ಬೆಂಗಳೂರು ಪ್ರಜ್ವಲ ಭವಿಷ್ಯಕ್ಕೆ ಬಲಿಷ್ಠ ಬಿಬಿಎಂಪಿ ಬೇಕು... ಮೊದಲ ಬಾರಿ ಮತದಾನಕ್ಕೆ ಯುವಕರು ಉತ್ಸುಕ!

ಬೆಂಗಳೂರು ಪ್ರಜ್ವಲ ಭವಿಷ್ಯಕ್ಕೆ ಬಲಿಷ್ಠ ಬಿಬಿಎಂಪಿಯ ಅಗತ್ಯವಿದೆ ಎಂದು ಭಾವಿಸಿರುವ ನಗರದ ಯುವಕರು, ಬಿಬಿಎಂಪಿ ಚುನಾವಣೆಯಲ್ಲಿ ಮೊದಲ ಬಾರಿ ಮತದಾನ ಮಾಡಲು ಉತ್ಸುಕರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ಪ್ರಜ್ವಲ ಭವಿಷ್ಯಕ್ಕೆ ಬಲಿಷ್ಠ ಬಿಬಿಎಂಪಿಯ ಅಗತ್ಯವಿದೆ ಎಂದು ಭಾವಿಸಿರುವ ನಗರದ ಯುವಕರು, ಬಿಬಿಎಂಪಿ ಚುನಾವಣೆಯಲ್ಲಿ ಮೊದಲ ಬಾರಿ ಮತದಾನ ಮಾಡಲು ಉತ್ಸುಕರಾಗಿದ್ದಾರೆ.

ಬಿಬಿಎಂಪಿ ಚುನಾವಣೆ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮತದಾರರ ಚಿತ್ತ ಯಾವ ಕಡೆಯಿದೆ. ಯಾವ ಪಕ್ಷ ಅಥವಾ ಜನಪ್ರತಿನಿಧಿ ಕಡೆಗೆ ಒಲವನ್ನು ಹೊಂದಿದ್ದಾರೆ. ಹೊಸ ಮತದಾರರು ಗಮನವೇನು ಎನ್ನುವುದರ ಬಗ್ಗೆ ಜನಾಗ್ರಹ ಸೆಂಟರ್ ಫಾರ್ ಸಿಟಿಜನ್ ಶಿಪ್ ಆಂಡ್ ಡೆಮಾಕ್ರಸಿ ಸಂಸ್ಥೆಯು ಕೇಂದ್ರ ನಗರ ರಾಜಕೀಯ ಸಮೀಕ್ಷೆಯನ್ನು ನಡೆಸಿದೆ.

ಸಮೀಕ್ಷೆಯ ಭಾಗವಾಗಿ ಸ್ಥಳೀಯ ಆಡಳಿತ, ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳು, ಮುಂಬರುವ ಬಿಬಿಎಂಪಿ ಚುನಾವಣೆಗಳಿಂದ ಮತದಾರರ ನಿರೀಕ್ಷೆ, ನಗರ ಬಜೆಟ್ ಮತ್ತು ಖರ್ಚಿನ ಬಗ್ಗೆ ಸಾರ್ವಜನಿಕ ಅರಿವಿನ ಮಟ್ಟ, ನಗರದ ಸಮಸ್ಯೆಗಳು, ಕೌನ್ಸಿಲರ್ಗಳೊಂದಿಗೆ ನಾಗರಿಕರ ಸಂವಹನ ಹಾಗೂ ನಗರ ಆಡಳಿತ ಮತ್ತು ರಾಜಕೀಯ ರಚನೆಗಳ ಬಗ್ಗೆ ನಾಗರಿಕರ ಮೂಲಭೂತ ಜ್ಞಾನ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಸಂಸ್ಥೆ ಸಮೀಕ್ಷೆ ನಡೆಸಿದೆ.

ಶ್ರೇಣೀಕೃತ ಯಾದೃಚ್ಛಿಕ ಮಾದರಿ ವಿಧಾನವನ್ನು ಬಳಸಿ ಈ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ ಬೆಂಗಳೂರಿನ ಎಂಟು ವಲಯಗಳಲ್ಲಿ ಇರುವ 27 ವಾರ್ಡ್ ಗಳ 503 ನಾಗರಿಕರು ಭಾಗವಹಿಸಿದ್ದಾರೆ.

