ಗಡಿ ವಿವಾದ: ಬಸ್ ಗಳಿಗೆ ರಕ್ಷಣೆ ನೀಡಿದ ಬೆಳಗಾವಿ ಪೊಲೀಸರಿಗೆ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಧನ್ಯವಾದ!
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಗಡಿ ವಿವಾದದ ನಡುವೆಯೂ ಬಸ್ ಹಾಗೂ ವಾಹನಗಳಿಗೆ ರಕ್ಷಣೆ ನೀಡಿದ ಬೆಳಗಾವಿ ಪೊಲೀಸರಿಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್‌ಆರ್‌ಟಿಸಿ)ಯು ಧನ್ಯವಾದಗಳನ್ನು ತಿಳಿಸಿದೆ.
Published: 09th December 2022 08:17 AM | Last Updated: 09th December 2022 01:37 PM | A+A A-

ಸಂಗ್ರಹ ಚಿತ್ರ
ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ನಡೆಯುತ್ತಿರುವ ಗಡಿ ವಿವಾದದ ನಡುವೆಯೂ ಬಸ್ ಹಾಗೂ ವಾಹನಗಳಿಗೆ ರಕ್ಷಣೆ ನೀಡಿದ ಬೆಳಗಾವಿ ಪೊಲೀಸರಿಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್‌ಆರ್‌ಟಿಸಿ)ಯು ಧನ್ಯವಾದಗಳನ್ನು ತಿಳಿಸಿದೆ.
ಬೆಳಗಾವಿಯ ಸವದತ್ತಿ ಯಲ್ಲಮ್ಮನ ಗುಡ್ಡ ಯಾತ್ರಿಕ ಕೇಂದ್ರದಿಂದ ಮಹಾರಾಷ್ಟ್ರ ರಾಜ್ಯಕ್ಕೆ 145 ಬಸ್‌ಗಳು ಮತ್ತು ನೂರಾರು ಪ್ರಯಾಣಿಕ ವಾಹನಗಳನ್ನು ಬೆಳಗಾವಿ ಪೊಲೀಸರು ಸುರಕ್ಷಿತವಾಗಿ ರವಾನಿಸಿದ್ದಾರೆ. ನಮಗೆ ರಕ್ಷಣೆ ನೀಡಿದ ಬೆಳಗಾವಿ ಪೊಲೀಸರಿಗೆ ಧನ್ಯವಾದಗಳು ಎಂದು ಎಂಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳಿದ್ದಾರೆ.
ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದ ಶ್ರೀ ರೇಣುಕಾದೇವಿ ದೇವಸ್ಥಾನದಲ್ಲಿ ‘ಹೊಸ್ತಿಲ ಹುಣ್ಣಿಮೆ’ ಪ್ರಯುಕ್ತ ಆಯೋಜಿಸಿದ್ದ ಜಾತ್ರೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶದ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕರ್ನಾಟಕ ಸೇರಲು ಮಹಾರಾಷ್ಟ್ರದ ಮತ್ತೊಂದು ಗ್ರಾಮ ಉತ್ಸುಕ..!
ಗಡಿ ವಿವಾದ ಬೆನ್ನಲ್ಲೇ ಸವದತ್ತಿ ಮೂಲಕ ಸಾಗುವ ಮಹಾರಾಷ್ಟ್ರ ವಾಹನಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಭದ್ರತಾ ಕ್ರಮಗಳ ಕೈಗೊಂಡಿದ್ದರು.
ಎಂಎಸ್‌ಆರ್‌ಟಿಸಿಯ ಸಹಾಯಕ ಅಧೀಕ್ಷಕ ಅತುಲ್ ಮೋರೆ ಮಾತನಾಡಿ, ಯಾತ್ರಾರ್ಥಿಗಳನ್ನು ಹೊತ್ತೊಯ್ಯುವ ಬಸ್‌ಗಳ ಸುರಕ್ಷಿತ ಸಂಚಾರವನ್ನು ಖಾತ್ರಿಪಡಿಸಿದ ಬೆಳಗಾವಿ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಭಕ್ತರು ಯಾವುದೇ ತೊಂದರೆ ಇಲ್ಲದೆ ರೇಣುಕಾ ದೇವಿಯ ದರ್ಶನ ಪಡೆದರು. ಸವದತ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಹೇಳಿದರು.