ಭಾರೀ ಮಳೆ: ಕೆರೆ ಒಡೆದು ಹೆದ್ದಾರಿ, ರೈಲು ಹಳಿ ತುಂಬೆಲ್ಲ ಪ್ರವಾಹ; ನಲುಗಿಹೋದ ರಾಮನಗರ

ಬೆಂಗಳೂರು-ಮೈಸೂರು ಹೆದ್ದಾರಿ, ರಾಮನಗರ ಜಿಲ್ಲೆ ನಿನ್ನೆ ಸೋಮವಾರ ಅಕ್ಷರಶಃ ಭಾರೀ ಮಳೆ-ಪ್ರವಾಹಕ್ಕೆ ನಲುಗಿ ಹೋಗಿತ್ತು.
ರಾಮನಗರ-ಚೆನ್ನಪಟ್ಟಣದ ಪ್ರವಾಹ ಪೀಡಿತ ಪ್ರದೇಶ
ರಾಮನಗರ-ಚೆನ್ನಪಟ್ಟಣದ ಪ್ರವಾಹ ಪೀಡಿತ ಪ್ರದೇಶ

ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿ, ರಾಮನಗರ ಜಿಲ್ಲೆ ನಿನ್ನೆ ಸೋಮವಾರ ಅಕ್ಷರಶಃ ಭಾರೀ ಮಳೆ-ಪ್ರವಾಹಕ್ಕೆ ನಲುಗಿ ಹೋಗಿತ್ತು.

ರಾಮನಗರ ಜಿಲ್ಲೆಯ ಭಕ್ಷಿ ಕೆರೆ ಒಡೆದ ಪರಿಣಾಮ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಹಾಗೂ ರೈಲು ಹಳಿಗಳು ಜಲಾವೃತಗೊಂಡು ರಾಮನಗರ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಭಾರೀ ಮಳೆಗೆ ನೂರಾರು ಮನೆಗಳಿಗೆ ಹಾನಿ, ಆಹಾರ ಧಾನ್ಯಗಳು, ಬೆಳೆದ ಬೆಳೆಗಳು ನಾಶವಾಗಿದ್ದು, ಸಾವಿರಾರು ಜಾನುವಾರುಗಳು ಮೃತಪಟ್ಟಿವೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದ್ದು, ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್‌ ಹೆದ್ದಾರಿಯಲ್ಲಿ ಸಿಲುಕಿಕೊಂಡ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ರಕ್ಷಣಾ ಕಾರ್ಯಾಚರಣೆಗಾಗಿ 25 ಸಿಬ್ಬಂದಿಯನ್ನು ಒಳಗೊಂಡ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲಾಗಿತ್ತು. ಚನ್ನಪಟ್ಟಣದಲ್ಲಿ ನಾಲ್ಕು ಮತ್ತು ರಾಮನಗರದಲ್ಲಿ ಐದು ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 

ಮೊನ್ನೆ ಶನಿವಾರದಿಂದ ಸುಮಾರು 900 ಜನರಿಗೆ ಪರಿಹಾರ ಕೇಂದ್ರಗಳಲ್ಲಿ ಆಹಾರ ನೀಡಲಾಗುತ್ತಿದೆ ಎಂದು ರಾಮನಗರ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದ್ದಾರೆ. ಕೆಲವು ರೈಲುಗಳು ತಡವಾಗಿದ್ದರಿಂದ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿತು. ರಾಮನಗರ ಮತ್ತು ಚನ್ನಪಟ್ಟಣ ನಿಲ್ದಾಣಗಳಿಂದ ನೀರನ್ನು ಹೊರಹಾಕಿದ ನಂತರ ರೈಲು ಸಂಚಾರ ಪುನರಾರಂಭಗೊಂಡಿತು. 

ರಾಮನಗರ ಪಟ್ಟಣದಲ್ಲಿ 113 ಮನೆಗಳಿಗೆ ಹಾನಿ: ಸಿಎಂ ಬೊಮ್ಮಾಯಿ ಅವರು ಹೆಲಿಕಾಪ್ಟರ್ ಮೂಲಕ ನಿನ್ನೆ ರಾಮನಗರಕ್ಕೆ ತೆರಳಿ ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಿಸಿದರು. ಮಾರುತಿ ಎಕ್ಸ್‌ಟೆನ್ಶನ್‌ನಲ್ಲಿ ಬಕ್ಷಿ ಕೆರೆ ಒತ್ತುವರಿಯಿಂದ ಆಗಿರುವ ಹಾನಿಯನ್ನು ಪರಿಶೀಲಿಸಿದರು. ಅಲ್ಲಿಂದ ರೈಲು ಹಳಿ ಮೇಲೆ ನಡೆದು ಸಂತ್ರಸ್ತ ಜನರನ್ನು ಭೇಟಿ ಮಾಡಿದರು.

ರಾಮನಗರ ಪಟ್ಟಣದಲ್ಲಿ 113 ಸೇರಿದಂತೆ 2,222 ಮನೆಗಳು ಭಾಗಶಃ ಹಾನಿಗೊಳಗಾಗಿವೆ, 3,863 ಮನೆಗಳಿಗೆ ನೀರು ನುಗ್ಗಿ 5,000 ಕ್ಕೂ ಹೆಚ್ಚು ಜಾನುವಾರುಗಳು ನಷ್ಟವಾಗಿವೆ ಎಂದು ಸಿಎಂ ಬೊಮ್ಮಾಯಿ ಅವರಿಗೆ ವಿವರ ನೀಡಲಾಗಿದೆ. 600 ಎಕರೆ ಬಯಲು ಭೂಮಿಯಲ್ಲಿನ ಬೆಳೆಗಳು ಮತ್ತು 500 ಎಕರೆ ತೋಟಗಾರಿಕೆ ತೋಟಗಳು ಹಾನಿಗೊಳಗಾಗಿವೆ.

