ಬೆಂಗಳೂರಿನ 10 ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಿ-ಪೇಯ್ಡ್ ಆಟೋ ಸ್ಟ್ಯಾಂಡ್

ದುಬಾರಿ ಹಣದ ಬೇಡಿಕೆಯನ್ನು ನಿವಾರಿಸಲು ಪೊಲೀಸರು ಹಂತ-1ರ 10 ಮೆಟ್ರೋ ನಿಲ್ದಾಣಗಳಲ್ಲಿ ಮತ್ತು ಹಂತ-2ರ ಕಾರ್ಯಾಚರಣಾ ನಿಲ್ದಾಣಗಳಲ್ಲಿ ಪ್ರೀ-ಪೇಯ್ಡ್ ಆಟೋ ಸ್ಟಾಂಡ್‌ಗಳನ್ನು ತೆರೆಯಲಿದ್ದಾರೆ.  
ನಮ್ಮ ಮೆಟ್ರೊ
ನಮ್ಮ ಮೆಟ್ರೊ

ಬೆಂಗಳೂರು: ಮೆಟ್ರೋ ನಿಲ್ದಾಣದಿಂದ ಕನಕಪುರ ರಸ್ತೆಯಲ್ಲಿರುವ ಮನೆಗಳಿಗೆ ಆಟೋರಿಕ್ಷಾ ಚಾಲಕರು ದುಬಾರಿ ಹಣದ ಬೇಡಿಕೆ ಇಟ್ಟಿದ್ದರಿಂದ ಅಲ್ಲಿನ ನಿವಾಸಿಗಳು ಇತ್ತೀಚೆಗೆ ನಡೆದ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಟ್ರಾಫಿಕ್ ಪೊಲೀಸರ ಸಹಾಯ ಪಡೆಯಬೇಕಾಯಿತು. ಹೀಗಾಗಿ, ದುಬಾರಿ ಹಣದ ಬೇಡಿಕೆಯನ್ನು ನಿವಾರಿಸಲು ಪೊಲೀಸರು ಹಂತ-1ರ 10 ಮೆಟ್ರೋ ನಿಲ್ದಾಣಗಳಲ್ಲಿ ಮತ್ತು ಹಂತ-2ರ ಕಾರ್ಯಾಚರಣಾ ನಿಲ್ದಾಣಗಳಲ್ಲಿ ಪ್ರೀ-ಪೇಯ್ಡ್ ಆಟೋ ಸ್ಟಾಂಡ್‌ಗಳನ್ನು ತೆರೆಯಲಿದ್ದಾರೆ.  

ಯಲಚೇನಹಳ್ಳಿ ಮತ್ತು ಸಿಲ್ಕ್ ಇನ್ಸ್‌ಟಿಟ್ಯೂಟ್ ನಡುವಿನ ಹಸಿರು ಲೈನ್ ವಿಸ್ತರಣೆಯನ್ನು ಕಳೆದ ವರ್ಷ ಜನವರಿ 15 ರಂದು ವಾಣಿಜ್ಯ ಕಾರ್ಯಾಚರಣೆಗಾಗಿ ತೆರೆಯಲಾಯಿತು. ಈ ವಿಸ್ತರಣೆಯ ಉದ್ದಕ್ಕೂ ಅಪಾರ್ಟ್‌ಮೆಂಟ್‌ಗಳಿದ್ದು, ನಿಲ್ದಾಣದಿಂದ ನಿವಾಸಕ್ಕೆ ತೆರಳಲು ಆಟೋಗಳು ಅಥವಾ ಕ್ಯಾಬ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ಚಾಲಕರು ಮನಸೋಇಚ್ಛೆ ಶುಲ್ಕ ವಿಧಿಸುತ್ತಿದ್ದಾರೆ. ಯಲಚೇನಹಳ್ಳಿ, ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಸಿಲ್ಕ್‌ಇನ್‌ಸ್ಟಿಟ್ಯೂಟ್ ಹೀಗೆ ಆರು ನಿಲ್ದಾಣಗಳಲ್ಲಿನ ಪ್ರಯಾಣಿಕರು ನಿತ್ಯ ಪರದಾಡುತ್ತಿದ್ದಾರೆ.

