ಚಂದಾಪುರ ಕೆರೆ ರಕ್ಷಿಸಲು ವಿಫಲ: 500 ಕೋಟಿ ರೂ. ದಂಡ ಆದೇಶ ಮಾರ್ಪಾಡು ಕೋರಿದ್ದ ಸರ್ಕಾರದ ಮನವಿ ವಜಾಗೊಳಿಸಿದ ಎನ್‌ಜಿಟಿ
ಬೆಂಗಳೂರಿನ ಚಂದಾಪುರ ಕೆರೆ ಸಂರಕ್ಷಿಸಲು ವಿಫಲವಾದ ಕಾರಣಕ್ಕೆ 500 ಕೋಟಿ ರೂ ದಂಡ ವಿಧಿಸಿರುವ ಆದೇಶ ಮಾರ್ಪಾಡು ಮಾಡುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು (ಎನ್‌ಜಿಟಿ) ವಜಾ ಮಾಡಿದೆ.
Published: 03rd December 2022 04:34 PM | Last Updated: 03rd December 2022 06:28 PM | A+A A-

ಎನ್ ಜಿಟಿ
ನವದೆಹಲಿ: ಬೆಂಗಳೂರಿನ ಚಂದಾಪುರ ಕೆರೆ ಸಂರಕ್ಷಿಸಲು ವಿಫಲವಾದ ಕಾರಣಕ್ಕೆ 500 ಕೋಟಿ ರೂ ದಂಡ ವಿಧಿಸಿರುವ ಆದೇಶ ಮಾರ್ಪಾಡು ಮಾಡುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು (ಎನ್‌ಜಿಟಿ) ವಜಾ ಮಾಡಿದೆ.
ಕೆರೆ ಸಂರಕ್ಷಿಸುವ ವಿಚಾರದಲ್ಲಿ ರಾಜ್ಯ ಸರ್ಕಾರವು ದಯನೀಯವಾಗಿ ವಿಫಲವಾಗಿದೆ ಎಂದು ನ್ಯಾಯಮೂರ್ತಿಗಳಾದ ಆದರ್ಶ್ ಕುಮಾರ್ ಗೋಯಲ್ ಮತ್ತು ಸುಧೀರ್ ಅಗರ್ವಾಲ್ ಹಾಗೂ ತಜ್ಞ ಸದಸ್ಯರಾದ ಪ್ರೊ. ಎ ಸೆಂಥಿಲ್ ವೇಲ್ ಅವರನ್ನು ಒಳಗೊಂಡ ಪೀಠವು ಅಭಿಪ್ರಾಯಪಟ್ಟಿದ್ದು, ರಾಜ್ಯದ ಅಧಿಕಾರಿಗಳ ಗಂಭೀರ ವೈಫಲ್ಯವು ಶಾಸನಬದ್ಧ ಆದೇಶವನ್ನು ಮಾತ್ರವಲ್ಲದೆ ಸುಪ್ರೀಂ ಕೋರ್ಟ್ ವಿಧಿಸಿರುವ ಸಮಯಾವಧಿಯನ್ನೂ ಉಲ್ಲಂಘಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ: ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲ: ಕರ್ನಾಟಕಕ್ಕೆ 2,900 ಕೋಟಿ ರೂ. ದಂಡ ವಿಧಿಸಿದ ಎನ್‌ಜಿಟಿ
ಕೆರೆ ಸಂರಕ್ಷಣೆಗೆ ಪರಿಹಾರ ಕ್ರಮಕೈಗೊಳ್ಳಲು 3-4 ವರ್ಷಗಳು ಬೇಕಾಗುವುದರಿಂದ ಕೂಡಲೇ ಮೊತ್ತವನ್ನು ಜಮಾ ಮಾಡುವಂತೆ ಸೂಚಿಸಿರುವುದು ಸಮರ್ಥನೀಯವಲ್ಲ ಎಂದು ರಾಜ್ಯ ಸರ್ಕಾರವು ಅರ್ಜಿಯಲ್ಲಿ ವಾದಿಸಿತ್ತು. ಆದರೆ ಜಲ ಮಾಲಿನ್ಯ ನಿಯಂತ್ರಣ ಮತ್ತು ಸೂಕ್ತವಾದ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಬೇಕಾದ ಸಮಯ ಮೀರಿರುವುದರಿಂದ ಕಾಲಾವಕಾಶ ವಿಸ್ತರಿಸಲಾಗದು ಎಂದು ಎನ್‌ಜಿಟಿ ಹೇಳಿದೆ.
ಅಲ್ಲದೇ, ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಸಮಯವನ್ನು ಉಲ್ಲಂಘಿಸಿ ರಾಜ್ಯವು ತನ್ನದೇ ಆದ ಸಮಯ ನಿಗದಿಪಡಿಸಿಕೊಳ್ಳುತ್ತಿದ್ದು, ನಿರ್ಭಯದಿಂದ ಸರ್ಕಾರವು ಕಾನೂನು ಉಲ್ಲಂಘಿಸುತ್ತಿದೆ. ಎನ್‌ಜಿಟಿ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ರಾಜ್ಯ ಸರ್ಕಾರ ಸಿದ್ಧವಿಲ್ಲ. ಆದರೆ ಅಸಮರ್ಥನೀಯ ವಾದವನ್ನು ಅರ್ಜಿಯಲ್ಲಿ ಮಂಡಿಸಿದೆ” ಎಂದು ಎನ್‌ಜಿಟಿ ಹೇಳಿದೆ.
ಇದನ್ನೂ ಓದಿ: ಒತ್ತುವರಿ ತೆರವುಗೊಳಿಸಲು ನೋಟಿಸ್ ನೀಡುವ ಅಗತ್ಯವಿಲ್ಲ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ
ಪರ್ಯಾವರಣ್ ಸುರಕ್ಷಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸಲಾಗಿಲ್ಲ ಎಂಬುದು ಸೇರಿದಂತೆ ಈಗಾಗಲೇ ಆಗಿರುವ ಉಲ್ಲಂಘನೆಗೆ ದಂಡ ವಿಧಿಸಿಲಾಗಿದೆ. ದಂಡ ಪಾವತಿಸುವುದು ತಡವಾದರೆ ಪ್ರತ್ಯೇಕವಾಗಿ ಹೊಣೆಗಾರಿಕೆ ನಿಗದಿಪಡಿಸಲಾಗುವುದು ಎಂದು ಎನ್‌ಜಿಟಿ ಹೇಳಿದೆ.