ಕಾನೂನು ಉಲ್ಲಂಘನೆ ಮಾಡಿದರೆ ಮಹಾರಾಷ್ಟ್ರ ಸಚಿವರ ಮೇಲೂ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ
ಮಹಾರಾಷ್ಟ್ರ ರಾಜ್ಯ ಸಚಿವರು ಬೆಳಗಾವಿಗೆ ಭೇಟಿ ನೀಡಿ ಕಾನೂನು ಉಲ್ಲಂಘನೆ ಮಾಡಿದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
Published: 05th December 2022 12:50 PM | Last Updated: 05th December 2022 03:09 PM | A+A A-

ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು: ಮಹಾರಾಷ್ಟ್ರ ರಾಜ್ಯ ಸಚಿವರು ಬೆಳಗಾವಿಗೆ ಭೇಟಿ ನೀಡಿ ಕಾನೂನು ಉಲ್ಲಂಘನೆ ಮಾಡಿದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಗೆ ಆಗಮಿಸುತ್ತಿರೋ ಮಹಾರಾಷ್ಟ್ರದ ಸಚಿವರ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಯಾರೇ ಕಾನೂನು ಉಲ್ಲಂಘನೆ ಮಾಡಿದರೂ ಅವರ ಮೇಲೆ ಕ್ರಮ ತಗೋತೀವಿ. ಅವರು ಸಚಿವರು ಆದರೂ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಸಿಎಂ ಅವರು ಇದರ ಬಗ್ಗೆ ಸಂಪೂರ್ಣವಾಗಿ ಹೇಳಿದ್ದಾರೆ. ನಮ್ಮ ರಾಜ್ಯ-ಮಹಾರಾಷ್ಟ್ರದ ಡಿಜಿಗಳು, ಎಡಿಜಿಪಿಗಳ ಸಭೆ ನಡೆದಿದೆ. ಇದೀಗ ಭಾವನಾತ್ಮಕವಾಗಿ ಏನಾದರೂ ಕೆಣಕಲು ಬಂದರೆ ನಾವು ಬಿಡುವುದಿಲ್ಲ. ಈ ಬಗ್ಗೆ ಪೊಲೀಸರು ಎರಡು ಭಾಗದ ಜನರಿಗೆ ಎಚ್ಚರಿಕೆ ನೀಡಿದ್ದಾರೆಂದು ತಿಳಿಸಿದರು.
ಇದನ್ನೂ ಓದಿ: ಗಡಿ ವಿವಾದ: ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರಲು ಬಿಡುವುದಿಲ್ಲ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ್
ಕೋರ್ಟ್ ನಲ್ಲಿ ಪ್ರಕರಣವಿದೆ. ಹೀಗಿರುವಾಗ ಅನಾವಶ್ಯಕ ಗೊಂದಲ, ಶಾಂತಿ ಸುವ್ಯವಸ್ಥೆ ಹಾಳು ಮಾಡುವುದು ಸರಿಯಲ್ಲ. ನೆಲ ಜಲ, ಭಾಷೆ ಬಗ್ಗೆ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದಿದ್ದೇ ಆದರೆ, ಅವರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂಬುದರ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸುತ್ತೇನೆ ಎಂದರು.
ಬೆಳಗಾವಿ ಈಗ ಶಾಂತಿಯುತವಾಗಿದೆ. ಅದನ್ನ ಹಾಳು ಮಾಡಬಾರದು. ಅದು ಯುದ್ದ ರಂಗ ಅಲ್ಲ. ಎಲ್ಲರೂ ಶಾಂತವಾಗಿರಬೇಕು. ಇಲ್ಲಿಂದ ಅಲ್ಲಿಗೆ ಜನರು ಹೋಗಿ, ಅಲ್ಲಿಂದ ಇಲ್ಲಿಗೆ ಜನರು ಬಂದು ಕುಸ್ತಿ ಆಡಬಾರದು. ನೆಲ, ಜಲ, ಭಾಷೆಗೆ ನಮ್ಮ ಬದ್ಧತೆ ಇದೆ. ಯಾರೇ ಕಾನೂನು ಉಲ್ಲಂಘನೆ ಮಾಡಿದರೂ ಕ್ರಮ ಕೈಗೊಳ್ಳುತ್ತೇವೆಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಗಡಿ ವಿವಾದ ಬಿಸಿಯಾಗಿರುವ ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವರು ರಾಜ್ಯಕ್ಕೆ ಬರುವುದು ಸೂಕ್ತವಲ್ಲ: ಸಿಎಂ ಬೊಮ್ಮಾಯಿ
ನಮ್ಮ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಎರಡು ರಾಜ್ಯಗಳು ಶಾಂತಿ ಸುವ್ಯವಸ್ಥೆ ಕಾಪಾಡಲು ನಾನೂ ಮನವಿ ಮಾಡುತ್ತೇನೆ. ಬೆಳಗಾವಿ ರಣರಂಗ ಆಗಬಾರದು. ಅದಕ್ಕೆ ನಾವು ಅವಕಾಶ ಕೊಡೊಲ್ಲ ಎಂದು ಸ್ಪಷ್ಟಪಡಿಸಿದರು.