ಮಾಜಿ ಸಂಸದ ಅದಿಕೇಶವಲು ಪುತ್ರನ ವಿರುದ್ಧ ಹತ್ಯೆ ಆರೋಪ: ತನಿಖೆಗೆ ಹೈಕೋರ್ಟ್ ನಿರ್ದೇಶನ

2019ರಲ್ಲಿ ನಡೆದಿದ್ದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಉದ್ಯಮಿ ಕೆ ರಘುನಾಥ್ ಅವರ ಹತ್ಯೆಗೆ ಸಂಬಂಧಿಸಿದಂತೆ ಮಾಜಿ ಸಂಸದ ಡಿಕೆ ಅದಿಕೇಶವಲು ಮತ್ತಿತರ ವಿರುದ್ಧದ ಆರೋಪ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ  ಹೈಕೋರ್ಟ್ ನಿರ್ದೇಶಿಸಿದೆ.  
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: 2019ರಲ್ಲಿ ನಡೆದಿದ್ದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಉದ್ಯಮಿ ಕೆ ರಘುನಾಥ್ ಅವರ ಹತ್ಯೆಗೆ ಸಂಬಂಧಿಸಿದಂತೆ ಮಾಜಿ ಸಂಸದ ಡಿಕೆ ಅದಿಕೇಶವಲು ಮತ್ತಿತರ ವಿರುದ್ಧದ ಆರೋಪ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ  ಹೈಕೋರ್ಟ್ ನಿರ್ದೇಶಿಸಿದೆ.  

ಎಸ್‌ಐಟಿ ಸಲ್ಲಿಸಿದ್ದ ‘ಬಿ’ ವರದಿಯನ್ನು ತಿರಸ್ಕರಿಸಿ ಎಚ್‌ಎಎಲ್‌ ಪೊಲೀಸರೇ ಹೆಚ್ಚಿನ ತನಿಖೆ ನಡೆಸಬೇಕು ಎಂಬ ಮ್ಯಾಜಿಸ್ಟ್ರೇಟ್‌ ಆದೇಶವನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯವ್ಯಾಪ್ತಿಯ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದರು.

ಮ್ಯಾಜಿಸ್ಟ್ರೇಟ್ ಕೋರ್ಟ್ 2022ರ ಫೆಬ್ರವರಿ 21 ಮತ್ತು ಮಾರ್ಚ್ 10 ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಘುನಾಥ್ ಅವರ ಪತ್ನಿ ಎಂ. ಮಂಜುಳಾ ಮತ್ತು ಪುತ್ರ ರೋಹಿತ್, ಮತ್ತೆ ವಿಚಾರಣೆಗಾಗಿ ಇಡೀ ವಿಷಯವನ್ನು ಸಿಬಿಐಗೆ ಒಪ್ಪಿಸುವಂತೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದ ಈ ಆದೇಶ ನೀಡಿದೆ. 

ಅರ್ಜಿ ಪ್ರಕಾರ, ಅದಿಕೇಶವಲು ಅವರಿಗೆ ಆಪ್ತರಾಗಿದ್ದ ರಘುನಾಥ್ ಬೆಂಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅನೇಕ ಸ್ಥಿರಾಸ್ತಿಯ ಮಾಲೀಕರಾಗಿದ್ದರು. 2013ರಲ್ಲಿ  ಅದಿಕೇಶವಲು ಮೃತಪಟ್ಟ ನಂತರ ರಘುನಾಥ್, ಮಾಜಿ ಸಂಸದರ ಆಸ್ತಿಗಳನ್ನು  ಪರಿಶೀಲಿಸಲು ಪ್ರಾರಂಭಿಸಿದ್ದರು. ಅದಿಕೇಶವಲು ಅವರ ಪುತ್ರ ಡಾ. ಎ.ಶ್ರೀನಿವಾಸ್ ಮತ್ತಿತರರು ರಘುನಾಥ್ ಹೆಸರಿನಲ್ಲಿರುವ ಆಸ್ತಿ ತಮ್ಮ ತಂದೆಯದ್ದು ಎಂದು ಹೇಳಿ, ಅವುಗಳನ್ನು ವರ್ಗಾಯಿಸುವಂತೆ ರಘುನಾಥ್ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ. 

ತನಗೆ ಜೀವ ಬೆದರಿಕೆ ಇದೆ ಎಂದು ಫೋನ್ ನಲ್ಲಿ ಹೇಳಿದ್ದ ರಘುನಾಥ್ 2019, ಮೇ 4 ರಂದು ತನ್ನ ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಪೊಲೀಸರು ಅಸ್ವಾಭಾವಿಕ ಸಾವಿನ ವರದಿ ದಾಖಲಿಸಿಕೊಂಡಿದ್ದರು. ತನ್ನ ಪತಿಯನ್ನು ಶ್ರೀನಿವಾಸ್, ದಾಮೋದರ್, ರಾಮಚಂದ್ರಯ್ಯ ಮತ್ತಿತರರು ಸೇರಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ರಘುನಾಥ್ ಅವರ ಪತ್ನಿ  2020 ಫೆಬ್ರವರಿಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಲು ನಿರಾಕರಿಸಿದ ಪೊಲೀಸರು,  ಅದವನ್ನು ಪೊಲೀಸ್ ಆಯುಕ್ತರಿಗೆ ವರ್ಗಾಯಿಸಿದ್ದರು. ಆದರೆ, ಯಾವುದೇ ಅಪರಾಧ ದಾಖಲಾಗಿರಲಿಲ್ಲ. ಮ್ಯಾಜಿಸ್ಟ್ರೇಟ್ ನಿರ್ದೇಶನದ ನಂತರ ಆರೋಪಿಗಳ ವಿರುದ್ಧ ಖಾಸಗಿ ದೂರೊಂದು ದಾಖಲಾಗಿತ್ತು. ವಿಚಾರಣೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮಂಜುಳಾ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com