ್ತೆ ನಾವೇ ಮಾಡಿರೋದು ಅಂತ ತಮ್ಮನ್ನು ತಾವೇ ಹೊಗಳಿಕೊಂಡ್ರು. ನಾನು ಪ್ರತಾಪ್ ಸಿಂಹ ಅವರನ್ನು ಕೇಳಲು ಬಯಸುತ್ತೇನೆ, ನೀವು ಯಾರಿಗೆ ಬ್ರಾಂಡ್ ಅಂಬಾಸಿಡರ್ ಹೇಳಿ, ಹೆದ್ದಾರಿ ಮಾಡುವ ಸಂಸ್ಥೆಯವರಿಗಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವೈಜ್ಞಾನಿಕವಾಗಿ ಹೆದ್ದಾರಿ ರಸ್ತೆ ನಿರ್ಮಾಣ ಮಾಡಲಾಗಿದೆ. ರಸ್ತೆಯಲ್ಲಿ ಪ್ರಯಾಣಿಕರು ಓಡಾಡುವುದಕ್ಕೂ ಆಗುತ್ತಿಲ್ಲ. ಬಿಡದಿಗೆ ರಸ್ತೆ ಓಪನ್ ಬಿಟ್ಟಿಲ್ಲ. 119 ಕಿ.ಮೀ ರಸ್ತೆಯಲ್ಲಿ ಇಂಟರ್ ಜಂಕ್ಷನ್ ಇಲ್ಲ. ಪ್ರಯಾಣಿಕರಿಗೆ ಟೀ ಕುಡಿಯಲು ವ್ಯವಸ್ಥೆ ಇಲ್ಲ. ಪೆಟ್ರೋಲ್ ಹಾಕಿಸಿಕೊಳ್ಳುವ ವ್ಯವಸ್ಥೆಯೂ ಇಲ್ಲ. ಬೇರೆ ಎಕ್ಸ್ ಪ್ರೆಸ್ ಹೈವೇಗಳನ್ನು ಇದೇ ರೀತಿ ಮಾಡಿದ್ದಾರಾ? ಅಪಘಾತವಾದರೆ ಟ್ರಾಮಾ ಸೆಂಟರ್ ಮಾಡಿಲ್ಲ. ಸಾರ್ವಜನಿಕರಿಗೆ ಇದರಿಂದ ಏನು ಲಾಭ? ನಾವೆಲ್ಲ ಶಾಸಕರು ಬರುತ್ತೇವೆ. ಬನ್ನಿ ರಸ್ತೆ ನೋಡಿ ಎಂದು ಪ್ರತಾಪ್ ಸಿಂಹ ಅವರನ್ನು ಆಹ್ವಾನಿಸಿದರು.

ರಾಮದೇವರ ಬೆಟ್ಟದಿಂದ ನೀರು ಬಂದಿದೆ ಅಂತೀರ, ರಾಮದೇವರ ಬೆಟ್ಟ ಇವತ್ತು ಆಗಿರೋದಾ? ಎಷ್ಟು ಮೆಟ್ರಿಕ್ ಟನ್ ಕಲ್ಲು ಹೊಡೆದಿದ್ದೀರ. ಇದು ನಿಮ್ಮ ನಮ್ಮ‌ ಮನೆ ಹಣ ಅಲ್ಲ. ಸಾರ್ವಜನಿಕರ ತೆರಿಗೆ ಹಣ ಅನ್ನೋದು ನೆನಪಿರಲಿ. 1, 300 ಕೋಟಿ ರೂ. ತಂದಿದ್ದೇವೆ ಅಂತೀರಲ್ಲ, ಇದು ಆನ್ ಗೋಯಿಂಗ್ ಪ್ರಾಜೆಕ್ಟ್. ನಿಮಗೆ ನಾಚಿಕೆ ಆಗಲ್ವೇ? ದುಡ್ಡು ನೀವು ತಂದು ಮಾಡಿರುವ ರೀತಿ ಹೇಳುತ್ತಿರಾ, ಹತ್ತು ತಿಂಗಳಲ್ಲಿ ರಸ್ತೆ ಬಿಡುಗಡೆ ಮಾಡುತ್ತೇವೆಂದು ಹೇಳಿದಿರಿ, ಎಲ್ಲಿ ಇನ್ನೂ ರಸ್ತೆ ಅಭಿವೃದ್ಧಿಯೇ ಆಗಿಲ್ಲ. ಈ ಹೆದ್ದಾರಿ ಯೋಜನೆಗೆ ನೀವ್ಯಾರು, ಇದರಿಂದ ಲಾಭವೇನು? ಇದರ ಬಗ್ಗೆ ನೀವು ತಿಳಿಸಬೇಕು. ಇದರಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದೆ ಎಂದು ಪ್ರಶ್ನಿಸಿದರು.

