ಬೆಂಗಳೂರು: ಲೇಖಕಿ ಬಿ.ಟಿ. ಲಲಿತಾ ನಾಯಕ್ ಗೆ ಮತ್ತೊಂದು ಜೀವ ಬೆದರಿಕೆ ಪತ್ರ, ಕೇಸ್ ದಾಖಲು
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಮಾಜಿ ಸಚಿವೆ ಮತ್ತು ಲೇಖಕಿ ಬಿ.ಟಿ. ಲಲಿತಾ ನಾಯಕ್ ಅವರಿಗೆ ಮತ್ತೊಂದು ಬೆದರಿಕೆ ಪತ್ರ ಫೋಸ್ಟ್ ಮೂಲಕ ಅವರ ಮನೆ ವಿಳಾಸಕ್ಕೆ ಶನಿವಾರ ಬಂದಿದೆ.
Published: 03rd July 2022 11:41 PM | Last Updated: 03rd July 2022 11:41 PM | A+A A-

ಲೇಖಕಿ ಬಿ.ಟಿ. ಲಲಿತಾ ನಾಯಕ್
ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಮಾಜಿ ಸಚಿವೆ ಮತ್ತು ಲೇಖಕಿ ಬಿ.ಟಿ. ಲಲಿತಾ ನಾಯಕ್ ಅವರಿಗೆ ಮತ್ತೊಂದು ಬೆದರಿಕೆ ಪತ್ರ ಫೋಸ್ಟ್ ಮೂಲಕ ಅವರ ಮನೆ ವಿಳಾಸಕ್ಕೆ ಶನಿವಾರ ಬಂದಿದೆ.
ಎಡಪಂಥೀಯ ಸಿದ್ದಾಂತಗಳಿಗೆ ಬೆಂಬಲ ನೀಡುತ್ತಿದ್ದು, ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಮಧ್ಯ ಪ್ರವೇಶಿಸುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ ಅವರೊಂದಿಗೆ ನಿಮ್ಮೊಂದಿಗೂ ಕೊಲೆ ಮಾಡಲಾಗುವುದು ಎಂದು ದುಷ್ಕರ್ಮಿಗಳು ಕಪ್ಪು ಇಂಕ್ ಬಳಸಿ ಕನ್ನಡದಲ್ಲಿ ಬರೆದಿದ್ದಾರೆ.
ಈ ಸಂಬಂಧ ಸಂಜಯ ನಗರ ಪೊಲೀಸರು ಕೇಸ್ ದಾಖಲಿಸಿದ್ದು, ಬಿಟಿ ಲಲಿತಾ ನಾಯಕ್ ಅವರ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ. ರಾಜಾಜಿನಗರದಿಂದ ಫೋಸ್ಟ್ ಬಂದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬಿ.ಟಿ. ಲಲಿತಾ ನಾಯಕ್, ನಾಲ್ಕು ಪುಟದ ಬೆದರಿಕೆ ಪತ್ರವನ್ನು ಸಂಜಯ ನಗರ ಪೊಲೀಸರಿಗೆ ನೀಡಿದ್ದೇನೆ. ಪತ್ರದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ, ಬಿಕೆ ಹರಿಪ್ರಸಾದ್, ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವರ ಹೆಸರುಗಳಿವೆ. ಎಡಪಂಥೀಯ ವಿಚಾರೆಧಾರೆಗಳು ಮತ್ತು ಮುಸ್ಲಿಂ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವುದರ ವಿರುದ್ಧ ಎಚ್ಚರಿಕೆ ನೀಡಲಾಗಿದೆ. ಇಂತಹ ಬೆದರಿಗೆ ನಾನು ಕೇರ್ ಮಾಡಲ್ಲ, ನನ್ನ ಅಭಿಪ್ರಾಯ ನೀಡುವುದನ್ನು ಮುಂದುವರೆಸುತ್ತೇನೆ, ಸತ್ಯವನ್ನು ಮಾತನಾಡುತ್ತೇನೆ ಎಂದರು.
ನನ್ನ ಭದ್ರತೆಗಾಗಿ ಸರ್ಕಾರ ಖರ್ಚು ಮಾಡುವುದನ್ನು ನಾನು ಬಯಸುವುದಿಲ್ಲವಾದ್ದರಿಂದ ಗನ್‌ಮೆನ್ ಮತ್ತು ವಿಶೇಷ ಭದ್ರತೆಯನ್ನು ಒದಗಿಸುವ ಅಗತ್ಯವಿಲ್ಲ ಎಂದು ನಾನು ಗೃಹ ಇಲಾಖೆಗೆ ಹೇಳಿದ್ದೇನೆ ಎಂದು ಅವರು ಹೇಳಿದರು. ಕಳೆದ ವರ್ಷ ಮಾರ್ಚ್ ನಲ್ಲಿ ತಮಿಳುನಾಡು ಮತ್ತು ಕೇರಳ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಸಂದರ್ಭದಲ್ಲೂ ಬಿಟಿ ಲಲಿತಾ ನಾಯಕ್ ಅವರಿಗೆ ಬೆದರಿಕೆ ಪತ್ರ ಬಂದಿತ್ತು.