ಮಂಕಿಪಾಕ್ಸ್ ರೋಗಿಯ 30 ಸಹ ಪ್ರಯಾಣಿಕರು ಮಂಗಳೂರಿನಲ್ಲಿ ಹೋಂ ಐಸೊಲೇಷನ್: ಮೈಸೂರಿನಲ್ಲೂ ತಪಾಸಣೆ ಹೆಚ್ಚಳ

ಕೇರಳದ ಕಣ್ಣೂರಿನಲ್ಲಿ 31 ವರ್ಷದ ವ್ಯಕ್ತಿಯಲ್ಲಿ ದೇಶದ ಎರಡನೇ ಮಂಕಿಪಾಕ್ಸ್ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಮೈಸೂರು ಮತ್ತು ಮಂಗಳೂರಿನ ಆರೋಗ್ಯ ಇಲಾಖೆ ಅಧಿಕಾರಿಗಳು ಗಡಿಯೊಳಗೆ ಪ್ರವೇಶಿಸುವ ಜನರ ಮೇಲೆ ತೀವ್ರ ನಿಗಾ ಇರಿಸುತ್ತಿದ್ದಾರೆ. ಸರಿಯಾಗಿ ತಪಾಸಣೆ ಮಾಡಿಯೇ ಮುಂದಕ್ಕೆ ಕಳುಹಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು/ಮಂಗಳೂರು: ಕೇರಳದ ಕಣ್ಣೂರಿನಲ್ಲಿ 31 ವರ್ಷದ ವ್ಯಕ್ತಿಯಲ್ಲಿ ದೇಶದ ಎರಡನೇ ಮಂಕಿಪಾಕ್ಸ್ (Monkeypox) ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಮೈಸೂರು ಮತ್ತು ಮಂಗಳೂರಿನ ಆರೋಗ್ಯ ಇಲಾಖೆ ಅಧಿಕಾರಿಗಳು ಗಡಿಯೊಳಗೆ ಪ್ರವೇಶಿಸುವ ಜನರ ಮೇಲೆ ತೀವ್ರ ನಿಗಾ ಇರಿಸುತ್ತಿದ್ದಾರೆ. ಸರಿಯಾಗಿ ತಪಾಸಣೆ ಮಾಡಿಯೇ ಮುಂದಕ್ಕೆ ಕಳುಹಿಸುತ್ತಿದ್ದಾರೆ.

ಕೇರಳದಲ್ಲಿ ಪತ್ತೆಯಾದ ಮಂಕಿಪಾಕ್ಸ್ ರೋಗಿಯ ಜೊತೆ ಸಹ ಪ್ರಯಾಣಿಕರು ಮಂಗಳೂರಿಗೆ ಬಂದಿದ್ದು ನಿನ್ನೆ ಎರಡನೇ ಪ್ರಕರಣ ವರದಿಯಾದ ಕೂಡಲೇ ಸಹ ಪ್ರಯಾಣಿಕರನ್ನು ಮಂಗಳೂರು ಆರೋಗ್ಯಾಧಿಕಾರಿಗಳು ಪತ್ತೆಹಚ್ಚಿ ಹೋಂ ಐಸೊಲೇಷನ್ ನಲ್ಲಿ ಇರಿಸಿದ್ದಾರೆ. 31 ವರ್ಷದ ವ್ಯಕ್ತಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(Mangaluru international airport) ದುಬೈಯಿಂದ ಜುಲೈ 13ರಂದು ಬಂದಿದ್ದನು. 

ದಕ್ಷಿಣ ಕನ್ನಡ ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ ರಾಜೇಶ್, ಪ್ರಯಾಣಿಕನನ್ನು ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ತಪಾಸಣೆ ನಡೆಸಲಾಗಿತ್ತು ಆಗ ನೆಗೆಟಿವ್ ವರದಿ ಬಂದಿತ್ತು. ಅವರು ಕೇರಳದ ಕಣ್ಣೂರಿಗೆ ಹೋದ ಮೇಲೆ ಅಲ್ಲಿ ಮಂಕಿಪಾಕ್ಸ್ ನ ಲಕ್ಷಣಗಳು ಗೋಚರವಾಗಿದೆ ಎಂದರು.

