ರಾಜ್ಯದ ಕೈದಿಗಳೇ ನಿರ್ವಹಿಸಲಿರುವ ಪೆಟ್ರೋಲ್ ಬಂಕ್‌ಗಳ ಆರಂಭ; ಕಾರಾಗೃಹ ಇಲಾಖೆ ಯೋಜನೆ
ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಇದೀಗ ಕೈದಿಗಳನ್ನು ಬಳಸಿಕೊಂಡು ಹೊಸದಾಗಿ ಪೆಟ್ರೋಲ್ ಬಂಕ್‌ಗಳ ಸ್ಥಾಪನೆ ಮಾಡಲು ಯೋಜಿಸುತ್ತಿದೆ. ಈ ಪೆಟ್ರೋಲ್ ಬಂಕ್‌ಗಳನ್ನು ಕಾರಾಗೃಹಗಳಿಗೆ ಸಮೀಪವಿರುವ ಆಯ್ದ ಸ್ಥಳಗಳಲ್ಲಿ ಪ್ರಾರಂಭಿಸಲಾಗುವುದು ಮತ್ತು ಇಲಾಖೆ ಸಿಬ್ಬಂದಿ ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು ಎನ್ನಲಾಗಿದೆ.
Published: 18th August 2022 03:35 PM | Last Updated: 18th August 2022 04:34 PM | A+A A-

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಬೇಕರಿ ತಿನಿಸು, ಸಿದ್ಧ ಉಡುಪು ಹಾಗೂ ಕರಕುಶಲ ವಸ್ತುಗಳನ್ನು ತಯಾರಿಸಿ ಯಶಸ್ವಿಯಾಗಿರುವ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಇದೀಗ ಕೈದಿಗಳನ್ನು ಬಳಸಿಕೊಂಡು ಹೊಸದಾಗಿ ಪೆಟ್ರೋಲ್ ಬಂಕ್‌ಗಳ ಸ್ಥಾಪನೆ ಮಾಡಲು ಯೋಜಿಸುತ್ತಿದೆ. ಈ ಪೆಟ್ರೋಲ್ ಬಂಕ್‌ಗಳನ್ನು ಕಾರಾಗೃಹಗಳಿಗೆ ಸಮೀಪವಿರುವ ಆಯ್ದ ಸ್ಥಳಗಳಲ್ಲಿ ಪ್ರಾರಂಭಿಸಲಾಗುವುದು ಮತ್ತು ಇಲಾಖೆ ಸಿಬ್ಬಂದಿ ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು ಎನ್ನಲಾಗಿದೆ.
ರಾಜ್ಯದಲ್ಲಿ ಸುಮಾರು 100 ಕಾರಾಗೃಹಗಳಿವೆ. ಈ ಪೈಕಿ ಕೇಂದ್ರ, ಜಿಲ್ಲಾ, ಮುಕ್ತ ಮತ್ತು ತಾಲೂಕು ಮಟ್ಟದ ಜೈಲುಗಳಲ್ಲಿ 15,000 ಕ್ಕೂ ಹೆಚ್ಚು ಕೈದಿಗಳು ಇದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಈ ಯೋಜನೆಯು ಇಲಾಖೆಯ ಸುಧಾರಣೆ ಮತ್ತು ಪುನರ್ವಸತಿ ಕಾರ್ಯಗಳ ಭಾಗವಾಗಿದೆ.
'ನಾವು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಭಾರತ್ ಪೆಟ್ರೋಲಿಯಂ (ಬಿಪಿ) ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಕೈದಿಗಳು ಶಿಕ್ಷೆಯನ್ನು ಪೂರೈಸಿ ಹೊರಬಂದಾಗ ಅವರು ಪೆಟ್ರೋಲ್ ಬಂಕ್‌ಗಳಲ್ಲಿ ಉದ್ಯೋಗ ದೊರಕಿಸಿಕೊಳ್ಳಬಹುದು ಅಥವಾ ಸ್ವಂತವಾಗಿಯೇ ಪೆಟ್ರೋಲ್ ಬಂಕ್‌ಗಳನ್ನು ಪ್ರಾರಂಭಿಸಬಹುದು. ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ಕೆಲವು ರಾಜ್ಯಗಳಲ್ಲಿ ಇದೇ ರೀತಿಯ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ನಾವು ಕೂಡ ಕಾರ್ಯಸಾಧ್ಯತೆ ಮೇಲೆ ಕೆಲಸ ಮಾಡುತ್ತಿದ್ದೇವೆ' ಎಂದರು.
ಇದನ್ನೂ ಓದಿ: ಅಪರಾಧ ಹಿನ್ನೆಲೆ ಮರೆತು, ಒಗ್ಗಟ್ಟಿನಿಂದ ಶಿಕ್ಷಣ ಕಲಿತು ಅಕ್ಷರಸ್ಥರಾಗುತ್ತಿರುವ ಪರಪ್ಪನ ಅಗ್ರಹಾರ ಕೈದಿಗಳು!
