ಮಂಗಳೂರು: ಹಿಂದೂ ಪರ ಹೋರಾಟಗಾರನಿಗೆ ಬೆದರಿಕೆ, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಯ ಸೋದರನ ಬಂಧನ

ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ನಿವಾಸಿ ಪ್ರಶಾಂತ್ ಪೂಂಜಾ ಎಂಬುವವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ 21 ವರ್ಷದ ಯುವಕನನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ನಿವಾಸಿ ಪ್ರಶಾಂತ್ ಪೂಂಜಾ ಎಂಬುವವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ 21 ವರ್ಷದ ಯುವಕನನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಎಸ್‌ಡಿಪಿಐ ಸದಸ್ಯನಾಗಿರುವ ಅಬ್ದುಲ್ ಸಪ್ರಿತ್ ಅಲಿಯಾಸ್ ಅಬ್ದುಲ್ ಸಫ್ರಿಜ್ ಎಂಬಾತನನ್ನು ಬೆಳ್ಳಾರೆ ಗ್ರಾಮದಲ್ಲಿ ಬಂಧಿಸಲಾಗಿದೆ. ಲಾಡ್ಜ್ ವೊಂದರ ಮ್ಯಾನೇಜರ್ ಪ್ರಶಾಂತ್ ನೀಡಿದ ದೂರಿನ ಪ್ರಕಾರ, ಶನಿವಾರ ಕರೆ ಮಾಡಿದ ಆರೋಪಿ ನಿಂದಿಸಿದ್ದಾನೆ.

ಆರೋಪಿಯು ಬಿಜೆಪಿ ಯುವ ಘಟಕದ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಶಫೀಕ್‌ನ ಸಹೋದರನಾಗಿದ್ದು, ಪ್ರಶಾಂತ್ ಹಿಂದೂ ಪರ ಹೋರಾಟಗಾರರಾಗಿದ್ದಾರೆ. ವಿಷಯ ತಿಳಿದ ಹಿಂದೂ ಪರ ಸಂಘಟನೆಗಳ ಸದಸ್ಯರು ಬೆಳ್ಳಾರೆ ಪೊಲೀಸ್ ಠಾಣೆ ಎದುರು ಜಮಾಯಿಸಿದರು.

ನ್ಯಾಯಾಲಯದ ಅನುಮತಿ ಪಡೆದ ನಂತರ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 504, 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಆತನನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ರಿಷಿಕೇಶ್ ಸೋನಾವಾನೆ ತಿಳಿಸಿದ್ದಾರೆ.

'ಇದು ಕಿಡಿಗೇಡಿತನದ ಪ್ರಕರಣವಾಗಿದ್ದು, ಯಾವುದೇ ಜೀವ ಬೆದರಿಕೆ ಇಲ್ಲ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಯಾವುದೇ ವೈಯಕ್ತಿಕ ವೈಷಮ್ಯ ಇಲ್ಲ. ಅಲ್ಲದೆ, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ ಆಗ್ರಹಿಸಿದ್ದು, ಎಸ್‌ಡಿಪಿಐ ಸದಸ್ಯರ ಮೇಲೆ ಪೊಲೀಸರು ನಿಗಾ ಇಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com