ರಾಜ್ಯದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ: ಮುಸ್ಲಿಂ ಯುವಕರ ಜೊತೆಯಲ್ಲಿದ್ದ ಹಿಂದೂ ಯುವತಿಯರಿಗೆ ಕಿರುಕುಳ
ರಾಜ್ಯದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ವರದಿಯಾಗಿದ್ದು, ಮುಸ್ಲಿಂ ಯುವಕರ ಜೊತೆಯಲ್ಲಿದ್ದ ಹಿಂದೂ ಯುವತಿಯರಿಗೆ ಸಂಘಪರಿವಾರದ ಕಾರ್ಯಕರ್ತರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
Published: 11th December 2022 11:59 PM | Last Updated: 12th December 2022 05:07 PM | A+A A-

ಯುವತಿಯರು
ಮಂಗಳೂರು: ರಾಜ್ಯದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ವರದಿಯಾಗಿದ್ದು, ಮುಸ್ಲಿಂ ಯುವಕರ ಜೊತೆಯಲ್ಲಿದ್ದ ಹಿಂದೂ ಯುವತಿಯರಿಗೆ ಸಂಘಪರಿವಾರದ ಕಾರ್ಯಕರ್ತರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಶನಿವಾರ ರಾತ್ರಿ ಮಂಗಳೂರಿನ ಉರ್ವ ಠಾಣೆ ವ್ಯಾಪ್ತಿಯಲ್ಲಿ ಹಿಂದೂ ಯುವತಿಯರ ಜತೆಯಲ್ಲಿದ್ದ ಇಬ್ಬರು ಮುಸ್ಲಿಂ ಯುವಕರಿಗೆ ಹಿಂದೂ ಪರ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಯುವಕ-ಯುವತಿಯರು ಊಟಕ್ಕೆಂದು ಹೊರಗೆ ಹೋಗಿದ್ದರು. ಸಂತ್ರಸ್ತ ಬಾಲಕಿಯರು ಉತ್ತರ ಪ್ರದೇಶ ಮೂಲದವರಾಗಿದ್ದು, ಅವರಲ್ಲಿ ಒಬ್ಬಾಕೆ ಅಪ್ರಾಪ್ತಳಾಗಿದ್ದು ಅವರ ಜೊತೆಯಲ್ಲಿ ಕೆಲ ಮುಸ್ಲಿಂ ಯುವಕರಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಯುವ ವಕೀಲನ ಮೇಲೆ ಹಲ್ಲೆ: ರಾಜ್ಯಾದ್ಯಂತ ವಕೀಲರ ಪ್ರತಿಭಟನೆ, ಪಿಎಸ್‌ಐ ಅಮಾನತು
ಈ ವೇಳೆ ಹಿಂದೂ ಪರ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಕಿರುಕುಳದ ಹೊರತಾಗಿಯೂ ಸಂತ್ರಸ್ತರ ಪೋಷಕರು ದೂರು ನೀಡದಿರಲು ನಿರ್ಧರಿಸಿದ್ದಾರೆ ಮತ್ತು ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಾರೆ. "ತಮ್ಮ ಮೇಲೆ ಹಲ್ಲೆ ನಡೆಸಿಲ್ಲ.. ಆದರೆ ಆರೋಪಿಗಳು ಪ್ರಶ್ನಿಸಿದ್ದಾರೆ ಎಂದು ಸಂತ್ರಸ್ತರು ಹೇಳುತ್ತಾರೆ ಮತ್ತು ಅವರು ಪ್ರಕರಣವನ್ನು ಮುಂದುವರಿಸದಿರಲು ನಿರ್ಧರಿಸಿದ್ದಾರೆ. ನಾವು ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ" ಎಂದು ಅವರು ಹೇಳಿದರು.
ಈ ನಡುವೆ ಕೆಲ ದಿನಗಳ ಹಿಂದೆ ಚಿನ್ನಾಭರಣ ಅಂಗಡಿಯೊಂದರಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ ಪ್ರಕರಣದಲ್ಲಿ ನಾಲ್ವರು ಹಿಂದೂ ಪರ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕೆಲವು ಹಿಂದುತ್ವವಾದಿ ಕಾರ್ಯಕರ್ತರು ಸುಲ್ತಾನ್ ಚಿನ್ನದ ಅಂಗಡಿಯೊಳಗೆ ನುಗ್ಗಿದ್ದರು. ಕಂಕನಾಡು ಮೂಲದ ಚೇತನ್ ಕುಮಾರ್ (39), ಕಂಕನಾಡಿಯ ಪ್ರಕಾಶ್ (34), ಜೆಪ್ಪಿನಮೊಗರು ನಿವಾಸಿ ಶಿಬಿನ್ ಪಡಿಕಲ್ (36) ಮತ್ತು ಅತ್ತಾವರ ನಿವಾಸಿ 35 ವರ್ಷದ ಗಣೇಶ್ ಬಂಧಿತರು.
ಇದನ್ನೂ ಓದಿ: ಬೆಂಗಳೂರು: ದಂಪತಿಯಿಂದ ಹಣ ವಸೂಲಿ, ಇಬ್ಬರು ಹೊಯ್ಸಳ ಗಸ್ತು ಪೊಲೀಸ್ ಅಮಾನತು
ಚಿನ್ನಾಭರಣ ಮಳಿಗೆಯ ಮಾರಾಟ ವಿಭಾಗದ ಯುವಕ ಮತ್ತು ಯುವತಿಯು ಅನ್ಯೋನ್ಯತೆಯಿಂದಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಗುಂಪು ಡಿ.6ರ ಸಂಜೆ ಯುವತಿಯ ಪೋಷಕರೊಂದಿಗೆ ಚಿನ್ನಾಭರಣದ ಮಳಿಗೆಗೆ ನುಗ್ಗಿ ಪೊಲೀಸರ ಸಮ್ಮುಖವೇ ಹಲ್ಲೆ ನಡೆಸಿತ್ತು ಎಂದು ಆರೋಪಿಸಲಾಗಿತ್ತು. ಈ ಕದ್ರಿ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.