ಕರ್ನಾಟಕ ಸೇರಲು ಮಹಾರಾಷ್ಟ್ರದ ಮತ್ತೊಂದು ಗ್ರಾಮ ಉತ್ಸುಕ..!

ಮಹಾರಾಷ್ಟ್ರದ ಹಲವು ಗಡಿ ಗ್ರಾಮ ಪಂಚಾಯಿತಿಗಳು ಏಕನಾಥ ಶಿಂಧೆ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದು, ಕೂಡಲೇ ಮೂಲ ಸೌಕರ್ಯ ಕಲ್ಪಿಸದಿದ್ದಲ್ಲಿ ತಮ್ಮ ಗ್ರಾಮಗಳನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಮಹಾರಾಷ್ಟ್ರದ ಹಲವು ಗಡಿ ಗ್ರಾಮ ಪಂಚಾಯಿತಿಗಳು ಏಕನಾಥ ಶಿಂಧೆ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದು, ಕೂಡಲೇ ಮೂಲ ಸೌಕರ್ಯ ಕಲ್ಪಿಸದಿದ್ದಲ್ಲಿ ತಮ್ಮ ಗ್ರಾಮಗಳನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿದ್ದಾರೆ.

ಈ ಹಿಂದೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ 11 ಗ್ರಾಮ ಪಂಚಾಯತ್‌ಗಳು ಕರ್ನಾಟಕ ಸೇರುವ ಬಗ್ಗೆ ನಿರ್ಣಯ ಆಂಗೀಕರಿಸಿತ್ತು. ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿ ಮೂಲಕ ಈ ಪಂಚಾಯತ್‌ಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ, ಕರ್ನಾಟಕ ಸೇರಲು ನಿರಾಕ್ಷೇಪಣ ಪತ್ರ ನೀಡುವಂತೆಯೂ ಕೋರಿದ್ದವು.

ಇದೀಗ ಲಾತೂರ್ ಜಿಲ್ಲೆಯ (ಬೀದರ್ ಬಳಿ) ಬೊಂಬಾಲಿ ನಿವಾಸಿಗಳು ತಮ್ಮ ಗ್ರಾಮವನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸುವಂತೆ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆಂದು ತಿಳಿದುಬಂದಿದೆ.

ತಮ್ಮ ಗ್ರಾಮವನ್ನು ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ನಿವಾಸಿಗಳು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ ಮತ್ತು ಲಾತೂರ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆಂದು ವರದಿಗಳು ತಿಳಿಸಿವೆ

ಇಲ್ಲಿನ ನಿವಾಸಿಗಳು ಬೊಂಬಾಲಿಯಲ್ಲಿ ಸಭೆ ನಡೆಸಿ ತಮ್ಮ ಅಳಲನ್ನು ತೋಡಿಕೊಂಡರು. ಕರ್ನಾಟಕ ಸರ್ಕಾರ ಗಡಿ ಭಾಗದಲ್ಲಿರುವ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಿದೆ ಎಂದರು.

ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ತಮ್ಮ ಗ್ರಾಮವನ್ನು ನಿರ್ಲಕ್ಷಿಸುವುದನ್ನು ಮುಂದುವರಿಸಿದರೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.

ನೀರಿನ ಸಮಸ್ಯೆ ನೀಗಿಸಲು ಕುಡಿಯುವ ನೀರು ಸರಬರಾಜು ಯೋಜನೆ ಜಾರಿಗೊಳಿಸುವಂತೆ ಬೊಂಬಳಿ ಗ್ರಾಮದ ನಿವಾಸಿಗಳು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಗಡಿಭಾಗದ ಕರ್ನಾಟಕದ ರೈತರಿಗೆ ಸರಿಸಮನಾಗಿ ಗ್ರಾಮದ ಪ್ರತಿಯೊಬ್ಬ ರೈತರಿಗೆ ತಲಾ 50 ಸಾವಿರ ರೂ.ಪರಿಹಾರವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಬೊಂಬಳಿ ಗ್ರಾಮದ ಪಿಎಚ್‌ಸಿಗೆ ಎಂಬಿಬಿಎಸ್ ಪದವಿ ಹೊಂದಿರುವ ವೈದ್ಯರನ್ನು ನೇಮಿಸುವುದು ಮತ್ತು 10 ಎಚ್‌ಪಿವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸರಬರಾಜು ಸೇರಿದಂತೆ ಇತರ ಬೇಡಿಕೆಗಳನ್ನು ಮುಂದಿಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com