ಬೆಂಗಳೂರು: ಕಾಲೇಜು ಶುಲ್ಕ ಪಾವತಿಸಲು ಐಟಿ ಸಂಸ್ಥೆಯ ಎಂಡಿ ಪುತ್ರನ ಕಿಡ್ನಾಪ್; 15 ಲಕ್ಷ ರೂ. ದೋಚಿದ್ದ ಇಬ್ಬರ ಬಂಧನ

ಕಾಲೇಜು ಶುಲ್ಕ ಪಾವತಿಸುವ ಸಲುವಾಗಿ ಐಟಿ ಸಂಸ್ಥೆಯೊಂದರ ವ್ಯವಸ್ಥಾಪಕ ನಿರ್ದೇಶಕರೊಬ್ಬರ 14 ವರ್ಷದ ಪುತ್ರನನ್ನು ಅಪಹರಿಸಿದ ಆರೋಪದ ಮೇಲೆ 23 ವರ್ಷದ ಬಿಕಾಂ ವಿದ್ಯಾರ್ಥಿ ಹಾಗೂ ಆತನ ಸ್ನೇಹಿತನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾಲೇಜು ಶುಲ್ಕ ಪಾವತಿಸುವ ಸಲುವಾಗಿ ಐಟಿ ಸಂಸ್ಥೆಯೊಂದರ ವ್ಯವಸ್ಥಾಪಕ ನಿರ್ದೇಶಕರೊಬ್ಬರ 14 ವರ್ಷದ ಪುತ್ರನನ್ನು ಅಪಹರಿಸಿದ ಆರೋಪದ ಮೇಲೆ 23 ವರ್ಷದ ಬಿಕಾಂ ವಿದ್ಯಾರ್ಥಿ ಹಾಗೂ ಆತನ ಸ್ನೇಹಿತನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ

ಗುಡಿಬಂಡೆ ತಾಲೂಕಿನ ಎಂ. ಸುನಿಲ್‌ಕುಮಾರ್‌ (23), ಚಿಕ್ಕಬಳ್ಳಾಪುರದ ಮಂಡಿಕಲ್‌ನ ವೈ.ವಿ. ನಾಗೇಶ್‌ ಬಂಧಿತರು. ಸೆಪ್ಟೆಂಬರ್ 2 ರಂದು ಮಾನ್ಯತಾ ರೆಸಿಡೆನ್ಸಿಯಲ್ಲಿರುವ ನಿವಾಸದಿಂದ  ಬಾಲಕನ ತಂದೆಯ ಎಸ್‌ಯುವಿಯಲ್ಲಿಯೇ ಅಪಹರಿಸಲಾಗಿತ್ತು.

ಕಾರಿನಲ್ಲಿ ದಾಬಸ್ ಪೇಟೆ ತಲುಪಿದ ಬಳಿಕ ಅಪಹರಣಕಾರರು ಬಾಲಕನ ತಂದೆಗೆ ಕರೆ ಮಾಡಿ 15 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಭಯಗೊಂಡ ಬಾಲಕನ ತಂದೆ ಆರೋಪಿಗಳಿಗೆ ಹಣ ನೀಡಿ ಮಗನನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿದ್ದರು.  ಬಾಲಕನನ್ನು ಬಿಡುಗಡೆ ಮಾಡಿದ್ದ ಅಪಹರಣಕಾರರು ಎಸ್ ಯುವಿ ತೆಗೆದುಕೊಂಡು ಹೋಗಿದ್ದರು. 

ಮಗ ಜೀವಂತವಾಗಿ ಬಂದ ಬಳಿಕ ನೆಮ್ಮದಿಯ ನಿಟ್ಟುಸಿರು ಬಿಟ್ಟ ಬಾಲಕನ ತಂದೆ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರ ತಂಡ, ಕಿಡ್ನ್ಯಾಪ್‌ ಮಾಡಿದ್ದ ಮನೆಯ ಸಮೀಪದ ಸಿಸಿಟಿವಿ ದೃಶ್ಯಾವಳಿ, ಮೊಬೈಲ್‌ ಲೊಕೇಶನ್‌ ಮತ್ತಿತರ ಮಾಹಿತಿ ಆಧರಿಸಿ ಯಲಹಂಕದಲ್ಲಿ ವಾಸವಿದ್ದ ಸುನಿಲ್‌ ಕುಮಾರ್‌ ಹಾಗೂ ನಾಗೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್‌ ಕುರಿತು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳು ಕದ್ದಿದ್ದ ಒಂದು ಕಾರು, 9.69 ಲಕ್ಷ ರೂ.ನಗದು, ಎರಡು ಬೈಕ್‌, ಒಂದು ಕ್ಯಾಮರಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸುನಿಲ್‌ ಯಲಹಂಕದಲ್ಲಿರುವ ಸಂಜೆ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಹಗಲಿನ ವೇಳೆ ಕಟ್ಟಡ ಕೆಲಸ, ಗಾರ್ಡನ್‌ ಕೆಲಸಗಳಿಗೆ ಹೋಗುತ್ತಿದ್ದ. ಸಂಜೆ ಕಾಲೇಜಿಗೆ ಹೋಗುತ್ತಿದ್ದ. ಕಾಲೇಜು ಶುಲ್ಕ 40 ಸಾವಿರ ರು. ಪಾವತಿಸಲು ಹಣವಿರಲಿಲ್ಲ. ಹಲವು ಸ್ನೇಹಿತರನ್ನು ಕೇಳಿದರೂ ಯಾರೂ ಸಹಾಯ ಮಾಡಿರಲಿಲ್ಲ.

ಕೆಲ ತಿಂಗಳ ಹಿಂದೆ ಅಪಹರಣಗೊಂಡಿದ್ದ ಬಾಲಕನ ನಿವಾಸದ ಗಾರ್ಡನ್‌ ಕೆಲಸಕ್ಕೆ ಹೋದಾಗ ಪರಿಚಿತನಾಗಿದ್ದ. ಆತ ಒಬ್ಬನೇ ತಳಮಹಡಿ ಕೊಠಡಿಯಲ್ಲಿ ಮಲಗುವ ವಿಚಾರವೂ ಸುನಿಲ್‌ಗೆ ಗೊತ್ತಿತ್ತು. ಹೀಗಾಗಿ ಭವೇಶ್‌ನನ್ನು ಕಿಡ್ನಾಪ್‌ ಮಾಡಿದರೆ ಅವರ ಕುಟುಂಬ ಕೇಳಿದಷ್ಟು ಹಣ ಕೊಡಲಿದೆ ಎಂದು ಲೆಕ್ಕಾಚಾರ ಹಾಕಿದ್ದ. ಈ ಸಂಚಿನ ಬಗ್ಗೆ ಬಾಲ್ಯ ಸ್ನೇಹಿತ, ಕಾರು ಚಾಲಕನಾಗಿದ್ದ ನಾಗೇಶ್‌ಗೆ ತಿಳಿಸಿದ್ದ.

ಆತನೂ ಕೃತ್ಯಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದ. ಅದರಂತೆ ಮುಖ ಗುರುತು ಸಿಗದಂತೆ ಮಾಸ್ಕ್‌ ಧರಿಸಿ ಸೆ.2ರಂದು ಮುಂಜಾನೆ ಬಾಲಕನನ್ನು ಕಿಡ್ನ್ಯಾಪ್‌ ಮಾಡಿದ್ದರು ಎಂಬ ವಿಚಾರ ತನಿಖೆಯಿಂದ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕಿಡ್ನ್ಯಾಪ್‌ ಕೃತ್ಯದಲ್ಲಿ ಬಂದಿದ್ದ 15 ಲಕ್ಷ ರೂ.ಗಳಲ್ಲಿ ಸುನಿಲ್‌ ಕಾಲೇಜು ಶುಲ್ಕ ಪಾವತಿಸಿದ್ದ. ಯಲಹಂಕದಲ್ಲಿ ಬಾಡಿಗೆ ರೂಂಗೆ ಅಡ್ವಾನ್ಸ್‌ ಕೊಟ್ಟಿದ್ದ. ಹೊಸ ಬೈಕ್‌ ಹಾಗೂ ಡಿಜಿಟಲ್‌ ಕ್ಯಾಮರಾ ಖರೀದಿ ಮಾಡಿದ್ದ. ಉಳಿದ ಹಣವನ್ನು ತಾನೇ ಇಟ್ಟುಕೊಂಡಿದ್ದ. ಕಾಲೇಜು ಶುಲ್ಕ ಪಾವತಿಗೆ ಹಣ ಹೊಂದಿಸಲು ಕಿಡ್ನ್ಯಾಪ್‌ ಕೃತ್ಯ ಎಸಗಿದ್ದಾಗಿ ಆರೋಪಿ ಸುನಿಲ್‌ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಅಧಿಕಾರಿ ಹೇಳಿದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com