ಬೆಳಗಾವಿ: ರಾಜ್ಯ ಸರ್ಕಾರ ಸುವರ್ಣಸೌಧದ ವಿಧಾನಸಭೆಯಲ್ಲಿ ವೀರ ಸಾವರ್ಕರ್ ಭಾವಚಿತ್ರವನ್ನು ಅನಾವರಣ ಮಾಡಿದೆ. ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಾವರ್ಕರ್ ಫೋಟೋವನ್ನು ಅನಾವರಣ ಮಾಡಲಾಗಿದೆ.
ಸಾವರ್ಕರ್ ಜೊತೆಗೆ ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ನೇತಾಜಿ, ಸರ್ದಾರ್ ವಲ್ಲಭ್ ಬಾಯ್ ಪಟೇಲ್, ಸ್ವಾಮಿ ವಿವೇಕಾನಂದ, ಬಸವಣ್ಣರ ಫೋಟೋಗಳನ್ನೂ ಕೂಡ ಇದೇ ವೇಳೆ ಅನಾವರಣ ಮಾಡಲಾಗಿದೆ.
ವೀರ ಸಾವರ್ಕರ್ ಅವರ ಫೋಟೋವನ್ನು ವಿಧಾನಸಭೆಯಲ್ಲಿ ಅನಾವರಣಗೊಳಿಸಿದ್ದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಸುವರ್ಣಸೌಧದ ಮೆಟ್ಟಿಲುಗಳ ಮೇಲೆ ಪ್ರತಿಭಟನೆ ನಡೆಸುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಮಾತನಾಡಿ, ವಿಧಾನಸಭೆ ಕಲಾಪ ನಡೆಯಬಾರದು ಎಂಬುದು ಅವರ ಅಪೇಕ್ಷೆ. ಕಲಾಪ ಅಡ್ಡಿಪಡಿಸಲು ಬಯಸುತ್ತಿದ್ದಾರೆ. ಸರ್ಕಾರದ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ವಿಚಾರಗಳನ್ನು ಎತ್ತಲಿದ್ದೇವೆ ಎಂಬ ಕಾರಣಕ್ಕೆ ಫೋಟೋ ವಿಚಾರವನ್ನು ತಂದಿದ್ದಾರೆ. ಸರ್ಕಾರ ಬಳಿ ಯಾವುದೇ ಅಭಿವೃದ್ಧಿ ಅಜೆಂಡಾ ಇಲ್ಲ ಎಂದು ಕಿಡಿಕಾರಿದ್ದಾರೆ.
ಸಮಾಜ ಸುಧಾರಕರ ಭಾವಚಿತ್ರ ಹಾಕಬೇಕೆಂಬುದಷ್ಟೇ ನಮ್ಮ ಬೇಡಿಕೆ: ಸಿದ್ದರಾಮಯ್ಯ
ಯಾರ ಭಾವಚಿತ್ರ ಹಾಕುವುದಕ್ಕೂ ನನ್ನ ವಿರೋಧವಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯಂತಹ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಬಯಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಏಕಾಏಕಿ ಭಾವಚಿತ್ರ ಅಳವಡಿಕೆ ಮಾಡಿದ್ದಾರೆ. ಭಾವಾಚಿತ್ರ ಅನಾವರಣ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ಇರಲಿಲ್ಲ. ಮಾಧ್ಯಮದ ಮೂಲಕ ತಿಳಿದುಕೊಂಡೆ. ಯಾರದೇ ಫೋಟೋ ಇಡಲು ವಿರೋಧ ಇಲ್ಲ. ಆದರೆ ಚರ್ಚೆ ಆಗದೆ ಇಟ್ಟಿರುವುದಕ್ಕೆ ನಮ್ಮ ವಿರೋಧವಿದೆ. ನಾವು ಈ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರ ವಿಚಾರಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಫೋಟೋ ವಿವಾದ ಮುನ್ನಲೆಗೆ ತಂದಿದ್ದಾರೆ ಎಂದರು.