ದುಬೈಯಿಂದ ಕೇರಳದ ರೋಗಿ ಜೊತೆಗೆ 191 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಮುಂದಿನ ಮೂರು ಮತ್ತು ಹಿಂದಿನ ಸೀಟುಗಳಲ್ಲಿ ಪ್ರಯಾಣ ಮಾಡಿದ 34 ಪ್ರಯಾಣಿಕರನ್ನು ಆರೋಗ್ಯ ಇಲಾಖೆ ಶಿಷ್ಠಾಚಾರ ಪ್ರಕಾರ ಐಸೊಲೇಟ್ ಮಾಡಲಾಗಿದೆ. 34 ಪ್ರಯಾಣಿಕರಲ್ಲಿ 10 ಮಂದಿ ಮಂಗಳೂರು, 15 ಮಂದಿ ಕಣ್ಣೂರು ಮತ್ತು 9 ಮಂದಿ ಉಡುಪಿಯವರಾಗಿದ್ದಾರೆ. ಅವರಲ್ಲಿ 30 ಮಂದಿಯನ್ನು ಈಗಾಗಲೇ ಪತ್ತೆಹಚ್ಚಿ ಮುಂದಿನ 21 ದಿನಗಳವರೆಗೆ ಮನೆಗಳಲ್ಲಿ ಐಸೊಲೇಷನ್ ನಲ್ಲಿರುವಂತೆ ಸೂಚಿಸಲಾಗಿದೆ. ಉಳಿದ ನಾಲ್ವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದರು.

ಐಸೊಲೇಷನ್ ಆದವರನ್ನು ಪ್ರತಿದಿನ ನಿಗಾವಹಿಸಲಾಗುತ್ತಿದ್ದು, ಮಂಕಿಪಾಕ್ಸ್ ನ ಗುಣಲಕ್ಷಣಗಳು ಕಂಡುಬಂದರೆ ಮಂಗಳೂರಿನ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯಲ್ಲಿ ಐಸೊಲೇಷನ್ ವಾರ್ಡ್ ಗೆ ಶಿಫ್ಟ್ ಮಾಡಲಾಗುತ್ತದೆ. ತಿಂಗಳ ಹಿಂದೆ 10 ಬೆಡ್ ಗಳ ಮಂಕಿಪಾಕ್ಸ್ ಐಸೊಲೇಷನ್ ವಾರ್ಡ್ ನ್ನು ವೆನ್ ಲಾಕ್ ಆಸ್ಪತ್ರೆಯಲ್ಲಿ ತೆರೆಯಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳ ಶಿಷ್ಟಾಚಾರ ಪ್ರಕಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತದೆ ಎಂದು ಡಾ ರಾಜೇಶ್ ತಿಳಿಸಿದರು.

ಮಂಕಿಪಾಕ್ಸ್: ಕೇಂದ್ರದಿಂದ ಸಿದ್ಧತೆ ಪರಿಶೀಲನೆ: 
ಪ್ರಯಾಣಿಕರು ಮಂಕಿಪಾಕ್ಸ್ ಅಲ್ಲದ ಸ್ಥಳೀಯ ವಲಯದಿಂದ ಬಂದಿರುವುದರಿಂದ, ಪ್ರಯಾಣಿಕರ ಮೇಲೆ ನಿಕಟ ನಿಗಾ ಇರಿಸಲಾಗುತ್ತದೆ. ಸಂಭವನೀಯ ಪ್ರಕರಣಗಳನ್ನು ಪತ್ತೆಹಚ್ಚಲು ಪ್ರಯಾಣಿಕರ ಮೇಲೆ ಥರ್ಮಲ್ ಸ್ಕ್ರೀನಿಂಗ್ ಮುಂದುವರೆದಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಈ ಮಧ್ಯೆ, ಕೇಂದ್ರ ಸರ್ಕಾರವು, ನಿನ್ನೆ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ಆರೋಗ್ಯ ತಪಾಸಣೆ ಹೇಗೆ ನಡೆಯುತ್ತಿದೆ ಎಂದು ಪರಿಶೀಲನೆ ನಡೆಸಿದೆ. ವೈರಸ್ ರೋಗ ಹರಡುವ ಅಪಾಯವನ್ನು ಕಡಿಮೆ ಮಾಡಲು ಅಲ್ಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಸಭೆಯಲ್ಲಿ ವಿಮಾನ ನಿಲ್ದಾಣ ಮತ್ತು ಬಂದರು ಆರೋಗ್ಯ ಅಧಿಕಾರಿಗಳು ಮತ್ತು ಪ್ರಾದೇಶಿಕ ನಿರ್ದೇಶಕರು ಭಾಗವಹಿಸಿದ್ದರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 

ಕೇಂದ್ರ ಆರೋಗ್ಯ ಸಚಿವಾಲಯವು ಹೊರಡಿಸಿದ 'ಮಂಕಿಪಾಕ್ಸ್ ಕಾಯಿಲೆಯ ನಿರ್ವಹಣೆಯ ಮಾರ್ಗಸೂಚಿಗಳ' ಪ್ರಕಾರ, ವಿಶೇಷವಾಗಿ ಅಮೆರಿಕ ಮತ್ತು ಯುರೋಪ್‌ನಲ್ಲಿ ಸಲಿಂಗಕಾಮಿ ಮತ್ತು ದ್ವಿಲಿಂಗಿ ಪುರುಷರಲ್ಲಿ ವೇಗವಾಗಿ ಹರಡುತ್ತಿದೆ. 