ಸಮೀಕ್ಷೆಯ ವರದಿಯನ್ನು ನಿನ್ನೆ ಸಂಸ್ಥೆಯು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಿದೆ. ವರದಿಯಲ್ಲಿ ನಗದಲ್ಲಿರುವ ಶೇ.86ರಷ್ಟು ಯುವಕರು ಮೊದಲ ಬಾರಿಗೆ ಮತದಾನ ಮಾಡಲು ಉತ್ಸುಕರಾಗಿರುವುದು ಕಂಡು ಬಂದಿದೆ. ಇವರೆಲ್ಲರೂ ಬೆಂಗಳೂರು ಪ್ರಜ್ವಲ ಭವಿಷ್ಯಕ್ಕೆ ಬಲಿಷ್ಠ ಬಿಬಿಎಂಪಿ ಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಎಂಟು ವಲಯಗಳಲ್ಲಿ 27 ವಾರ್ಡ್‌ಗಳಿಂದ 503 ಜನರಿಗೆ 29 ಪ್ರಶ್ನೆಗಳನ್ನು ಕೇಳಲಾಯಿತು. ಸಮೀಕ್ಷೆಯನ್ನು ಡಿಸೆಂಬರ್ 16, 2021 ಮತ್ತು ಜನವರಿ 2, 2022 ರ ನಡುವೆ ನಡೆಸಲಾಯಿತು. ವಿವಿಧ ವಯಸ್ಸಿನ ಮತ್ತು ಸಾಮಾಜಿಕ-ಆರ್ಥಿಕ ಗುಂಪುಗಳ ಜನರನ್ನು ಸಮೀಕ್ಷೆಯಲ್ಲಿ ಒಳಪಡಿಸಲಾಯಿತು.

ಬೆಂಗಳೂರಿನ ಬಹುತೇಕ ಮತದಾರರು ಬಿಬಿಎಂಪಿ ಚುನಾವಣೆಗಾಗಿ ಕಾಯುತ್ತಿದ್ದಾರೆ. ನಾವು ಬಿಬಿಎಂಪಿಯ ಬಗ್ಗೆ ಜನರಿಗೆ - ಅದರಲ್ಲೂ ಪ್ರಥಮ ಬಾರಿಯ ಮತದಾರರಿಗೆ- ಎಷ್ಟು ಅರಿವಿದೆ ಎಂದು ತಿಳಿಯಲು ಸಮೀಕ್ಷೆ ನಡೆಸಿದ್ದೆವು. ವರದಿಯಲ್ಲಿ ಬಿಬಿಎಂಪಿ, ವಾರ್ಡ್ ಕಾರ್ಪೊರೇಟರ್ಗಳು, ವಾರ್ಡ್ ಸಮಿತಿಗಳು ಇತ್ಯಾದಿಗಳ ಪಾತ್ರವನ್ನು ಕೆಲವೇ ಕೆಲವರು ಅರ್ಥೈಸಿಕೊಂಡಿದ್ದಾರೆ. ಆದರೆ, ಅವರೆಲ್ಲರ ಪ್ರಕಾರ ಬೆಂಗಳೂರಿಗರನ್ನು ಕಾಡುವ ಸಮಸ್ಯೆಯ ಆಧಾರದ ಮೇಲೆ ಸ್ಥಳೀಯ ಚುನಾವಣೆಯನ್ನು ನಡೆಸಬೇಕು. ನಮ್ಮ ನಗರವನ್ನು ಅಭಿವೃದ್ಧಿಪಡಿಸಲು ನಮ್ಮ ಸ್ಥಳೀಯ ಆಡಳಿತಾಂಗವನ್ನು ಬಲಪಡಿಸಬೇಕಾಗಿದೆ. ಇದು ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸುವುದರಿಂದ ಸಾಧ್ಯವಾಗುತ್ತದೆ. ನಮ್ಮ ನಗರಕ್ಕೆ ಸಧೃಡ ಭವಿಷ್ಯದ ಯೋಜನೆಯನ್ನು ಪ್ರಸ್ತುತಪಡಿಸಲು ಮತ್ತು ಅದರ ಆಧಾರದ ಮೇಲೆ ಮತಗಳನ್ನು ಕೇಳಲು ನಾವು ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇವೆ. ಮಾಧ್ಯಮದವರು ರಾಜ್ಯ ಮತ್ತು ರಾಷ್ಟೀಯ ಮಟ್ಟದ ಚುನಾವಣೆಗೆ ನೀಡುವ ಪ್ರಾಮುಖ್ಯತೆಯನ್ನು ಬಿಬಿಎಂಪಿ ಚುನಾವಣೆಗೂ ನೀಡಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆಂದು ಜನಾಗ್ರಹ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿಯವರು ಹೇಳಿದರು.

