ಲಂಚ ಪ್ರಕರಣ: ಮಾಧ್ಯಮಗಳ 'ವಿಚಾರಣೆ' ವಿರುದ್ಧ ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ಸುಪ್ರೀಂ ಕೋರ್ಟ್ ಗೆ ಅರ್ಜಿ
ಮಾಧ್ಯಮಗಳ 'ವಿಚಾರಣೆ'' ವಿರುದ್ಧ ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
Published: 18th July 2022 02:47 PM | Last Updated: 08th November 2022 01:09 PM | A+A A-

ಮಾಜಿ ಜಿಲ್ಲಾಧಿಕಾರಿ ಜೆ.ಮಂಜುನಾಥ್
ಬೆಂಗಳೂರು: ಲಂಚ ಪ್ರಕರಣದಲ್ಲಿ ಆರೋಪಿಯೊಬ್ಬರ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ನನಗೆ ವರ್ಗಾವಣೆ ಬೆದರಿಕೆ ಹಾಕಲಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೇಳಿಕೆ ನಂತರ ಮಾಧ್ಯಮಗಳ ವರದಿಗಳ ವಿರುದ್ಧ ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಉಪ ತಹಸೀಲ್ದಾರ್ ಪಿ.ಎಸ್. ಮಹೇಶ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸಂದೇಶ್, ಮಂಜುನಾಥ್ ಅವರನ್ನು ಏಕೆ ಆರೋಪಿಯನ್ನಾಗಿ ಮಾಡಿಲ್ಲ ಎಂದು ಪ್ರಶ್ನಿಸಿದ್ದರು. ಅಲ್ಲದೇ, ಭ್ರಷ್ಟಾಚಾರ ನಿಗ್ರಹ ದಳ ಕಲೆಕ್ಷನ್ ಸೆಂಟರ್ ಗಳಾಗಿವೆ ಮತ್ತು ಅದರ ಹೆಚ್ಚುವರಿ ಡಿಪಿಸಿ ಸೀಮಂತ್ ಕುಮಾರ್ ಸಿಂಗ್ ಕಳಂಕಿತ ಅಧಿಕಾರಿ ಎಂದು ಕರೆದಿದ್ದರು.
ಇದನ್ನೂ ಓದಿ: 5 ಲಕ್ಷ ರೂ. ಲಂಚ ಪಡೆದ ಪ್ರಕರಣ: ಎಸಿಬಿಯಿಂದ ಐಎಎಸ್ ಅಧಿಕಾರಿ ಮಂಜುನಾಥ್ ಬಂಧನ
ಮಹೇಶ್ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ನನಗೆ ವರ್ಗಾವಣೆಯ ಬೆದರಿಕೆಗಳು ಬರುತ್ತಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ತಿಳಿಸಿದ್ದರು. ನಂತರ, ಹೈಕೋರ್ಟ್ ವಿಚಾರಣೆಗೆ ತಡೆ ಕೋರಿ ಎಸಿಬಿ ಮತ್ತು ಹೆಚ್ಚುವರಿ ಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸುಪ್ರೀಂ ಕೋರ್ಟ್ ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
ಬಂಧನಕ್ಕೊಳಗಾಗಿರುವ ಮಂಜುನಾಥ್, ನ್ಯಾಯಮೂರ್ತಿ ಪಿ. ಸಂದೇಶ್ ಅವರ ಟೀಕೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ತಮಗೆ ಅವಕಾಶ ನೀಡದೆ ಅನಗತ್ಯ ಟೀಕೆ ಮಾಡಲಾಗುತ್ತಿದ್ದು, ತುರ್ತು ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸಿದ್ದಾರೆ.
ಹೈಕೋರ್ಟ್ ಗೂ ವಸ್ತು ಸ್ಥಿತಿ ಗೊತ್ತಿಲ್ಲ, ಇಂತಹ ಹೇಳಿಕೆಗಳು ನ್ಯಾಯಯುತ ತನಿಖೆ ಮೇಲೂ ಪರಿಣಾಮ ಬೀರಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ಈ ಹೇಳಿಕೆಯಿಂದಾಗಿ ಮಾಧ್ಯಮಗಳ ವರದಿಗಳನ್ನು ಮಾಜಿ ಜಿಲ್ಲಾಧಿಕಾರಿ ಪ್ರಶ್ನಿಸಿದ್ದಾರೆ. ಜುಲೈ 4 ರಂದು ಬಂಧನಕ್ಕೊಳಗಾಗಿದ್ದ ಮಂಜುನಾಥ್ ಅವರಿಗೆ ಜುಲೈ 11 ರಂದು ಜಾಮೀನು ನೀಡಲು ಸೆಷನ್ಸ್ ನ್ಯಾಯಾಲಯ ನಿರಾಕರಿಸಿತ್ತು.