ಬೆಂಗಳೂರು: ಪೊಲೀಸ್ ಆಯುಕ್ತರ ಕಚೇರಿ ಹತ್ತಿರವೇ ಯುವತಿ ಜೊತೆ ಹೋಗುತ್ತಿದ್ದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ನಗರದ ಬಾಳೇಕುಂದ್ರಿ ವೃತ್ತದ ಬಳಿ ಮೊನ್ನೆ ಸೋಮವಾರ ತಡರಾತ್ರಿ ಹುಡುಗಿಯೊಬ್ಬಳ ಜೊತೆ ಹೋಗುತ್ತಿದ್ದ ಯುವಕನ ಮೇಲೆ ನಾಲ್ವರು ಯುವಕರ ಗುಂಪು ಹಲ್ಲೆ ನಡೆಸಿದ್ದು, ಸಾರ್ವಜನಿಕರ ಸುರಕ್ಷತೆ ಬಗ್ಗೆ ಚಿಂತಿಸುವಂತೆ ಮಾಡಿದೆ.
ಸಂಚಾರ ದಟ್ಟಣೆ ಮಧ್ಯೆ ಮಾರಕಾಸ್ತ್ರಗಳನ್ನು ಹಿಡಿದ ಯುವಕ
ಸಂಚಾರ ದಟ್ಟಣೆ ಮಧ್ಯೆ ಮಾರಕಾಸ್ತ್ರಗಳನ್ನು ಹಿಡಿದ ಯುವಕ
Updated on

ಬೆಂಗಳೂರು: ನಗರದ ಬಾಳೇಕುಂದ್ರಿ ವೃತ್ತದ ಬಳಿ ಮೊನ್ನೆ ಸೋಮವಾರ ತಡರಾತ್ರಿ ಹುಡುಗಿಯೊಬ್ಬಳ ಜೊತೆ ಹೋಗುತ್ತಿದ್ದ ಯುವಕನ ಮೇಲೆ ನಾಲ್ವರು ಯುವಕರ ಗುಂಪು ಹಲ್ಲೆ ನಡೆಸಿದ್ದು, ಸಾರ್ವಜನಿಕರ ಸುರಕ್ಷತೆ ಬಗ್ಗೆ ಚಿಂತಿಸುವಂತೆ ಮಾಡಿದೆ.

ಮಹಾವೀರ್ ಜೈನ್ ರಸ್ತೆಯ (ಇನ್‌ಫೆಂಟ್ರಿ ರಸ್ತೆ) ಪೊಲೀಸ್ ಕಮಿಷನರ್ ಕಚೇರಿಯ 300 ಮೀಟರ್ ಅಂತರದಲ್ಲಿ ಮತ್ತು ವಿಧಾನಸೌಧದಿಂದ 1 ಕಿ.ಮೀ.ಗಿಂತಲೂ ಕಡಿಮೆ ಅಂತರದಲ್ಲಿ ಅಂಬೇಡ್ಕರ್ ವೀಧಿಯಲ್ಲಿ ಘಟನೆ ಸಂಭವಿಸಿದ್ದರೂ, ಯಾವುದೇ ಪೊಲೀಸ್ ಯುವಕನ ರಕ್ಷಣೆಗೆ ಮುಂದಾಗಿರಲಿಲ್ಲ. ದಾಳಿಕೋರರಿಂದ ಯುವಕ ಹಲ್ಲೆಗೊಳಗಾಗಿ ಗಾಯಗೊಂಡಿದ್ದಾನೆ. ಮೊನ್ನೆ ಸೋಮವಾರ ರಾತ್ರಿ 10.15ರ ಸುಮಾರಿಗೆ ಇದು ನಡೆದಿದೆ. 

