ವಾಸಯೋಗ್ಯವಾಗಿಲ್ಲ ಬೆಂಗಳೂರು; ಜಾಗತಿಕ ಸೂಚ್ಯಂಕದಲ್ಲಿ ಅತಿ ಕಳಪೆ ಸ್ಥಾನ ಪಡೆದ ಸಿಲಿಕಾನ್ ಸಿಟಿ

ವಿಶ್ವದ 173 ನಗರಗಳ ಜೀವನಯೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ಭಾರತದ ಪ್ರಮುಖ ಐದು ನಗರಗಳು 140ರಿಂದ 146ನೇ ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ. ಈ ಪೈಕಿ ಅತಿ ಕಳಪೆ ಸ್ಥಾನ (146) ಬೆಂಗಳೂರಿನದ್ದಾಗಿದೆ.
ಬೆಂಗಳೂರಿನ ರಸ್ತೆಗಳು
ಬೆಂಗಳೂರಿನ ರಸ್ತೆಗಳು
Updated on

ನವದೆಹಲಿ: ವಿಶ್ವದ 173 ನಗರಗಳ ಜೀವನಯೋಗ್ಯ ಸೂಚ್ಯಂಕ ಪಟ್ಟಿಯಲ್ಲಿ ಭಾರತದ ಪ್ರಮುಖ ಐದು ನಗರಗಳು 140ರಿಂದ 146ನೇ ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ. ಈ ಪೈಕಿ ಅತಿ ಕಳಪೆ ಸ್ಥಾನ (146) ಬೆಂಗಳೂರಿನದ್ದಾಗಿದೆ.

ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ಸ್ ನ ಜಾಗತಿಕ ಜೀವನಯೋಗ್ಯ ಸೂಚ್ಯಂಕ 2022ರ ವರದಿ ಪ್ರಕಟಿಸಿದ್ದು, ಕಳೆದ ವರ್ಷ ನಡೆದ ಅಧ್ಯಯನದಲ್ಲಿ ಬೆಂಗಳೂರು ಐಟಿ ಕ್ಷೇತ್ರದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿತ್ತು. ಆದರೆ ಈ ವರ್ಷ ಬೆಂಗಳೂರು 54.4 ಅಂಕಗಳೊಂದಿಗೆ 146ನೇ ಸ್ಥಾನ ಪಡೆದು ಜೀವನಯೋಗ್ಯ, ಮೂಲಸೌಕರ್ಯ ಸೂಚ್ಯಂಕದಲ್ಲಿ ಕಳಪೆ ಸ್ಥಾನ ಪಡೆದಿದೆ.

ಸ್ಥಿರತೆ, ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಪರಿಸರ, ಮೂಲಭೂತ ಸೌಕರ್ಯ ಈ ಐದು ಮಾನದಂಡಗಳ ಮೇಲೆ ಸ್ಥಾನ ನೀಡಲಾಗುತ್ತದೆ. ಮೂಲಭೂತ ಸೌಕರ್ಯ ವಿಚಾರದಲ್ಲಿ ಬೆಂಗಳೂರು ನಗರ ಭಾರತದ ಇತರೆ ನಗರಗಳಾದ ದೆಹಲಿ, ಮುಂಬೈ, ಅಹಮದಾಬಾದ್ ಹಾಗೂ ಚೆನ್ನೈಗಿಂತಲೂ ತೀರಾ ಹಿಂದುಳಿದಿದೆ.

ಮೂಲಭೂತ ಸೌಕರ್ಯ: ರಸ್ತೆ ಗುಣಮಟ್ಟ, ಸಾರ್ವಜನಿಕ ಸಾರಿಗೆ, ಆಂತರಿಕ ಸಂಪರ್ಕ, ಇಂಧನ, ಟೆಲಿಕಮ್ಯುನಿಕೇಷನ್, ಕುಡಿಯುವ ನೀರು, ವಸತಿ ಗುಣಮಟ್ಟ ಇದರ ಮಾನದಂಡ. ಇದರಲ್ಲಿ ಬೆಂಗಳೂರು 100ಕ್ಕೆ 46.4 ಅಂಕ ಮಾತ್ರ ಗಳಿಸಿದೆ. ಇದು ದೇಶದ ನಗರಗಳ ಪೈಕಿ ಅತಿ ಕಡಿಮೆ. ಉಳಿದಂತೆ ದೆಹಲಿ 62.5, ಮುಂಬೈ 55.4, ಚೆನ್ನೈ ಹಾಗೂ ಅಹ್ಮದಾಬಾದ್ ತಲಾ 50 ಅಂಕ ಪಡೆದಿವೆ.

ಬೆಂಗಳೂರು ಉಳಿದ ಐದು ಮಾನದಂಡಗಳಲ್ಲಿ ಭಾರತದ ಇತರೆ ನಗರಗಳಷ್ಟೇ ಗುಣಮಟ್ಟ ಹೊಂದಿದ್ದರೂ ಮೂಲಭೂತ ಸೌಕರ್ಯ ವಿಚಾರದಲ್ಲಿ ತೀರಾ ಹಿಂದುಳಿದಿದೆ. ನೀತಿ ರೂಪಿಸುವಲ್ಲಿ ಸಮಸ್ಯೆ, ಹೆಚ್ಚುತ್ತಿರುವ ಜನಸಂಖ್ಯೆ, ಯೋಜನೆಗಳ ವಿಸ್ತರಣೆ ಹಾಗೂ ಜಾರಿಯಲ್ಲಿ ವಿಳಂಬ ಪ್ರಮುಖ ಸಮಸ್ಯೆಯಾಗಿದೆ.