ರಸ್ತೆಯಲ್ಲಿ ಕೂರುತ್ತೇವೆ: ಹೆದ್ದಾರಿಯಲ್ಲಿ ಕ್ರಾಸಿಂಗ್ ಕೊಟ್ಟಿಲ್ಲ. ನಮ್ಮ‌ ಜನ ಎತ್ತಿನ ಗಾಡಿ ಎಲ್ಲಿಂದ ಓಡಿಸಬೇಕು. ಟ್ರ್ಯಾಕ್ಟರ್ ಗಳನ್ನ ಎಲ್ಲಿ ಕ್ರಾಸ್ ಮಾಡಬೇಕು. 50 ಕಡೆ ಕ್ರಾಸಿಂಗ್ ಇವೆ, ಅಲ್ಲಿ ನೀರು ತುಂಬಿವೆ. ರೈತರಿಗೆ ಬರಬೇಕಾದ ಭೂಪರಿಹಾರ ಕೊಡಿಸಿ. ಭೂ ಪರಿಹಾರ ಕೊಡದೆ ಇದ್ದರೆ ರಸ್ತೆಯಲ್ಲೇ ಕೂರುತ್ತೇವೆ. ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ ಎಂದು ಎಚ್ಚರಿಸಿದರು. ಒಂದು ಕಿ.ಮೀ ಗೆ 80 ಕೋಟಿ ರೂ. ಖರ್ಚು ಮಾಡಲಾಗಿದೆ. ಇದಲ್ಲದೆ ಇನ್ನೂ ಹೆಚ್ಚಿನ ಹಣ ಖರ್ಚು ಮಾಡಬೇಕು. ನಿನ್ನಂತೆ ಪೋಸ್ ಕೊಡೋಕೆ ನಾವು ಬಂದಿಲ್ಲ. ನಮ್ಮ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆ ಇರಲಿ ಎಂದು ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದರು.

ಯಾರದ್ದೋ ಭೂಮಿ, ಯಾರಿಗೋ ಪರಿಹಾರ: ಯಾರದ್ದೋ ಭೂಮಿ,ಇನ್ಯಾರಿಗೋ‌ ಪರಿಹಾರ ನೀಡಲಾಗಿದೆ. ಯಾರಿಗೆ ಪರಿಹಾರ ಕೊಟ್ಟಿದ್ದಾರೆ. ಭೂ ಪರಿಹಾರ ಕೇಳಿದರೆ ಜೈಲಿಗೆ ಹಾಕಿಸ್ತಾರಂತೆ. ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಪ್ರತಾಪ್ ಸಿಂಹ ಬಿಡದಿಗೆ ಬರಬೇಕು. ಬಿಡದಿಗೆ ಬನ್ನಿ ನಾವು‌ ನೋಡಿಕೊಳ್ತೇವೆ ಎಂದು ಗುಡುಗಿದರು ಮಂಜುನಾಥ್. ಹೆದ್ದಾರಿ ಯೋಜನೆಯಲ್ಲಿ ಸುಮಾರು 800 ಕೋಟಿ ರೂ. ಲೂಟಿಯಾಗಿದೆ. ಯೋಜನಾ ನಿರ್ದೇಶಕ ಶ್ರೀಧರ್ ಹೊಡೆದ ಹಣವನ್ನು ಪ್ರತಾಪ್ ಸಿಂಹ ಅವರಿಗೆ ತುಂಬಿರಬಹುದು. ಅದಕ್ಕೆ ಅವರ ಪರವಾಗಿ ಸಂಸದರು ನಿಂತಿದ್ದಾರೆ ಎಂದು ಶಾಸಕ ಮಂಜುನಾಥ್ ನೇರ ಆರೋಪ ಮಾಡಿದರು.

ಸ್ಪೀಕರ್ ಕಚೇರಿ ಮ್ಯಾನೇಜ್: ದಶಪಥದ ರಾಷ್ಟ್ರೀಯ ಹೆದ್ದಾರಿ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲಿ ಎರಡು ಬಾರಿ ಪ್ರಶ್ನೆ ಕೇಳಲು ಪ್ರಯತ್ನಪಟ್ಟಿದ್ದರೂ ಪ್ರಶ್ನೋತ್ತರ ವೇಳೆಗೆ ಬಾರದಂತೆ ಸಭಾ ಸಭಾಧ್ಯಕ್ಷರ ಕಚೇರಿಯನ್ನು ಮ್ಯಾನೇಜ್ ಮಾಡಲಾಗಿದೆ ಎಂದು ಶಾಸಕರು ಆರೋಪಿಸಿದರು. ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಬಹಳ ಪ್ರಭಾವ ಇರುವ ವ್ಯಕ್ತಿ. ಅವರು ಏನು ಬೇಕಾದರೂ ಮಾಡಬಲ್ಲರು. ಅದಕ್ಕಾಗಿಯೇ ಮೈಸೂರು ಸಂಸದರು ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಶಾಸಕರು ದೂರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com