ಸಮೀಕ್ಷೆಯ ಮುಖ್ಯಾಂಶಗಳು...

  • ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಕೇವಲ ಶೇ.17ರಷ್ಟು ಜನರಿಗೆ ಹಿಂದಿನ ಮೇಯರ್ ಹೆಸರು ತಿಳಿದಿದೆ, ಶೇ.97ರಷ್ಟು ಜನರಿಗೆ ಪ್ರಧಾನಿ ಹೆಸರು ತಿಳಿದಿದೆ ಮತ್ತು ಶೇ.83 ಜನರಿಗೆ ಮುಖ್ಯಮಂತ್ರಿ ಹೆಸರು ತಿಳಿದಿದೆ.
  • ಶೇ.88 ಜನರು ತಮ್ಮ ವಾರ್ಡ್ ಕೌನ್ಸಿಲರ್ ಅನ್ನು ಭೇಟಿ ಮಾಡಿಲ್ಲ, ಶೇ.87 ಜನರು ವಾರ್ಡ್ ಸಮಿತಿ ಸಭೆಗಳ ಬಗ್ಗೆ ತಿಳಿದಿಲ್ಲ, ಶೇ.95 ಜನರು ವಾರ್ಡ್ ಸಮಿತಿ ಸಭೆಗೆ ಹಾಜರಾಗಿಲ್ಲ, ಶೇ.22 ಜನರು ಸಮಸ್ಯೆಯನ್ನು ಪರಿಹರಿಸಲು ಶಾಸಕರನ್ನು ಸಂಪರ್ಕಿಸಿದ್ದಾರೆ. ಕೇವಲ ಶೇ.12ರಷ್ಟು ಜನರು ಮಾತ್ರ ಕೌನ್ಸಿಲರ್ ಅನ್ನು ಭೇಟಿ ಮಾಡಿದ್ದಾರೆ.
  • ಶೇ.87 ಬೆಂಗಳೂರಿನ ಮತದಾರರು ಬಲವಾದ ಕೌನ್ಸಿಲರ್ ತಮ್ಮ ವಾರ್ಡ್‌ಗಳಿಗೆ ಉತ್ತಮ ಸೇವೆಗಳು ಮತ್ತು ಸುಧಾರಿತ ಮೂಲಸೌಕರ್ಯವನ್ನು ಖಚಿತಪಡಿಸಿಕೊಳ್ಳಬಹುದು ಎಂದು ನಂಬುತ್ತಾರೆ
  • ಶೇ.23ರಷ್ಟು ಜನರು ಪಾದಚಾರಿ ಮೂಲಸೌಕರ್ಯವನ್ನು ಅತ್ಯಂತ ಮಹತ್ವದ ಸಮಸ್ಯೆ ಎಂದು ಉಲ್ಲೇಖಿಸಿದ್ದಾರೆ, ಶೇ.20 ಜನರು ಕಸ ಸಂಗ್ರಹಣೆ, ಶೇ.16ರಷ್ಟು ಜನರು ಸಂಚಾರ ದಟ್ಟಣೆ, ಶೇ.15ರಷ್ಟು ಜನರು ಶುದ್ಧ ನೀರಿನ ಲಭ್ಯತೆಯ ಕೊರತೆಯನ್ನು ಉಲ್ಲೇಖಿಸಿದ್ದಾರೆ.
  • ಶೇ.89 ಮತದಾರರು ಪರಿಸರ ಸಮಸ್ಯೆಗಳು ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಕಾಳಜಿ ತೋರಿಸಿದ್ದಾರೆ, ಶೇ.25ರಷ್ಚು ಜನರು ಕೌನ್ಸಿಲರ್‌ಗಳು ಪರಿಸರ ಸಮಸ್ಯೆಗಳಿಗೆ ಗಮನಾರ್ಹ ಮಹತ್ವ ನೀಡಬೇಕೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com