ಫಾಜಿಲ್ ಯಾವುದೇ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರಲಿಲ್ಲ; ಮಂಗಳೂರಿನಲ್ಲಿ 144 ಸೆಕ್ಷನ್‌ ಜಾರಿ: ಪೊಲೀಸ್ ಆಯುಕ್ತ

ಗುರುವಾರ ರಾತ್ರಿ ಸುರತ್ಕಲ್‌ನಲ್ಲಿ ಕೊಲೆಯಾದ ಫಾಜಿಲ್ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಶುಕ್ರವಾರ ಹೇಳಿದ್ದಾರೆ.
ಫಾಜಿಲ್ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್
ಫಾಜಿಲ್ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್

ಮಂಗಳೂರು:  ಗುರುವಾರ ರಾತ್ರಿ ಸುರತ್ಕಲ್‌ನಲ್ಲಿ ಕೊಲೆಯಾದ ಫಾಜಿಲ್ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಶುಕ್ರವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕುಮಾರ್, ಫಾಜಿಲ್ ತಂದೆ ಹಾಗೂ ಸ್ನೇಹಿತರ ಜೊತೆಗೆ ಮಾತನಾಡಿದ್ದೇನೆ. ಅವರು ಯಾವುದೇ ಸಂಘಟನೆಯೊಂದಿಗೆ ಸಂಬಂಧ ಹೊಂದಿರಲಿಲ್ಲ ಎಂಬುದನ್ನು ಸ್ಪಷ್ಪಪಡಿಸಿದ್ದಾರೆ. ಅಗ್ನಿ ಸುರಕ್ಷತೆ ವಿಷಯದಲ್ಲಿ ಡಿಪ್ಲೋಮಾ ಮುಗಿಸಿದ ನಂತರ ಉದ್ಯೋಗ ಹುಡುಕುತ್ತಿದ್ದ. ಇದೇ ವೇಳೆ ಕೆಲವೊಂದು ಕೆಲಸ ಮಾಡುತ್ತಿದ್ದ ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿಯನ್ನು ವಿಚಾರಣೆಗೆ ಕರೆದೊಯ್ಯಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಕೆಲ ಪೊಲೀಸ್ ಅಧಿಕಾರಿಗಳು ಭದ್ರತೆಯ ಉಸ್ತುವಾರಿಗಾಗಿ ಜಿಲ್ಲೆಗೆ ಆಗಮಿಸಿದ್ದಾರೆ.

ಈ ಮಧ್ಯೆ ಫಾಜಿಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಸುರತ್ಕಲ್ ಬಳಿಯ ಮಂಗಲಪೇಟೆಯಲ್ಲಿರುವ ಅವರ ನಿವಾಸಕ್ಕೆ ರವಾನಿಸಲಾಗಿದೆ. ಪಾರ್ಥಿವ ಶರೀರವನ್ನು ಮಂಗಳಪೇಟೆಯ ಮಸೀದಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯಕ್ರಿಯೆ ವೇಳೆ ಶಾಂತಿ ಕಾಪಾಡುವಂತೆ ಮುಸ್ಲಿಂ ಧಾರ್ಮಿಕ ಮುಖಂಡರು ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ಅಂತ್ಯಕ್ರಿಯೆಯಿಂದ ದೂರ ಉಳಿಯುವಂತೆ ಫಾಜಿಲ್ ಕುಟುಂಬದವರು ರಾಜಕಾರಣಿಗಳಿಗೆ ಮನವಿ ಮಾಡಿದ್ದಾರೆ. ಮಂಗಳೂರು ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರಿನ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಫಾಜಿಲ್ ಹತ್ಯೆಯ ಹಿಂದೆ ಆರ್‌ಎಸ್‌ಎಸ್-ಬಿಜೆಪಿ ಕೈವಾಡವಿದೆ ಎಂದು ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕಲಾಯಿ  ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com