ಪ್ರವೀಣ್ ನೆಟ್ಟಾರು ಹತ್ಯೆಗೆ PFI ನಂಟು?: ಕೆಲವರಿಂದ ಆರೋಪಿಗಳ ರಕ್ಷಣೆ; ನೆರವಾದವರ ಆಸ್ತಿ ಮುಟ್ಟುಗೋಲಿಗೆ ಕ್ರಮ: ಎಡಿಜಿಪಿ ಆಲೋಕ್ ಕುಮಾರ್ ಎಚ್ಚರಿಕೆ

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂದಿಸಿದ ಆರೋಪಿಗಳನ್ನು ಕೆಲವರು ರಕ್ಷಣೆ ಮಾಡುತ್ತಿದ್ದು, ಆರೋಪಿಗಳಿಗೆ ನೆರವಾದವರ ಆಸ್ತಿ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಎಡಿಜಿಪಿ ಆಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಎಡಿಜಿಪಿ ಅಲೋಕ್ ಕುಮಾರ್
ಎಡಿಜಿಪಿ ಅಲೋಕ್ ಕುಮಾರ್

ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂದಿಸಿದ ಆರೋಪಿಗಳನ್ನು ಕೆಲವರು ರಕ್ಷಣೆ ಮಾಡುತ್ತಿದ್ದು, ಆರೋಪಿಗಳಿಗೆ ನೆರವಾದವರ ಆಸ್ತಿ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಎಡಿಜಿಪಿ ಆಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್ ಕುಮಾರ್ ಅವರು, 'ಬಿಜೆಪಿ ಯುವಮುಖಂಡ ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಜನರನ್ನು ಬಂಧಿಸಲಾಗಿದೆ. ಇನ್ನುಳಿದ ಮೂವರು ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಲು ಬೇರೆ ಬೇರೆ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಪರಾರಿಯಾದ ಮೂವರು ಆರೋಪಿಗಳ ಫೋಟೋ , ಮನೆ ವಿಳಾಸ, ಮನೆಯವರ ಬಗ್ಗೆ ತಿಳಿದಿದೆ. ಆದರೆ ಆರೋಪಿಗಳನ್ನು ಕೆಲವರು ಸೇರಿ ಬಚ್ಚಿಟ್ಟಿದ್ದಾರೆ. ಅವರನ್ನು ಯಾವ ರೀತಿ ಪತ್ತೆ ಹಚ್ಚಬೇಕು ಎಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದರು.

ಅಂತೆಯೇ ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಚೋದನೆ ನೀಡಿದವರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರ ಮೇಲೂ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಯಾರೆಲ್ಲಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅವರೆಲ್ಲರ ಮೇಲೆ ಕರ್ನಾಟಕ ಪೊಲೀಸ್‌ ಹಾಗೂ ಎನ್‌ಐಎ ಮೂಲಕ ಕ್ರಮ ಜರುಗಿಸುತ್ತೇವೆ. ಪರಾರಿಯಾದ ಆರೋಪಿಗಳನ್ನು ಪತ್ತೆಹಚ್ಚಲು ಕೋರ್ಟ್‌ ಮುಖಾಂತರ ವಾರೆಂಟ್‌ ಪಡೆದು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಹತ್ಯೆಗೆ PFI ನಂಟು
ಇನ್ನು ಪ್ರವೀಣ್ ಹತ್ಯೆಯ ಕೆಲವು ಆರೋಪಿಗಳಿಗೆ ಪಿಎಫ್ ಐ ಸಂಪರ್ಕ‌ ಇದೆ. ಈ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೇವೆ ಎಂದು ಆಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. 

ಯಾರಿಗೆಲ್ಲಾ ಪಿಎಫ್ಐ ಸಂಪರ್ಕ ಇದೆ ಎಂಬುವುದರ ಬಗ್ಗೆ ತನಿಖೆಯ ಬಳಿಕ ಹೇಳುತ್ತೇವೆ. ಆರೋಪಿಗಳಿಗೆ ಪಿಎಫ್ಐ ಜೊತೆ ನಂಟು ಇರುವ ವಿಚಾರಕ್ಕೆ ಸಂಬಂಧಿಸಿ‌ ನಾವು ಯಾವುದೇ ದಾಖಲೆ ಇಲ್ಲದೇ ಮಾತನಾಡುವುದಿಲ್ಲ. ದಾಖಲೆ ಜೊತೆಗೆ ಮಾತನಾಡುತ್ತೇವೆ. ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳ ಸಂಪೂರ್ಣ ಮಾಹಿತಿ ಇದೆ, ಅವರ ಫೋಟೊ,ಮನೆ ವಿಳಾಸ, ತಂದೆ-ತಾಯಿ, ಹೆಂಡತಿ ಸೇರಿದಂತೆ ಕುಟುಂಬದವರ  ಮಾಹಿತಿಯೂ ಲಭ್ಯವಿದೆ. ಪ್ರಮುಖ ಆರೋಪಿಗಳನ್ನು ಬಚ್ಚಿಡುವ ಕೆಲಸ ನಡೆಯುತ್ತಿದೆ. ಆಗಾಗ ಅವರ ಸ್ಥಳ ಬದಲಾವಣೆ ಮಾಡಲಾಗುತ್ತಿದೆ. ದಾಖಲೆಗಳ ಆಧಾರದ ಮೇಲೆ ಸಾಕ್ಷಿ ಸಂಗ್ರಹಿಸಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಪಿಎಫ್‌ಐ ಜತೆ ಶಂಕಿತ ನಂಟು ಕಂಡು ಬಂದಿದೆ. ತನಿಖೆ ನಂತರ  ಯಾರಿಗೆಲ್ಲಾ ಪಿಎಫ್‌ಐ ಜತೆ ನಂಟು ಇದೆ ಎನ್ನುವುದನ್ನು ಹೇಳಬಹುದು. ಬಾಯಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದರು.

ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೆಕ್ಷನ್‌ 144 ಜಾರಿ ಮಾಡಲಾಗಿದೆ. ಅದರ ಕುರಿತಾಗಿಯೂ ಸಭೆ ನಡೆಸಲಿದ್ದೇವೆ. ಮುಂದೆಯೂ ಕಾನೂನು ಸುವ್ಯವಸ್ಥೆ ಉತ್ತಮ ರೀತಿಯಲ್ಲಿ ಇರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com