ಬೆಂಗಳೂರಿನಲ್ಲಿ ಲ್ಯಾಂಡ್ ಆಗುವ ಕೆಲವೇ ಹೊತ್ತಿಗೆ ಮುನ್ನ ಇಂಡಿಗೋ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ

ಜೈಪುರದಿಂದ ಬೆಂಗಳೂರಿಗೆ 175 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಇಳಿಯುವ ಮುನ್ನವೇ ವಿಮಾನದಲ್ಲಿ ಬಾಂಬ್ ಇರುವುದಾಗಿ ಟಾಯ್ಲೆಟ್‌ನಲ್ಲಿ ಟಿಶ್ಯೂ ಪೇಪರ್‌ ಮೇಲೆ ಗೀಚಿದ ಅನಾಮಧೇಯ ಸಂದೇಶ ಪತ್ತೆಯಾಗಿದ್ದರಿಂದ ತೀವ್ರ ಉದ್ವಿಗ್ನತೆ ಉಂಟಾಗಿತ್ತು.
ಭಾನುವಾರ ರಾತ್ರಿ ಎಲ್ಲ ಪ್ರಯಾಣಿಕರ ಲಗೇಜ್ ಅನ್ನು ಪ್ರತ್ಯೇಕ ಸ್ಥಳದಲ್ಲಿಟ್ಟು ಪರಿಶೀಲಿಸಲಾಯಿತು
ಭಾನುವಾರ ರಾತ್ರಿ ಎಲ್ಲ ಪ್ರಯಾಣಿಕರ ಲಗೇಜ್ ಅನ್ನು ಪ್ರತ್ಯೇಕ ಸ್ಥಳದಲ್ಲಿಟ್ಟು ಪರಿಶೀಲಿಸಲಾಯಿತು
Updated on

ಬೆಂಗಳೂರು: ಜೈಪುರದಿಂದ ಬೆಂಗಳೂರಿಗೆ 175 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಇಳಿಯುವ ಮುನ್ನವೇ ವಿಮಾನದಲ್ಲಿ ಬಾಂಬ್ ಇರುವುದಾಗಿ ಟಾಯ್ಲೆಟ್‌ನಲ್ಲಿ ಟಿಶ್ಯೂ ಪೇಪರ್‌ ಮೇಲೆ ಗೀಚಿದ ಅನಾಮಧೇಯ ಸಂದೇಶ ಪತ್ತೆಯಾಗಿದ್ದರಿಂದ ತೀವ್ರ ಉದ್ವಿಗ್ನತೆ ಉಂಟಾಗಿತ್ತು.

ವಿಮಾನದ ಕ್ಯಾಪ್ಟನ್ ಕೂಡಲೇ ಕೆಂಪೇಗೌಡ ವಿಮಾನ ನಿಲ್ದಾಣದ ಭದ್ರತಾ ಏಜೆನ್ಸಿಗಳನ್ನು ಸಂಪರ್ಕಿಸಿ, ಅನುಮತಿ ಪಡೆದ ಬಳಿಕವೇ ವಿಮಾನವನ್ನು ಇಳಿಸಿದ್ದಾರೆ. ಬಳಿಕ ಇದು ಹುಸಿ ಬಾಂಬ್ ಸಂದೇಶ ಎಂಬುದು ತಿಳಿದುಬಂದಿದೆ.