ರೇಷ್ಮೆ ಗೂಡು ರೀಲಿಂಗ್ ಕಾರ್ಖಾನೆಗಳು ಮತ್ತು ವಸತಿ ಗೃಹಗಳಲ್ಲಿನ ನಷ್ಟಕ್ಕೆ ಪರಿಹಾರದ ಬಗ್ಗೆ ಯಾವುದೇ ಮಾರ್ಗಸೂಚಿಗಳಿಲ್ಲದ ಕಾರಣ, ಇದನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಗಾಂಧಿಗ್ರಾಮದಲ್ಲಿ ಗುಡಿಸಲುಗಳು ಹಾಳಾಗಿರುವ 50 ಎಸ್‌ಸಿ/ಎಸ್‌ಟಿ ಕುಟುಂಬಗಳನ್ನು ಸ್ಥಳಾಂತರಿಸಿ ಪಕ್ಕಾ ಮನೆಗಳನ್ನು ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಶಾಲಾ-ಕಾಲೇಜುಗಳಿಗೆ ರಜೆ: ಇಂದು ಮಂಗಳವಾರ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್ ಮಂಗಳವಾರ ನಗರದ ಎಲ್ಲಾ ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. 

ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ಸಾವು: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭಾರೀ ಮಳೆಗೆ ಬಿಡದಿ ಸಮೀಪದ ತೊರೆದೊಡ್ಡಿ ಗ್ರಾಮದಲ್ಲಿ ನಿನ್ನೆ ಕಾರಿನ ಮೇಲೆ ಮರ ಬಿದ್ದು 52 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಬಸ್ಸುಗಳ ಸಂಚಾರ ಬದಲಾವಣೆ: ಜನನಿಬಿಡ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿನ್ನೆ ಕನಕಪುರ-ಹಾರೋಹಳ್ಳಿ ಮತ್ತು ಮಳವಳ್ಳಿ ಮೂಲಕ ಮೈಸೂರು ಕಡೆಗೆ ತೆರಳುತ್ತಿದ್ದ ಹಲವಾರು ಕೆಎಸ್ ಆರ್ ಟಿಸಿ ಬಸ್ಸುಗಳನ್ನು ಪ್ರವಾಹ ಹಿನ್ನೆಲೆಯಲ್ಲಿ ಬೇರೆ ಮಾರ್ಗ ಮೂಲಕ ತಿರುಗಿಸಲಾಯಿತು. ರಾಮನಗರ ಬಳಿಯ ರೈಲ್ವೆ ಕೆಳಸೇತುವೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಕಾರು ಸಿಕ್ಕಿಹಾಕಿಕೊಂಡು ಕೊನೆಗೆ ರಕ್ಷಣಾ ತಂಡ ಆಗಮಿಸಿ ತೆರವುಗೊಳಿಸಿದವು. ಮೈಸೂರಿನಿಂದ ಬೆಂಗಳೂರಿಗೆ ಬರುವ ಹಾಗೂ ಚನ್ನಪಟ್ಟಣ ಕಡೆಗೆ ತೆರಳುತ್ತಿದ್ದ ಪ್ರಯಾಣಿಕರು ಪರದಾಡುವಂತಾಯಿತು ಎಂದು ರಾಮನಗರ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಇಡೀ ದಿನ ಸುರಿದ ಧಾರಾಕಾರ ಮಳೆಗೆ ಕುಂಬಳಗೋಡು ಬಳಿ 10ಕ್ಕೂ ಹೆಚ್ಚು ಬೈಕ್‌ಗಳು ಕೊಚ್ಚಿ ಹೋಗಿವೆ. ಜಲಾವೃತಗೊಂಡ ಹೆದ್ದಾರಿಯಲ್ಲಿ ಗ್ರಾಮಸ್ಥರು ಮೀನುಗಾರಿಕೆ ನಡೆಸುತ್ತಿರುವುದು ಕಂಡುಬಂತು. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಜಲಾವೃತಗೊಂಡ ಬೆಂಗಳೂರು-ಮೈಸೂರು ಹೆದ್ದಾರಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಬೆಳಿಗ್ಗೆ 8 ಗಂಟೆಯಿಂದ 249 ಬಸ್‌ಗಳನ್ನು ಬೇರೆ ಮಾರ್ಗ ಮೂಲಕ ಕಳುಹಿಸಲಾಯಿತು. ಸಂಜೆಯ ಹೊತ್ತಿಗೆ ನೀರು ಹೊರಹೋಗಿದ್ದರಿಂದ ರಾಮನಗರ ಮಾರ್ಗವಾಗಿ ಹೋಗಲು ಅನುಮತಿ ನೀಡಲಾಯಿತು. "ನಾವು ಮುಂದಿನ ಎರಡು ದಿನಗಳವರೆಗೆ ಪರಿಸ್ಥಿತಿಯನ್ನು ನೋಡಿಕೊಂಡು ಸಂಚಾರ ಮಾಡಲಿದ್ದೇವೆ ಎಂದರು.

ಚಲಿಸುತ್ತಿದ್ದ ಕಾರಿನ ಮೇಲೆ ಆಲದ ಮರ ಉರುಳಿಬಿದ್ದು ದುರ್ಮರಣಕ್ಕೀಡಾದ ಬಿಡದಿಯ ಇಟ್ಟಮಡು ನಿವಾಸಿ ಬೋರೆಗೌಡರ ನಿವಾಸಕ್ಕೆ ಬೆಳಗ್ಗೆ ಭೇಟಿ ನೀಡಿ ಸಾಂತ್ವನ ಹೇಳಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com