ಬದಲಾದ ಕಾಂಗ್ರೆಸ್ ತಂತ್ರಗಾರಿಕೆ
ಈ ನಡುವೆ ಸರ್ಕಾರದ ವಿರುದ್ಧ ಹರಿಹಾಯಲು ತಂತ್ರ ರೂಪಿಸಿದ್ದ ರಾಜ್ಯ ಕಾಂಗ್ರೆಸ್, ಸಾವರ್ಕರ್ ವಿಚಾರವನ್ನ ಮುನ್ನಲೆಗೆ ತಂದು ಚರ್ಚಿಸುವ ಬದಲು ಇನ್ನಿತರ ನಾಯಕರ ಚಿತ್ರ ಏಕಿಲ್ಲ ಎಂದು ಪ್ರಶ್ನಿಸಲು ನಿರ್ಧರಿಸಿದೆ. ರಾಜ್ಯದ ಮಹಾನ್ ಪುರುಷರನ್ನ ಮುಂದಿಟ್ಟು ಕೌಂಟರ್ ಕೊಡಲು ಕಾಂಗ್ರೆಸ್ ಮುಂದಾಗಿದೆ.
ಕುವೆಂಪು, ನಾರಾಯಣಗುರು ಅಂತಹ ದಾರ್ಶನಿಕರ ಫೋಟೋ ಏಕಿಲ್ಲ ಎಂದು ಪ್ರಶ್ನಿಸಲು ಮುಂದಾಗಿದೆ. ಸಾವರ್ಕರ್ ವಿಚಾರವಾಗಿ ಚರ್ಚೆ ಮಾಡಿದರೆ ಬಿಜೆಪಿ ಹಿಂದುತ್ವ ವಿಚಾರವನ್ನ ಮುನ್ನಲೆಗೆ ತರಲಿದೆ. ಇದು ಚುನಾವಣೆಗೂ ಮೊದಲು ಧ್ರುವಿಕರಣಕ್ಕೆ ಸಹಾಯವಾಗಲಿದೆ. ಹೀಗಾಗಿ ಇದರ ಬದಲಿಗೆ ಇನ್ನಿತರ ಮಹಾನ್ ನಾಯಕರ ಚಿತ್ರಗಳಿಗೆ ಬೇಡಿಕೆ ಇಟ್ಟು ಹೋರಾಟ ರೂಪಿಸಲು ನಿರ್ಧರಿಸಿದೆ.
ಸ್ಪೀಕರ್'ಗೆ ಸಿದ್ದರಾಮಯ್ಯ ಪತ್ರ
ಈ ನುಡುವೆ ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಅಸೆಂಬ್ಲಿ ಹಾಲ್ನಲ್ಲಿ ಹಲವು ಮಹನೀಯರ ಫೋಟೋ ಅಳವಡಿಸಬೇಕಿದೆ. ಮಹರ್ಷಿ ವಾಲ್ಮೀಕಿ, ಬಸವಣ್ಣ, ಕನಕದಾಸ, ಶಿಶುನಾಳ ಶರೀಫ, ನೆಹರು. ನಾರಾಯಣಗುರು, ಡಾ.ಬಿ.ಆರ್.ಅಂಬೇಡ್ಕರ್, ವಲ್ಲಭ ಬಾಯಿ ಪಟೇಲ್, ಬಾಬು ಜಗಜೀವನ ರಾಮ್, ಕುವೆಂಪು ಭಾವಚಿತ್ರವನ್ನು ಅಳವಡಿಸಿ. ದಾರ್ಶನಿಕರು, ವಿಚಾರವಂತರು, ರಾಷ್ಟ್ರ ನಾಯಕರ ಭಾವಚಿತ್ರ ಅಳವಡಿಸಿ. ಭಾರತದ ಸಂಸ್ಕೃತಿ ಪರಂಪರೆ, ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ವಿಚಾರಧಾರೆ, ಆದರ್ಶ ಸಾರ್ವಕಾಲಿಕ ಸತ್ಯ ಮತ್ತು ಅನುಕರಣೀಯ. ಹೀಗಾಗಿ ಸುವರ್ಣಸೌಧದ ಅಸೆಂಬ್ಲಿ ಹಾಲ್ನಲ್ಲಿ ಇವರೆಲ್ಲರ ಭಾವಚಿತ್ರ ಅಳವಡಿಸಿ ಎಂದು ಸ್ಪೀಕರ್'ಗೆ ಮನವಿ ಮಾಡಿದ್ದಾರೆ.
Advertisement