ಮಂಗಳೂರಿನಲ್ಲಿ ಅಪಾಯಕ್ಕೆ ಸಿಲುಕಿದ್ದ ಸರಕು ನೌಕೆ: 15 ಮಂದಿ ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್!
ಭಾರತೀಯ ಕರಾವಳಿ ಕಾವಲು ಪಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಂಗಳವಾರ ಸಂಜೆ ನವಮಂಗಳೂರು ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಸರಕು ನೌಕೆಯಿಂದ ಸಿರಿಯಾಗೆ ಸೇರಿದ 15 ಮಂದಿಯನ್ನು ರಕ್ಷಣೆ ಮಾಡಿದೆ.
Published: 22nd June 2022 10:54 AM | Last Updated: 22nd June 2022 12:57 PM | A+A A-

ರಕ್ಷಣೆಗೊಳಗಾಗಿರುವ 15 ಮಂದಿ.
ಮಂಗಳೂರು: ಭಾರತೀಯ ಕರಾವಳಿ ಕಾವಲು ಪಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಂಗಳವಾರ ಸಂಜೆ ನವಮಂಗಳೂರು ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಸರಕು ನೌಕೆಯಿಂದ ಸಿರಿಯಾಗೆ ಸೇರಿದ 15 ಮಂದಿಯನ್ನು ರಕ್ಷಣೆ ಮಾಡಿದೆ.
ಕೋಸ್ಟ್ ಗಾರ್ಡ್ ಡಿಐಜಿ ಎಸ್ ಬಿ ವೆಂಕಟೇಶ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಮಂಗಳವಾರ ಮಧ್ಯಾಹ್ನ 2.30ಕ್ಕೆ ಕೋಸ್ಟ್ ಗಾರ್ಡ್ ಗೆ ಪ್ರಿನ್ಸಸ್ ಮಿರಾಲ್ ಹೆಸರಿನ ಸರಕು ನೌಕೆ ಅಪಾಯಕ್ಕೆ ಸಿಲುಕಿರುವ ಕುರಿತು ಮಾಹಿತಿ ಬಂದಿತ್ತು. ಕೂಡಲೇ ಎರಡು ಕೋಸ್ಟ್ ಗಾರ್ಡ್ ಹಡಗುಗಳಾದ ಐಸಿಜಿಎಸ್ ವಿಕ್ರಮ್ ಮತ್ತು ಐಸಿಜಿಎಸ್ ಅಮರ್ತ್ಯವನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ಹಡಗುಗಳು ಸಂಜೆ 5.30 ರ ಹೊತ್ತಿಗೆ ಸ್ಥಳಕ್ಕೆ ತಲುಪಿದ್ದವು, ಈ ವೇಳೆ ಕಾರ್ಯಾಚರಣೆ ನಡೆಸಿ ಅಪಾಯಕ್ಕೆ ಸಿಲುಕಿದ್ದ ನೌಕೆಯಲ್ಲಿದ್ದ 15 ಮಂದಿಯನ್ನು ರಕ್ಷಣೆ ಮಾಡಿದೆ ಎಂದು ಹೇಳಿದರು.
ಈ ನೌಕೆ 8 ಸಾವಿರ ಟನ್ ಸ್ಟೀಲ್ ಕೋಲ್ ಅನ್ನು ಹೊತ್ತು ಮಲೇಷ್ಯಾದಿಂದ ಲೆಬನಾನ್‌ಗೆ ತೆರಳುತ್ತಿತ್ತು. ಈಮಧ್ಯೆ ಇಂಜಿನ್'ನ ಒಳಭಾಗದಲ್ಲಿ ಸಣ್ಣ ರಂಧ್ರ ಮೂಲಕ ನೀರು ಒಳಬರಲು ಪ್ರಾರಂಭಿಸಿದೆ. ಇದನ್ನು ತುರ್ತು ದುರಸ್ತಿಪಡಿಸುವ ಸಲುವಾಗಿ ಲಂಗರಿಗೆ ಅವಕಾಶ ಕಲ್ಪಿಸುವಂತೆ ನೌಕೆಯ ಕ್ಯಾಪ್ಟನ್ ಬಂದರು ಅಧಿಕಾರಿಗಳನ್ನು ಸಂಪರ್ಕಿಸಿದ್ದ.
ಇದೇ ವೇಳೆ ಅಪಾಯದಲ್ಲಿದ್ದ ನೌಕೆಯಿಂದ ಕ್ಯಾಪ್ಟನ್ ಹಾಗೂ ಸಿಬ್ಬಂದಿ ಸೇರಿ 15 ಮಂದಿಯನ್ನು ಕೋಸ್ಟ್ ಗಾರ್ಡ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ರಕ್ಷಿಸಿದ 15 ಮಂದಿಯನ್ನು ನವ ಮಂಗಳೂರಿಗೆ ಕರೆದೊಯ್ಯಲಾಗಿದ್ದು, ಮುಂದಿನ ಕ್ರಮಕ್ಕಾಗಿ ಪೊಲೀಸ್ ಮತ್ತು ವಲಸೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.