
ಪ್ರತ್ಯಕ್ಷ ದೃಶ್ಯ
ಮಂಗಳೂರು: ಲವ್ ಜಿಹಾದ್ ಆರೋಪ ಮಾಡಿ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯ ಮೇಲೆ ಹಿಂದೂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಾಭರಣ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಹಿಂದೂ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ನಡೆಸಿದ್ದಾರೆ. ಮುಸ್ಲಿಂ ಯುವಕ ಮತ್ತು ಆತನ ಸಹೋದ್ಯೋಗಿ ಹಿಂದೂ ಮಹಿಳೆಯ ಮೇಲೆ ಹಿಂದುತ್ವವಾದಿ ಕಾರ್ಯಕರ್ತರು ಮಹಿಳೆಯ ಪೋಷಕರ ಸಮ್ಮುಖದಲ್ಲಿ ಹಲ್ಲೆ ನಡೆಸಿದ್ದಾರೆ.
ಉಳ್ಳಾಲದ ಲುಕ್ಮಾನ್ ಎಂಬ ಮುಸ್ಲಿಂ ಯುವಕನ ಜೊತೆ ಶೃಂಗೇರಿ ಸಮೀಪದ ಕೊಪ್ಪ ನಿವಾಸಿ ಯುವತಿ ಸುತ್ತಾಡುತ್ತಿದ್ದು ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿತ್ತು.
ಮಂಗಳವಾರ ಸಂಜೆ 10ಕ್ಕೂ ಹೆಚ್ಚು ಹಿಂದುತ್ವ ಪರ ಕಾರ್ಯಕರ್ತರು ಚಿನ್ನಾಭರಣ ಅಂಗಡಿಗೆ ನುಗ್ಗಿ ಮುಸ್ಲಿಂ ಯುವಕನ ಮೇಲೆ 'ಲವ್ ಜಿಹಾದ್' ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ. ಇದೇ ಯುವತಿಯ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ. ಕದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ಠಾಣೆಗೆ ಕರೆದೊಯ್ದಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಮಂಗಳೂರು: ಬಲವಂತದ ಮತಾಂತರಕ್ಕೆ ಒತ್ತಾಯ; ಮೂವರ ವಿರುದ್ಧ ಪ್ರಕರಣ ದಾಖಲು
ಪೊಲೀಸ್ ಠಾಣೆಯಲ್ಲಿ ಈ ಸಂಬಂಧ 3 ಪ್ರಕರಣಗಳು ದಾಖಲಾಗಿದೆ ಎಂದು ಆಯುಕ್ತ ಶಶಿಕುಮಾರ್ ತಿಳಿಸಿದರು. ಸಂತ್ರಸ್ತ ಯುವಕ ಹಲ್ಲೆ ಮತ್ತು ಗಲಭೆಯ ಬಗ್ಗೆ ದೂರು ನೀಡಿದ್ದು, ಹಿಂದುತ್ವ ಪರ ಕಾರ್ಯಕರ್ತರು ಮತ್ತು ಯುವತಿಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಏತನ್ಮಧ್ಯೆ, ಮುಸ್ಲಿಂ ಯುವಕ ತನ್ನನ್ನು ನಿಂದಿಸಿದ್ದು ಅಲ್ಲದೆ ಗಂಭೀರ ಪರಿಣಾಮ ಬೀರುವ ಬೆದರಿಕೆ ಹಾಕಿದ್ದಾನೆ ಎಂದು ಯುವತಿಯ ತಾಯಿ ದೂರಿದ್ದಾರೆ. ಇನ್ನು ಆಭರಣ ಅಂಗಡಿಯವರು ಅತಿಕ್ರಮಿಸಿ ಗಲಾಟೆ ಮಾಡಿದ್ದಾರೆ ಎಂದು ದೂರಿದ್ದಾರೆ. ಆದರೆ ಇಲ್ಲಿಯವರೆಗೂ ಈ ಸಂಬಂಧ ಇನ್ನೂ ಯಾರನ್ನು ಬಂಧಿಸಿಲ್ಲ.