ಯಾವೆಲ್ಲ ಸ್ಥಳಗಳಲ್ಲಿ ಬಂಕ್ ಸ್ಫಾಪನೆಯಾಗಲಿದೆ ಎನ್ನುವ ಬಗ್ಗೆ ಕೇಳಿದಾಗ, 'ಕಾರಾಗೃಹಗಳಿಗೆ ಹತ್ತಿರವಿರುವ ಸೂಕ್ತ ಸ್ಥಳಗಳನ್ನು ಗುರುತಿಸುತ್ತಿದ್ದೇವೆ. ಸಾಧ್ಯವಿರುವ ಕಡೆಯಲ್ಲೆಲ್ಲ ಇದನ್ನು ಮಾಡಲಾಗುವುದು. ಇದೊಂದು ವಾಣಿಜ್ಯ ಚಟುವಟಿಕೆಯಾಗಿದ್ದು, ಇಲ್ಲಿ ಕೆಲಸಕ್ಕೆ ನಿಯೋಜಿಸುವ ಮುನ್ನ ಕೈದಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು' ಎಂದು ತಿಳಿಸಿದ್ದಾರೆ.
ಒಂದು ಪೆಟ್ರೋಲ್ ಬಂಕ್‌ನಲ್ಲಿ ಕನಿಷ್ಠ 45 ಕೈದಿಗಳಿಗೆ ಮೂರು ಪಾಳಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ನೀಡಬಹುದು. ಪ್ರತಿ ಪಾಳಿಯಲ್ಲಿ 15 ಮಂದಿ ಕೆಲಸ ಮಾಡಬಹುದು. ಇದಕ್ಕಾಗಿ ಉತ್ತಮ ನಡತೆಯನ್ನು ಹೊಂದಿರುವ ಕೈದಿಗಳನ್ನು ಆಯ್ಕೆ ಮಾಡಲಾಗುವುದು. ಇದಲ್ಲದೆ, ಬಂಕ್‌ಗಳ ಪಕ್ಕದಲ್ಲೇ ಕಾರ್ ವಾಶ್ ಮತ್ತು ಇತರ ಸೇವೆಗಳನ್ನೂ ಕೂಡ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಕಾರಾಗೃಹ ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೋವಿಡ್ ನಿಂದಾಗಿ ವೃತ್ತಿಪರ ತರಬೇತಿಗಳು ಸ್ಥಗಿತ: ಮಹಿಳಾ ಕೈದಿಗಳ ಭವಿಷ್ಯ ಸಂಕಷ್ಟದಲ್ಲಿ!
ಸಿಸಿಟಿವಿ ಕ್ಯಾಮೆರಾಗಳಿಂದ ಕೈದಿಗಳ ಮೇಲೆ ನಿಗಾ
ಪೆಟ್ರೋಲ್ ಬಂಕ್‌ಗಳಲ್ಲಿ ಇತರೆ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಹೆಸರೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲಾಖೆಯು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹ ಸೇರಿದಂತೆ ವಿವಿಧ ಕಾರಾಗೃಹಗಳು ಮತ್ತು ಮೈಸೂರು ಮತ್ತು ಬೆಳಗಾವಿ ಜೈಲುಗಳಲ್ಲಿ ಬೇಕರಿ ಘಟಕಗಳನ್ನು ನಡೆಸುತ್ತಿದೆ. ಅಲ್ಲಿ ಬ್ರೆಡ್, ಬನ್, ಬಿಸ್ಕತ್ತುಗಳು, ಕೇಕ್‌ಗಳು ಮತ್ತು ಕುಕೀಸ್ ಸೇರಿದಂತೆ ಬೇಕರಿ ಉತ್ಪನ್ನಗಳನ್ನು ತಯಾರಿಸಿ 'ಪರಿವರ್ತನಾ' ಬ್ರಾಂಡ್ ಹೆಸರಿನಲ್ಲಿ ಸಾಮಾನ್ಯ ಜನರಿಗೆ ಮಾರಾಟ ಮಾಡಲಾಗುತ್ತಿದೆ.
ಇದಷ್ಟೇ ಅಲ್ಲದೆ, ಕೈದಿಗಳು ಲಡ್ಡು, ಮೈಸೂರು ಪಾಕ್, ದಿಲ್ ಪಸಂದ್ ಮತ್ತು ಖಾರಾ ಬೂಂದಿಯನ್ನು ಕೂಡ ಮಾಡುತ್ತಿದ್ದಾರೆ. ಇವುಗಳನ್ನು ಮಾರಾಟ ಮಾಡಲು ಕೂಡ ನಾವು ಬಂಕ್ ಪಕ್ಕದಲ್ಲಿಯೇ ಒಂದು ಔಟ್‌ಲೆಟ್ ಅನ್ನು ಕೂಡ ಸ್ಥಾಪಿಸಬಹುದು' ಎಂದು ಅಧಿಕಾರಿ ತಿಳಿಸಿದ್ದಾರೆ.