ಚೇಂಜ್‌ಮೇಕರ್ಸ್‌ ಆಫ್ ಕನಕಪುರದ ಅಧ್ಯಕ್ಷ ಅಬ್ದುಲ್ ಅಲೀಂ ಮಾತನಾಡಿ, 'ಈ ಆರು ನಿಲ್ದಾಣಗಳ ಜೊತೆಗೆ, ಜೆಪಿ ನಗರದಲ್ಲೂ ಮೆಟ್ರೋ ಪ್ರಯಾಣಿಕರು ಕಷ್ಟಪಡುತ್ತಿದ್ದಾರೆ. ಕಳೆದ ತಿಂಗಳು ವಾಜರಹಳ್ಳಿಯಲ್ಲಿ ಪೊಲೀಸ್ ಕಮಿಷನರ್ ಮತ್ತು ಇತರ ಉನ್ನತ ಪೊಲೀಸರೊಂದಿಗೆ ನಡೆದ ಸಭೆಯಲ್ಲಿ ನಾವು ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ' ಎಂದರು.

ಮಂತ್ರಿ ಟ್ರಾಂಕ್ವಿಲ್ ನಿವಾಸಿ ಲಕ್ಷ್ಮಿ ಬಾಲಾಜಿ ಮಾತನಾಡಿ, 'ನಮ್ಮ ಅಪಾರ್ಟ್‌ಮೆಂಟ್ ದೊಡ್ಡಕಲ್ಲಸಂದ್ರ ನಿಲ್ದಾಣದಿಂದ 1ಕಿಮೀಗಿಂತ ಕಡಿಮೆ ದೂರವಿದ್ದರೂ, ಆಟೋ ಚಾಲಕರು 60-70 ರೂ. ಕೇಳುತ್ತಾರೆ. ಕಳೆದ ತಿಂಗಳು ಉಬರ್ ಆಟೋಗೆ 94 ರೂಪಾಯಿ ನೀಡಿದ್ದೇನೆ. ಸ್ಥಳೀಯ ಆಟೋ  ಚಾಲಕರು ಅವರಿಂದ ಈ ಮಾಹಿತಿಯನ್ನು ಪಡೆಕದುಕೊಳ್ಳುತ್ತಾರೆ' ಎಂದು ಹೇಳಿದರು.

ಟ್ರಾಫಿಕ್ ಪಶ್ಚಿಮ ವಿಭಾಗದ ಡಿಸಿಪಿ ಕುಲದೀಪ್ ಜೈನ್ ಟಿಎನ್‌ಐಇ ಜೊತೆ ಮಾತನಾಡಿ, 'ನಾವು ಶೀಘ್ರದಲ್ಲೇ ಹತ್ತು ಮೆಟ್ರೋ ನಿಲ್ದಾಣಗಳಲ್ಲಿ ಪ್ರಿ-ಪೇಯ್ಡ್ ಆಟೋ ವ್ಯವಸ್ಥೆಯನ್ನು ತರುತ್ತೇವೆ. ಅವುಗಳಲ್ಲಿ ಬನಶಂಕರಿ ಮತ್ತು ಯಲಚೇನಹಳ್ಳಿ ಪ್ರಮುಖ ನಿಲ್ದಾಣಗಳಾಗಿವೆ' ಎಂದು ತಿಳಿಸಿದ್ದಾರೆ.

ದೊಡ್ಡಕಲ್ಲಸಂದ್ರ ಮೆಟ್ರೊ ನಿಲ್ದಾಣದ 1 ಕಿಮೀ ವ್ಯಾಪ್ತಿಯಲ್ಲಿರುವ ಕನಕಪುರ ರಸ್ತೆಯ ಗುಬ್ಬಲಾಲದ ಮಂತ್ರಿ ಟ್ರಾಂಕ್ವಿಲ್ ನಿವಾಸಿಗಳು ಆಟೋಗಳು ಮತ್ತು ಕ್ಯಾಬ್‌ಗಳ ಸುಲಿಗೆಗೆ ಕಡಿವಾಣ ಹಾಕಲು ವಾಟ್ಸಾಪ್ ಗ್ರೂಪ್ ರಚಿಸಿದ್ದಾರೆ. ವೈಯಕ್ತಿಕ ವಾಹನಗಳನ್ನು ಬಳಸುವವರು ಅಪಾರ್ಟ್‌ಮೆಂಟ್‌ನಿಂದ ನಿಲ್ದಾಣಕ್ಕೆ ಹೋಗುವಾಗ ಅಥವಾ ದೊಡ್ಡಕಲ್ಲಸಂದ್ರ ನಿಲ್ದಾಣದಿಂದ ಮನೆಗೆ ಹಿಂದಿರುಗುವಾಗ ಗುಂಪಿನಲ್ಲಿರುವ ಇತರರಿಗೆ ಮಾಹಿತಿಯನ್ನು ನೀಡುತ್ತಾರೆ. ಹೀಗೆ ಇಬ್ಬಿಬ್ಬರು ಸೇರಿ ನಿಲ್ದಾಣಕ್ಕೆ ತೆರಳುವ ಅಥವಾ ನಿಲ್ದಾಣದಿಂದ ಮನೆಗೆ ತೆರಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com