ಬೆಂಗಳೂರು: ಸುಮಾರು 240 ಕೋಟಿ ರೂ. ವೆಚ್ಚದಲ್ಲಿ ಪಾದರಾಯನಪುರ ಮುಖ್ಯರಸ್ತೆ ಅಗಲೀಕರಣ- ವಿ. ಸೋಮಣ್ಣ

ಸುಮಾರು 240 ಕೋಟಿ ರೂ. ವೆಚ್ಚದಲ್ಲಿ ಪಾದರಾಯನಪುರ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು  ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. 
ಸಚಿವ ವಿ. ಸೋಮಣ್ಣ ಅವರೊಂದಿಗೆ ಶಾಸಕ ಜಮೀರ್ ಅಹ್ಮದ್ ಖಾನ್
ಸಚಿವ ವಿ. ಸೋಮಣ್ಣ ಅವರೊಂದಿಗೆ ಶಾಸಕ ಜಮೀರ್ ಅಹ್ಮದ್ ಖಾನ್

ಬೆಂಗಳೂರು:  ಸುಮಾರು 240 ಕೋಟಿ ರೂ. ವೆಚ್ಚದಲ್ಲಿ ಪಾದರಾಯನಪುರ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು  ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. 

ವಿಧಾನಸೌಧದಲ್ಲಿಂದು ನಡೆದ  ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿರ್ಸಿ ವೃತ್ತ(ಬಿನ್ನಿಮಿಲ್ ಟ್ಯಾಂಕ್ ಬಂಡ್ ರಸ್ತೆ)ದಿಂದ ವಿಜಯನಗರ ಪೈಪ್ ಲೈನ್ ವರೆಗೆ ಒಟ್ಟು 1.8 ಕಿ.ಮೀ ಉದ್ದದ ಪಾದರಾಯನಪುರ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡುವ ಸಲುವಾಗಿ ಪಾಲಿಕೆಯ ಅಭಿಯಂತರರು, ನಗರ ಯೋಜನೆ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಗಳ ಜೊತೆ ಸಭೆ ನಡೆಸಲಾಯಿತು ಎಂದು ಹೇಳಿದರು. 

ಪಾದರಾಯನಪುರ ರಸ್ತೆ ಅಗಲೀಕರಣದಲ್ಲಿ ಯಾವುದೇ ಧಾರ್ಮಿಕ ಸ್ಥಳಗಳಿಗೆ ಧಕ್ಕೆಯಾಗದಂತೆ ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದೆ. ರಸ್ತೆ ಅಗಲೀಕರಣ ಮಾಡುವ ವಿಚಾರವಾಗಿ 2017ರಲ್ಲಿ ಟಿಡಿಆರ್ ನೀಡಲು ಸ್ಥಳೀಯರಲ್ಲಿ ಒಪ್ಪಿಸಲಾಗಿತ್ತು. ಆದರೆ ಟಿಡಿಆರ್ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿರುವುದರಿಂದ ಸುಪ್ರೀಂ ಕೋರ್ಟ್ ನ ಸೂಚನೆಯ ಮೇರೆಗೆ ಪ್ರಸ್ತುತವಿರುವ ದರದಂತೆ ಸ್ಥಳೀಯರಿಗೆ ಪರಿಹಾರದ ಮೊತ್ತವನ್ನು ನೀಡಲಾಗುವುದು ಎಂದರು.

ಬಡ ವರ್ಗದ ಜನ ವಾಸಿಸುವ ಸ್ಥಳದಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕಾದರೆ ಹಾಗೂ ನಾಗರಿಕತೆಯನ್ನು ಹೆಚ್ಚಿನ ಮಟ್ಟಕ್ಕೆ ಕೊಂಡಯ್ಯಬೇಕಾದರೆ ರಸ್ತೆಗಳು ಹಾಗೂ ಮೂಲಭೂತಸೌಕರ್ಯ ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪಾದರಾಯನಪುರ ರಸ್ತೆ ಅಗಲೀಕರಣ ಮಾಡಿದಲ್ಲಿ ಸ್ಥಳೀಯ ಪ್ರದೇಶ ಸಾಕಷ್ಟು ಅಭಿವೃದ್ಧಿಯಾಗಲಿದೆ. ಇದರಿಂದ ಚಾಮರಾಜಪೇಟೆ, ವಿಜಯನಗರ ಹಾಗೂ ಗೋವಿಂದರಾಜನಗರದ ಸುತ್ತಮುತ್ತಲಿನ ಜನಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು. 

ಒಂದು ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣ: ಪಾದರಾಯನಪುರ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಿ ಕೆಲಸ ಪ್ರಾರಂಭಿಸಲಾಗುವುದು. ಆ ಬಳಿಕ ಖಾಸಗಿ ಸ್ವತ್ತುಗಳ ಮಾಲೀಕರಿಗೆ ಸೂಕ್ತ ಪರಿಹಾರವನ್ನು ಹಂತ-ಹಂತವಾಗಿ ನೀಡಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com