ಮೈಸೂರು ಗಡಿಯಲ್ಲಿ ತೀವ್ರಗೊಂಡ ತಪಾಸಣೆ: ಕೇರಳ ಸೇರಿದಂತೆ ನೆರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ತಪಾಸಣೆಯನ್ನು ಮೈಸೂರು (Mysuru) ಆರೋಗ್ಯ ಇಲಾಖೆ ತೀವ್ರಗೊಳಿಸಿದೆ. ಪ್ರತಿದಿನ ಆರೋಗ್ಯ ಇಲಾಖೆ ಸಿಬ್ಬಂದಿ ಗಡಿಭಾಗದಿಂದ ಜಿಲ್ಲೆಗೆ ಪ್ರವೇಶಿಸುವ 250ಕ್ಕೂ ಹೆಚ್ಚು ಮಂದಿಯನ್ನು ತಪಾಸಣೆ ನಡೆಸುತ್ತಿದ್ದಾರೆ.

ಮೈಸೂರಿನ ಹೆಚ್ ಡಿ ಕೋಟೆ ತಾಲ್ಲೂಕಿನ ಆರೋಗ್ಯಾಧಿಕಾರಿ (THO) ಡಾ ಟಿ ರವಿಕುಮಾರ್ ನೇತೃತ್ವದ ಆರೋಗ್ಯ ಇಲಾಖೆ ಸಿಬ್ಬಂದಿ ತಂಡ ಕೇರಳದಿಂದ ಬಾವಲಿ ಚೆಕ್ ಪೋಸ್ಟ್ ಗೆ ಪ್ರವೇಶಿಸುವವರ ತಪಾಸಣೆ ಸರಿಯಾಗಿ ಮಾಡಲಾಗುತ್ತಿದೆಯೇ ಎಂದು ಉಸ್ತುವಾರಿ ನಡೆಸುತ್ತಿದ್ದಾರೆ. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ರವಿಕುಮಾರ್, ಕೇರಳದಲ್ಲಿ ವರದಿಯಾದ ಮೊದಲ ಪ್ರಕರಣ 37 ವರ್ಷದ ವ್ಯಕ್ತಿಯಲ್ಲಿ. ಅವರು ಕರ್ನಾಟಕ ಗಡಿಭಾಗಕ್ಕೆ ಹತ್ತಿರದಲ್ಲಿ ವಾಸಿಸುತ್ತಿದ್ದಾರೆ. ಕೇರಳದಲ್ಲಿ ವಾಹನದಲ್ಲಿ ಪ್ರವೇಶಿಸುವವರ ಮೇಲೆ ಕೂಡ ತೀವ್ರ ನಿಗಾ ಇರಿಸಲಾಗುತ್ತಿದೆ ಎಂದರು.

ಮೈಸೂರು ಗಡಿಯೊಳಗೆ ಬರುವವರು ಎಲ್ಲಿಂದ ಬರುತ್ತಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಸಹ ನಿಗಾವಹಿಸುತ್ತೇವೆ. ಥರ್ಮೊ ಸ್ಕಾನರ್ ಬಳಸಿ ಅವರ ತಾಪಮಾನ ಪರೀಕ್ಷೆ ಮಾಡುತ್ತೇವೆ. ಅವರ ದೇಹದಲ್ಲಿ ಏನಾದರೂ ತುರಿಕೆ, ಕಜ್ಜು, ಗುಳ್ಳೆಗಳಿವೆಯೇ ಎಂದು ಸಹ ಪರಿಶೀಲಿಸುತ್ತೇವೆ. ಕೇರಳದಿಂದ ಬಂದು ಗಡಿ ಭಾಗದೊಳಗೆ ಪ್ರವೇಶಿಸಿದ ವ್ಯಕ್ತಿಯಲ್ಲಿ ಜ್ವರ ಅಥವಾ ಕಜ್ಜು-ತುರಿಕೆ ಸಮಸ್ಯೆಯಿದೆಯೇ ಎಂದು ತಪಾಸಣೆ ಮಾಡಿ ಅವರನ್ನು ವಾಪಸ್ ಕಳುಹಿಸುತ್ತೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com