ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಜೂನ್ 20ಕ್ಕೆ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: 20 ಗಂಟೆಗಳಲ್ಲಿ 10 ಕಾರ್ಯಕ್ರಮಗಳಲ್ಲಿ ಭಾಗಿ

ಜೂನ್.20ಕ್ಕೆ ಬೆಂಗಳೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಈ ವೇಳೆ 20 ಗಂಟೆಗಳಲ್ಲಿ 10 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
Published on

ಬೆಂಗಳೂರು: ಜೂನ್ 20ಕ್ಕೆ ಬೆಂಗಳೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಈ ವೇಳೆ 20 ಗಂಟೆಗಳಲ್ಲಿ 10 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಸೋಮವಾರ ನಗರಕ್ಕೆ ಆಗಮಿಸಿರುವ ಮೋದಿಯವರು ನಗರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ನಂತರ ಜೂನ್ 21ಕ್ಕೆ ಮೈಸೂರಿಗೆ ಭೇಟಿ ನೀಡಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜೂನ್ 20 ರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸುವ ಮೋದಿ ಅವರು, ಮೊದಲಿಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಕ್ಯಾಂಪಸ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡುವುದರ ಜೊತೆಗೆ ಮೆದುಳಿನ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ನಂತರ ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು.

ಬೆಂಗಳೂರು ಉಪನಗರ ರೈಲ್ವೆ ಯೋಜನೆ, ಕೆಲ ರಸ್ತೆ ಯೋಜನೆಗಳು ಮತ್ತು ಮಲ್ಟಿ ಲಾಜಿಸ್ಟಿಕ್ ಪಾರ್ಕ್‌ಗಳಿಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ನಂತರ ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ಕ್ಯಾಂಪಸ್‌ನಲ್ಲಿ ಡಾ ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ಮಧ್ಯಾಹ್ನ 3.45 ರ ಸುಮಾರಿಗೆ ಬೇಸ್ ವಿಶ್ವವಿದ್ಯಾಲಯವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಬಳಿಕ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ತಂತ್ರಜ್ಞಾನ ಕೇಂದ್ರಗಳಾಗಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಸಂಜೆ ವೇಳೆಗೆ ಮೈಸೂರಿಗೆ ತೆರಳುವ ಅವರು, ಸುತ್ತೂರು ಮಠಕ್ಕೆ ಭೇಟಿ ನೀಡಿ, ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿಯ ದರ್ಶನದ ಜೊತೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಮತ್ತೊಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಜೂನ್ 21ರಂದು ಮೈಸೂರು ಅರಮನೆ ಮುಂಭಾಗದಲ್ಲಿ ಸುಮಾರು ಒಂದು ಗಂಟೆ ಹದಿನೈದು ನಿಮಿಷಗಳ ಕಾಲ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮೈಸೂರಿನಿಂದ ನವದೆಹಲಿಗೆ ವಿಶೇಷ ವಿಮಾನದಲ್ಲಿ ಬೆಳಿಗ್ಗೆ 9.20 ರ ಸುಮಾರಿಗೆ ಹೊರಡಲಿದ್ದಾರೆ.

ಈ ನಡುವೆ ದೇಶದಾದ್ಯಂತ ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲಿ ನಡೆಯದಂತಹ ಕಾರ್ಯಕ್ರಮಗಳು ನಮ್ಮ ರಾಜ್ಯದಲ್ಲಿ ನಡೆಯಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ನಡೆಸಿದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಬಿಬಿಎಂಪಿ, ವಿಧಾನಸಭೆ ಸೇರಿದಂತೆ ಸರಣಿ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಭೇಟಿಯನ್ನು ಯಶಸ್ವಿಗೊಳಿಸಲು ಬಿಜೆಪಿಯ ನಾಯಕರು ಉತ್ಸಾಹ ತೋರಿದ್ದಾರೆಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com