ಬೆಂಗಳೂರು: ಪಿಎಂ ಕಾರ್ಯಕ್ರಮ ಭದ್ರತೆಗೆ ನಿಯೋಜಿಸಿದ್ದ ಪಿಎಸ್‌ಐ ಸುದರ್ಶನ್ ಶೆಟ್ಟಿ ಆತ್ಮಹತ್ಯೆಗೆ ಶರಣು
ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆ ಪಿಎಸ್‌ಐ ಸುದರ್ಶನ್ ಶೆಟ್ಟಿ (51) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published: 20th June 2022 11:18 AM | Last Updated: 20th June 2022 03:08 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆ ಪಿಎಸ್‌ಐ ಸುದರ್ಶನ್ ಶೆಟ್ಟಿ (51) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಹನುಮಂತನಗರ ಠಾಣೆ ಪಿಎಸ್‌ಐ ಆಗಿದ್ದ ಸುದರ್ಶನ್ ಅವರನ್ನು ಕೆಲ ತಿಂಗಳ ಹಿಂದೆಯಷ್ಟೇ ನಿಯೋಜನೆ ಮೇರೆಗೆ ಸೈಬರ್ ಕ್ರೈಂ ಠಾಣೆಗೆ ವರ್ಗಾಯಿಸಲಾಗಿತ್ತು. ಅವರ ಆತ್ಮಹತ್ಯೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಭದ್ರತೆಗಾಗಿ ಸುದರ್ಶನ್ ಅವರನ್ನು ನಿಯೋಜಿಸಲಾಗಿತ್ತು. ತಮಗೆ ಹುಷಾರಿಲ್ಲವೆಂದು ಹೇಳಿ ಕರ್ತವ್ಯಕ್ಕೆ ಗೈರಾಗಿದ್ದ ಅವರು, ಯಶವಂತಪುರದಲ್ಲಿರುವ ಮನೆಯಲ್ಲಿ ಉಳಿದುಕೊಂಡಿದ್ದರು.’
‘ವಿಶ್ವ ಅಪ್ಪಂದಿರ ದಿನವಾಗಿದ್ದರಿಂದ, ಸುದರ್ಶನ್ ಅವರಿಗೆ ಮಗ ಶುಭಾಶಯ ತಿಳಿಸಿದ್ದರು. ಧನ್ಯವಾದ ತಿಳಿಸಿ ಮಗನ ಜೊತೆ ಕಾಲ ಕಳೆದಿದ್ದ ಸುದರ್ಶನ್, ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಮಲಗಲು ಹೋಗಿರಬಹುದೆಂದು ಮಗ ಸುಮ್ಮನಾಗಿದ್ದರು. ಕೆಲ ಹೊತ್ತಿನ ನಂತರ ಹೊರಗೆ ಬಂದಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ಸುದರ್ಶನ್ ಶೆಟ್ಟಿ. ಕೆಲ ವರ್ಷಗಳ ಹಿಂದೆ ಕುಡಿತಕ್ಕೆ ದಾಸನಾಗಿದ್ದರು. ಕರ್ತವ್ಯದ ವೇಳೆಯಲ್ಲೂ ಕುಡಿದಿದ್ದ ಹಿನ್ನೆಲೆಯಲ್ಲಿ ಅವರು ಸಸ್ಪೆಂಡ್ ಆಗಿದ್ದರು. ಇದರಿಂದ ಮಾನಸಿಕವಾಗಿ ಮನನೊಂದು ಪಿಎಸ್ಐ ಸುದರ್ಶನ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಿವೃತ್ತ ಯೋಧರಾಗಿದ್ದ ಸುದರ್ಶನ್ ಶೆಟ್ಟಿ ಅವರು ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅತಿಯಾದ ಕುಡಿತದ ಚಟಕ್ಕೆ ದಾಸರಾಗಿದ್ದ ಸುದರ್ಶನ ಶೆಟ್ಟಿ, ರಿಹ್ಯಾಬಿಟೇಶನ್ ಸೆಂಟರ್ ಗೆ ತೆರಳಿ ಕುಡಿತವನ್ನ ಬಿಟ್ಟಿದ್ದರು ಎಂದು ತಿಳಿದು ಬಂದಿದೆ. ಮಾನಸಿಕ ಖಿನ್ನತೆಯಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ.