ರಸ್ತೆ ಬದಿ ಅನಧಿಕೃತ ಕಟ್ಟಡ ನಿರ್ಮಾಣ ತಡೆಗೆ ಸ್ಪಷ್ಟ ನಿಯಮ ಜಾರಿಗೆ- ಸಚಿವ ಸಿ.ಸಿ.ಪಾಟೀಲ
ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳ ಅಕ್ಕಪಕ್ಕ ಅನಧಿಕೃತ ಕಟ್ಟಡಗಳನ್ನು ನಿರ್ಮಿಸದಂತೆ ತಡೆಗಟ್ಟಲು ಸ್ಪಷ್ಟ ನಿಯಮ ಜಾರಿಗೆ ತರಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲರು ತಿಳಿಸಿದ್ದಾರೆ.
Published: 03rd August 2022 12:32 PM | Last Updated: 03rd August 2022 01:08 PM | A+A A-

ಸಿ.ಸಿ.ಪಾಟೀಲ
ಬೆಂಗಳೂರು: ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳ ಅಕ್ಕಪಕ್ಕ ಅನಧಿಕೃತ ಕಟ್ಟಡಗಳನ್ನು ನಿರ್ಮಿಸದಂತೆ ತಡೆಗಟ್ಟಲು ಸ್ಪಷ್ಟ ನಿಯಮ ಜಾರಿಗೆ ತರಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲರು ತಿಳಿಸಿದ್ದಾರೆ. ಹೆದ್ದಾರಿಗಳ ಅಕ್ಕಪಕ್ಕ ಕಟ್ಟಡ ನಿರ್ಮಾಣದಲ್ಲಿ ಕನಿಷ್ಠ ಎಷ್ಟು ಪ್ರಮಾಣದ ಅಂತರ ಕಾಯ್ದುಕೊಳ್ಳಬೇಕೆಂಬ ಎಂಬುದರ ಬಗ್ಗೆ ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಈ ನಿಯಮದನ್ವಯ ರಾಜ್ಯ ಹೆದ್ದಾರಿಗಳ ಮಧ್ಯ ಭಾಗದಿಂದ 40 ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ಅಥವಾ ಅಂಗಡಿಗಳನ್ನು ನಿರ್ಮಿಸುವಂತಿಲ್ಲ. ಜಿಲ್ಲಾ ಮುಖ್ಯ ರಸ್ತೆಗಳ ಮಧ್ಯಭಾಗದಿಂದ 25 ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ನಿರ್ಮಿಸುವುದಕ್ಕೆ ಅವಕಾಶವಿಲ್ಲ.
ಸಿಟಿ ಕಾರ್ಪೋರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಮುನ್ಸಿಪಲ್ ಕೌನ್ಸಿಲ್, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಪರಿಮಿತಿಗಳಲ್ಲಿ ಈ ಅಂತರವನ್ನು ರಾಜ್ಯ ಹೆದ್ದಾರಿಯ ದಾಖಲಿತ ರಸ್ತೆ ಭೂಗಡಿ ಅಂಚಿನಿಂದ ಕನಿಷ್ಠ 6 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಸಿಟಿ ಕಾರ್ಪೋರೇಷನ್ ಪರಿಮಿತಿಯಿಂದ 15 ಕಿ.ಮೀ ದೂರದವರೆಗೆ 12 ಮೀಟರ್ ಅಂತರ ಪಾಲಿಸುವುದು ಕಡ್ಡಾಯವಾಗಿದೆ.
ಈ ನಿಬಂಧನೆಗಳನ್ನು ಪಾಲಿಸುವುದರಿಂದ ರಸ್ತೆಗಳಲ್ಲಿ ಅತಿಕ್ರಮಣ ತಡೆಯಲು ನೆರವಾಗುವುದಲ್ಲದೇ, ಸುಗಮ ಸಂಚಾರಕ್ಕೆ ಅವಕಾಶವಾಗಲಿದೆ. ಅಪಘಾತಗಳ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರುಗಳನ್ನು ಹೆದ್ದಾರಿ ಪ್ರಾಧಿಕಾರಿ ಎಂದು ಘೋಷಿಸಲಾಗಿದ್ದು, ರಸ್ತೆಯಿಂದ ಕಟ್ಟಡಗಳ ಅಂತರ ನಿಗದಿಪಡಿಸುವುದು ಹಾಗೂ ರಸ್ತೆ ಗಡಿಯನ್ನು ನಿಗದಿಪಡಿಸುವುದು ಅವರ ಜವಾಬ್ದಾರಿಯಾಗಿರುತ್ತದೆ ಎಂದು ಸಿ.ಸಿ. ಪಾಟೀಲರು ವಿವರಿಸಿದ್ದಾರೆ.