ಮಂಗಳೂರು: ಬಲವಂತದ ಮತಾಂತರಕ್ಕೆ ಒತ್ತಾಯ; ಮೂವರ ವಿರುದ್ಧ ಪ್ರಕರಣ ದಾಖಲು
ಮಂಗಳೂರು ನಗರದಲ್ಲಿ ಹಿಂದೂ ಮಹಿಳೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲು ಯತ್ನಿಸಿದ ಆರೋಪದ ಮೇಲೆ ವೈದ್ಯೆ ಸೇರಿದಂತೆ ಮೂವರ ವಿರುದ್ಧ ಇಲ್ಲಿನ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Published: 28th November 2022 01:07 PM | Last Updated: 28th November 2022 01:07 PM | A+A A-

ಸಂಗ್ರಹ ಚಿತ್ರ
ಮಂಗಳೂರು: ನಗರದಲ್ಲಿ ಹಿಂದೂ ಮಹಿಳೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲು ಯತ್ನಿಸಿದ ಆರೋಪದ ಮೇಲೆ ವೈದ್ಯೆ ಸೇರಿದಂತೆ ಮೂವರ ವಿರುದ್ಧ ಇಲ್ಲಿನ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತೆಯ ತಾಯಿ ಶಿವಾನಿ (22) ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳಾದ ಖಲೀಲ್, ಡಾ. ಜಮೀಲಾ ಮತ್ತು ಐಮನ್ ವಿರುದ್ಧ ಐಪಿಸಿ ಮತ್ತು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆಯ ಸೆಕ್ಷನ್ 3 ಮತ್ತು 5 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸಂತ್ರಸ್ತೆಯ ತಾಯಿ ನೀಡಿರುವ ದೂರಿನ ಪ್ರಕಾರ, ಫ್ಯಾನ್ಸಿ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಶಿವಾನಿ ತನ್ನ ಮೊಬೈಲ್ ಫೋನ್‌ಗೆ ಖಲೀಲ್‌ಗೆ ಸೇರಿದ ಅಂಗಡಿಯಲ್ಲಿ ರೀಚಾರ್ಜ್ ಮಾಡಿಸುತ್ತಿದ್ದಳು. ಆಕೆಯೊಂದಿಗೆ ಸ್ನೇಹ ಬೆಳೆಸಿದ ಆತ, ಉತ್ತಮ ಸಂಬಳ ದೊರೆಯುವ ಕೆಲಸ ಕೊಡಿಸುವುದಾಗಿ 2021 ರಲ್ಲಿ ಭರವಸೆ ನೀಡಿದ್ದಾನೆ.
ಆತ ಆಕೆಯನ್ನು ತನ್ನ ಸಂಬಂಧಿಕರ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಹೆಸರನ್ನು ಆಯಿಷಾ ಎಂದು ಬದಲಾಯಿಸಿದ ನಂತರ ನಮಾಜ್ ಮಾಡಲು ಮತ್ತು ಕುರಾನ್ ಪಠಿಸಲು ಒತ್ತಾಯಿಸಲಾಗಿದೆ. ಅಲ್ಲದೆ, ಖಲೀಲ್ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬಲವಂತದ ಧಾರ್ಮಿಕ ಮತಾಂತರ 'ಬಹಳ ಗಂಭೀರ' ವಿಷಯ: ಸುಪ್ರೀಂ ಕೋರ್ಟ್
ನಂತರ ಆಕೆಯನ್ನು ಹೊಸ ಕೆಲಸಕ್ಕಾಗಿ ಬೇರೆ ಸ್ಥಳಕ್ಕೆ ಕರೆದೊಯ್ಯಲಾಯಿತು. ತನ್ನ ಮಗಳು ಉದ್ಯೋಗಕ್ಕಾಗಿ ಡಾ. ಜಮೀಲಾ ಅವರ ಮನೆಗೆ ಸೇರಿದ್ದಳು. ಅಲ್ಲಿ ಬುರ್ಖಾ ಧರಿಸುವಂತೆ ಒತ್ತಾಯಿಸಲಾಗಿದೆ. ಅದೇ ವೇಳೆ, ಐಮನ್ ಎಂಬ ವ್ಯಕ್ತಿ ಇನ್‌ಸ್ಟಾಗ್ರಾಂ ಮೂಲಕ ಸಂತ್ರಸ್ತೆಯನ್ನು ಸಂಪರ್ಕಿಸಿ ತನ್ನೊಂದಿಗೆ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾನೆ ಎಂದು ತಿಳಿಸಿದ್ದಾರೆ.
ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ ಮೂವರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಾನಿ ಕೋರಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.