ವಿಮಾನದ ನಂ. 6E 556ರ ಹಿಂಭಾಗದ ಶೌಚಾಲಯದಲ್ಲಿ ಟಿಶ್ಯೂ ಪೇಪರ್‌ ಬಿದ್ದಿದ್ದನ್ನು ಕ್ಯಾಬಿನ್ ಸಿಬ್ಬಂದಿಯೊಬ್ಬರು ಗಮನಿಸಿದ್ದಾರೆ. ಇದರಲ್ಲಿ 'ಲ್ಯಾಂಡ್ ನಾ ಕರ್ನಾ, ಇಸ್ ಫ್ಲೈಟ್‌ ಮೆ ಬಾಂಬ್ ಹೈ' (ವಿಮಾನವನ್ನು ಇಳಿಸಬೇಡಿ, ಇದರಲ್ಲಿ ಬಾಂಬ್ ಇದೆ) ಎಂದು ಹಿಂದಿಯಲ್ಲಿ ಸಂದೇಶವಿತ್ತು ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಂಬ್ ಬೆದರಿಕೆ ಸಂದೇಶವನ್ನು ಗಮನಿಸಿದ ಸಿಬ್ಬಂದಿ ಕಾಕ್‌ಪಿಟ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದು, ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮತ್ತು ವಾಯು ಸಂಚಾರ ನಿಯಂತ್ರಣ ಘಟಕವನ್ನು ಸಂಪರ್ಕಿಸಿದ್ದಾರೆ. 'ಬಳಿಕ ಲ್ಯಾಂಡ್ ಆಗಲು ಅನುಮತಿ ಸಿಕ್ಕ ಬಳಿಕ ರಾತ್ರಿ 9.30ರ ನಂತರ ವಿಮಾನ ಏರ್‌ಪೋರ್ಟ್‌ನಲ್ಲಿ ಇಳಿಯಿತು. ಬಳಿಕ ಅದನ್ನು ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ' ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

'ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ಸಿಐಎಸ್‌ಎಫ್‌ ತಂಡ ವ್ಯಾಪಕ ತಪಾಸಣೆ ನಡೆಸಿತು. ಎಲ್ಲಾ ಪ್ರಯಾಣಿಕರನ್ನು ಎರಡು ಬಾರಿ ಪರಿಶೀಲಿಸಲಾಗಿದೆ ಮತ್ತು ಪ್ರತಿಯೊಬ್ಬರಿಂದ ಕೈಬರಹದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಎಲ್ಲರ ಸಾಮಾನು ಸರಂಜಾಮುಗಳನ್ನು ಪ್ರತ್ಯೇಕಿಸಲಾಗಿದೆ ಮತ್ತು ವೈಯಕ್ತಿಕ ತಪಾಸಣೆ ನಡೆಸಲಾಯಿತು' ಎಂದು ಉನ್ನತ ಮೂಲಗಳು ತಿಳಿಸಿವೆ.

ಶಂಕಿತ ಪ್ರಯಾಣಿಕರ ಮಾದರಿಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶೌಚಾಲಯದೊಳಗೆ ಪ್ರಯಾಣಿಕರೊಬ್ಬರು ಟಿಶ್ಯೂವನ್ನು ಬಿಟ್ಟು ಹೋಗಿರಬಹುದು ಮತ್ತು ಅದನ್ನು ಬೇರೆಯವರು ಬರೆದಿರುವ ಸಾಧ್ಯತೆಯನ್ನು ಕೂಡ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಈ ಘಟನೆಯು ಎಚ್ಚರಿಕೆಯ ಗಂಟೆಯಾಗಿದೆ. ಶೌಚಾಲಯಕ್ಕೆ ಪ್ರವೇಶಿಸುವವರ ಮೇಲೆ ನಿಗಾ ಇಡಲು ಶೌಚಾಲಯದ ಹೊರಗೆ ಕ್ಯಾಮೆರಾಗಳನ್ನು ಅಳವಡಿಸುವ ಅವಶ್ಯಕತೆಯಿದೆ. ಇದರಿಂದ ಅಂತಹ ಶಂಕಿತರನ್ನು ಸುಲಭವಾಗಿ ಕಂಡುಹಿಡಿಯಬಹುದು ಎಂದು ಉನ್ನತ ಭದ್ರತಾ ಮೂಲಗಳು ತಿಳಿಸಿವೆ.

ಇದರ ನಂತರ ಬೆಂಗಳೂರಿನಿಂದ ಜೈಪುರಕ್ಕೆ ತೆರಳುವ ಇಂಡಿಗೋ ವಿಮಾನ ಸೋಮವಾರ ಬೆಳಗ್ಗೆ 1.04 ಕ್ಕೆ ಅಂದರೆ 3 ಗಂಟೆ 14 ನಿಮಿಷಗಳು ತಡವಾಗಿ ಹೊರಟಿತು. ಆದರೆ, ಹುಸಿ ಬಾಂಬ್ ಕರೆಗೆ ಸಂಬಂಧಿಸಿದಂತೆ ತಡವಾಗಿರಬಹುದು ಎಂಬುದು ಸ್ಪಷ್ಟವಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com