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಪತ್ರಕರ್ತ ಸೇರಿದಂತೆ ಜನರು ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಪೊಲೀಸ್ ತುರ್ತು ಸಂಪರ್ಕ ಸಂಖ್ಯೆ 112 ಆ ಸಮಯದಲ್ಲಿ ಬ್ಯುಸಿ ಎಂದು ಬರುತ್ತಿತ್ತು. ವಿಧಾನಸೌಧ ಪೊಲೀಸ್ ನಿರೀಕ್ಷಕರಿಗೆ ಕರೆ ಮಾಡಿದಾಗ ಮಾತ್ರ ಹೊಯ್ಸಳ ಗಸ್ತು ತಂಡ 30 ನಿಮಿಷ ತಡವಾಗಿ ಸ್ಥಳಕ್ಕೆ ಆಗಮಿಸಿತು. ಅಷ್ಟರಲ್ಲಾಗಲೇ ದಾಳಿಕೋರರು ಹಾಗೂ ದಾಳಿಗೊಳಗಾದವರು ಸ್ಥಳದಿಂದ ತೆರಳಿದ್ದರು. ಹಲ್ಲೆ ಮಾಡಲು ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಯುವಕ ಯುವತಿಯನ್ನು ಪ್ರೀತಿಸುತ್ತಿದ್ದನು.ಆಕೆ ಮತ್ತೊಬ್ಬನನ್ನು ಪ್ರೀತಿಸುತ್ತಿರುವುದು ಕಂಡು  ಬೇಸರಗೊಂಡಿದ್ದನು. ನಾಲ್ವರು ಪ್ರೇಮಿಗಳನ್ನು ಹಿಂಬಾಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ದಾಳಿಯ ಹಿಂದಿನ ಕಾರಣದ ಹೊರತಾಗಿಯೂ, ಇದು ಜನನಿಬಿಡ ರಸ್ತೆಯಾಗಿದ್ದರೂ ಪೊಲೀಸರು ಅಥವಾ ಸಾರ್ವಜನಿಕರಿಂದ ಯಾವುದೇ ಸಹಾಯವಿಲ್ಲ ಎಂಬುದು ಮಾತ್ರ ಕಹಿ ಸತ್ಯ. ಗಾಬರಿಗೊಂಡ ಪ್ರಯಾಣಿಕರು ತಮ್ಮ ವಾಹನಗಳನ್ನು ನಿಲ್ಲಿಸಿದರು. ಆದರೆ ಯುವಕರು ಆಯುಧಗಳಿಂದ ಯುವಕನ ಮೇಲೆ ಆಕ್ರಮಣ ಮಾಡುತ್ತಿದ್ದರೆ ಯಾರೂ ಬಿಡಿಸಲು ಬಂದಿರಲಿಲ್ಲ.

ಪ್ರತ್ಯಕ್ಷದರ್ಶಿ ನಾಗೇಶ್, ಹುಡುಗಿಯ ಕಿರುಚಾಟ ಕೇಳಿ ನಾನು ಕಚೇರಿಯಿಂದ ಹೊರಗೆ ಓಡಿಬಂದು ನೋಡಿದಾಗ ಒಬ್ಬ ಯುವಕ ಕತ್ತಿ ಝಳಪಿಸುತ್ತಿರುವುದನ್ನು ನೋಡಿದೆ. ಆತನ ಸಹಚರರೊಬ್ಬರು ಫುಟ್‌ಪಾತ್‌ನ ಪೊದೆಯೊಂದರಲ್ಲಿ ಕತ್ತಿಯನ್ನು ಬಚ್ಚಿಟ್ಟ ನಂತರ ಆತ ಮತ್ತೊಬ್ಬ ಯುವಕನ ಮೇಲೆ ಕಪಾಳಮೋಕ್ಷ ಮಾಡುತ್ತಿದ್ದ. ಯುವಕರ ಬಳಿ ಮಾರಕ ಆಯುಧಗಳಿದ್ದರಿಂದ ಜನರು ಭೀತಿಗೊಂಡಿದ್ದರು ಎನ್ನುತ್ತಾರೆ.

ಪೊಲೀಸರು ಸಮೀಪದ ಪಬ್ ಸಿಬ್ಬಂದಿಯಿಂದ ವಿಡಿಯೋ ದೃಶ್ಯಾವಳಿಗಳನ್ನು ಸಂಗ್ರಹಿಸಿ ಅಲ್ಲಿಂದ ತೆರಳಿದರು. ಹೈ ಡ್ರಾಮಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮೂವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರಲ್ಲಿ ಒಬ್ಬನನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಈ ವೇಳೆ ಒಬ್ಬಾತ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯ ಬಗ್ಗೆ ಕಾಮೆಂಟ್ ಮಾಡಿದ್ದು ಘರ್ಷಣೆಗೆ ಕಾರಣವಾಗಿತ್ತು ಎನ್ನಲಾಗಿದೆ.

ನಿವೃತ್ತ ಎಸಿಪಿ ಬಿ.ಬಿ.ಅಶೋಕ್ ಕುಮಾರ್, ರಸ್ತೆಯ ಮಧ್ಯದಲ್ಲಿ ಕತ್ತಿ ಝಳಪಿಸಿ ದುಷ್ಕರ್ಮಿಗಳು ಸಾರ್ವಜನಿಕರನ್ನು ಭಯಭೀತಗೊಳಿಸಿರುವುದು ಅತ್ಯಂತ ಗಂಭೀರ ಪ್ರಕರಣವಾಗಿದೆ. ಪೊಲೀಸ್ ಕಮಿಷನರ್ ಕಚೇರಿ ಬಳಿಯೇ ಈ ಘಟನೆ ನಡೆದಿದ್ದು, ತುರ್ತು ಸಂಖ್ಯೆಯು ಸಹಾಯಕ್ಕೆ ಬಾರದಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ಘಟನೆಗಳಿಂದ ಸಾರ್ವಜನಿಕರು ಪೊಲೀಸರ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com