ಕೊಪ್ಪಳ: ಚಿಕಿತ್ಸೆ ವೆಚ್ಚ ಭರಿಸಲಾಗದೆ ಮಗಳನ್ನು ದೇವದಾಸಿ ಮಾಡಿದ್ದ ಪೋಷಕರ ಬಂಧನ!
22 ವರ್ಷದ ಮಗಳ ವೈದ್ಯಕೀಯ ವೆಚ್ಚವನ್ನು ಭರಿಸಲಾಗದೆ ದಂಪತಿಗಳು ದೇವದಾಸಿ ಪದ್ಧತಿಗೆ ತಳ್ಳಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ, ಈ ಸಂಬಂಧ ಪೊಲೀಸರು ಪೋಷಕರು ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ.
Published: 30th December 2022 11:12 AM | Last Updated: 30th December 2022 11:12 AM | A+A A-

ಸಾಂದರ್ಭಿಕ ಚಿತ್ರ
ಕೊಪ್ಪಳ: 22 ವರ್ಷದ ಮಗಳ ವೈದ್ಯಕೀಯ ವೆಚ್ಚವನ್ನು ಭರಿಸಲಾಗದೆ ದಂಪತಿಗಳು ದೇವದಾಸಿ ಪದ್ಧತಿಗೆ ತಳ್ಳಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ, ಈ ಸಂಬಂಧ ಪೊಲೀಸರು ಪೋಷಕರು ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ.
ಕೊಪ್ಪಳ ತಾಲೂಕಿನ ಚಿಲವಾಡಗಿಯಲ್ಲಿ 22 ವರ್ಷದ ಯುವತಿಯನ್ನು ಹುಲಿಗೆಮ್ಮ ದೇವಸ್ಥಾನದಲ್ಲಿ ಮುತ್ತು ಕಟ್ಟಿಸಿದ ಪ್ರಕರಣ ವರದಿಯಾಗಿದ್ದು, ಮುತ್ತು ಕಟ್ಟಿಸಿದ ಯುವತಿ ತಂದೆ, ತಾಯಿ ಹಾಗು ಅಕ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಕನ ಗಂಡ ಪರಾರಿಯಾಗಿದ್ದಾನೆ.
ಕೊಪ್ಪಳ ಜಿಲ್ಲೆಯ ಚಿಲವಾಡಗಿ ಗ್ರಾಮದಲ್ಲಿ ಮೇ ತಿಂಗಳಲ್ಲಿ ಈ ಘಟನೆ ನಡೆದಿದ್ದು, ಕೊಪ್ಪಳದ ದೇವದಾಸಿ ಪುನರ್ವಸತಿ ಕಾರ್ಯಕ್ರಮದ ಜಿಲ್ಲಾ ಯೋಜನಾಧಿಕಾರಿ ಪೂರ್ಣಿಮಾ ಯೋಳಭಾವಿ ನೇತೃತ್ವದ ತಂಡ ಗ್ರಾಮಸ್ಥರಿಂದ ಸುಳಿವು ಪಡೆದು ಪರಿಶೀಲಿಸಿದಾಗ ಬೆಳಕಿಗೆ ಬಂದಿದೆ. ಈ ಸಂಬಂಧ ಡಿ. 26ರಂದು ದೂರು ದಾಖಲಾಗಿತ್ತು. ಪೋಷಕರು ತಮ್ಮ ಮಗಳನ್ನು ಕೊಪ್ಪಳದ ಹುಲಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ ವಿಧಿ ವಿಧಾನಗಳಿಗಾಗಿ ಕರೆದುಕೊಂಡು ಹೋಗಿದ್ದರು.
ತನಿಖೆ ನಡೆಸಿದಾಗ ಈ ಕೃತ್ಯದ ಹಿಂದೆ ಪೋಷಕರ ಕೈವಾಡವಿದ್ದು, ಯಾರೂ ಬಲವಂತ ಮಾಡಿಲ್ಲ ಎಂದು ತಿಳಿದುಬಂದಿದೆ. ಈ ವಿಷಯವನ್ನು ಸ್ಥಳೀಯ ಪೊಲೀಸರ ಗಮನಕ್ಕೆ ತರಲಾಗಿದ್ದು, ನಾಲ್ವರು ಆರೋಪಿಗಳಾದ ಯಮನೂರಪ್ಪ ಮುಂಡಲಮನಿ, ಹುಲಿಗೆವ್ವ ಮುಂಡಲಮನಿ, ಮೂಕವ್ವ ಮತ್ತು ಹನುಮಪ್ಪ ಹರಿಜನರನ್ನು ಬಂಧಿಸಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಮಗಳ ಚಿಕಿತ್ಸಾ ವೆಚ್ಚ ಭರಿಸಲು ಕುಟುಂಬಕ್ಕೆ ಸಾಧ್ಯವಾಗುತ್ತಿರಲಿಲ್ಲ. ಕುಟುಂಬವು ದೇವಾಲಯದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ತಮ್ಮ ಮಗಳನ್ನು ದೇವದಾಸಿಯನ್ನಾಗಿ ಮಾಡಿತು ಎಂದು ದೇವದಾಸಿ ಪುನರ್ವಸತಿ ಕಾರ್ಯಕ್ರಮದ ಅಧಿಕಾರಿಯೊಬ್ಬರು ತಿಳಿಸಿದರು.
ಹುಲಿಗೆಮ್ಮ ದೇವಸ್ಥಾನದಲ್ಲಿ ಬಿಳಿ, ಕೆಂಪು ಹಾಗು ದೇವಿಯ ಮೂರ್ತಿ ಕಾಲಿಗೆ ಕಾಲುಂಗುರ ಹಾಗು ಹಸಿರು ಬಳೆ ತೊಡಿಸಿ ಮುತ್ತು ಕಟ್ಟಲಾಗಿತ್ತು. ಯುವತಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಕೆಗೆ ಮುತ್ತು ಕಟ್ಟಿಸಲಾಗಿದೆ. ಮುತ್ತು ಕಟ್ಟಿಸಿದ ನಂತರ ಆಕೆ ಮನೆಯಲ್ಲಿಯೇ ಇದ್ದಳು ನಂತರ ಆಕೆಯನ್ನು ನೋಡಿದ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದೇವದಾಸಿ ಪುನರ್ವಸತಿ ಕೇಂದ್ರ ಯೋಜನಾಧಿಕಾರಿಗೆ, ಡಿಸೆಂಬರ್ 26 ರಂದು ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.