ಮೂಲಸೌಕರ್ಯ ಅಂಕಗಳ ಪೈಕಿ ಪಾಕಿಸ್ತಾನದ ಕರಾಚಿ ನಗರ ಬೆಂಗಳೂರಿಗಿಂತ ಉತ್ತಮ ಸಾಧನೆ ಮಾಡಿದ್ದು, 51.8 ಅಂಕ ಪಡೆದಿದೆ. ನೈಜೀರಿಯಾದ ಲಾಗೊಸ್ ನಗರ ಬೆಂಗಳೂರಿನಷ್ಟೇ 46.4 ಅಂಕ ಪಡೆದಿದೆ.

ಉಳಿದ ನಾಲ್ಕು ಮಾನದಂಡಗಳು ಹೀಗಿವೆ…
ಸ್ಥಿರತೆ: ಸಣ್ಣ ಅಪರಾಧ, ಹಿಂಸಾತ್ಮಕ ಅಪರಾಧ, ಭಯೋತ್ಪಾದಕ ಬೆದರಿಕೆ, ಸೇನಾ ಬಿಕ್ಕಟ್ಟು, ನಾಗರೀಕ ದಂಗೆ ವಿಚಾರದಲ್ಲಿ ಬೆಂಗಳೂರು, ಚೆನ್ನೈ ಹಾಗೂ ದೆಹಲಿ 60 ಅಂಕ ಪಡೆದರೆ ಮುಂಬೈ 50 ಅಂಕ ಪಡೆದಿದೆ.

ಆರೋಗ್ಯ: ಖಾಸಗಿ ಹಾಗೂ ಸರ್ಕಾರಿ ಆರೋಗ್ಯ ವಲಯದ ಮೂಲಸೌಕರ್ಯ, ಔಷಧಿಗಳ ಲಭ್ಯತೆ ಮಾನದಂಡದ ಮೇಲೆ ನಿರ್ಧಾರ. ಇದರಲ್ಲಿ ಬೆಂಗಳೂರು, ಚೆನ್ನೈ ಹಾಗೂ ದೆಹಲಿ ತಲಾ 58.3 ಅಂಕ ಪಡೆದರೆ, ಅಹ್ಮದಾಬಾದ್ ಹಾಗೂ ಮುಂಬೈ ತಲಾ 54.2 ಅಂಕ ಪಡೆದಿವೆ.

ಶಿಕ್ಷಣ: ಇದರಲ್ಲಿ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣದ ಲಭ್ಯತೆ ಹಾಗೂ ಸೌಕರ್ಯ ಆಧಾರವಾಗಿದೆ. ದೆಹಲಿ, ಚೆನ್ನೈ ಹಾಗೂ ಬೆಂಗಳೂರು ತಲಾ 58.3 ಅಂಕ ಪಡೆದಿವೆ.

ಸಂಸ್ಕೃತಿ ಮತ್ತು ಪರಿಸರ: ಇದರಲ್ಲಿ ನೀರಿನ ಗುಣಮಟ್ಟದಿಂದ ಭ್ರಷ್ಟಾಚಾರ, ಸಾಮಾಜಿಕ ಹಾಗೂ ಧಾರ್ಮಿಕ ನಿರ್ಬಂಧ, ಕ್ರೀಡಾ ಸೌಕರ್ಯ, ಸಂಸ್ಕೃತಿ, ಆಹಾರ, ಗ್ರಾಹಕರ ಸರಕು ಹಾಗೂ ಸೇವೆಗಳ ಆಧಾರವಾಗಿದೆ. ಈ ಸಂಸ್ಥೆಯ ಶಿಫಾರಸ್ಸಿನ ಪ್ರಕಾರ 50-60 ಅಂಕ ಪಡೆದಿರುವ ನಗರಗಳಲ್ಲಿ ವಾಸ ಮಾಡುವುದು ಕಷ್ಟವಾಗುತ್ತದೆ.

ಜೀವನಯೋಗ್ಯ/ ವಾಸಯೋಗ್ಯ ಸೂಚ್ಯಂಕದಲ್ಲಿ ಭಾರತದ ನಗರಗಳ ಸ್ಥಾನ: (ಐದು ಮಾನದಂಡಗಳ ಆಧಾರದ ಮೇಲೆ)
ದೆಹಲಿ 56.5 ಅಂಕ ಪಡೆದು 140ನೇ ಸ್ಥಾನ

ಮುಂಬೈ 56.2 ಅಂಕ ಪಡೆದು 141ನೇ ಸ್ಥಾನ

ಚೆನ್ನೈ 55.8 ಅಂಕಗಳೊಂದಿಗೆ 142ನೇ

ಅಹ್ಮದಾಬಾದ್ 55.7 ಅಂಕಗಳೊಂದಿಗೆ 143ನೇ ಸ್ಥಾನ

ಬೆಂಗಳೂರು 54.4 ಅಂಕಗಳೊಂದಿಗೆ 146ನೇ ಸ್ಥಾನ ಪಡೆದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com