ಪರೀಕ್ಷೆ ನಡೆಸದೇ ಔಷಧಕ್ಕೆ ಅನುಮತಿ: ಬಯೋಕಾನ್ ಅಂಗಸಂಸ್ಥೆಯಿಂದ ಲಂಚ, ಐವರು ಸಿಬಿಐ ವಶಕ್ಕೆ!
ಔಷಧಿಗೆ 3ನೇ ಹಂತದ ಪ್ರಯೋಗ ಇಲ್ಲದೇ ಅನುಮೋದನೆ ನೀಡಲು 4 ಲಕ್ಷ ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಜಂಟಿ ನಿಯಂತ್ರಕ ಎಸ್. ಈಶ್ವರ ರೆಡ್ಡಿ ಸೇರಿ ಬಯೋಕಾನ್‌ನ ಒಟ್ಟು ಐವರನ್ನು ಮಂಗಳವಾರ ಸಿಬಿಐ ಬಂಧಿಸಿದೆ.
Published: 23rd June 2022 10:08 AM | Last Updated: 23rd June 2022 10:08 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬಯೋಕಾನ್ ಅಂಗಸಂಸ್ಥೆಯಾದ ಬಯೋಕಾನ್ ಬಯಾಲಜಿಕ್ಸ್ ಕಂಪನಿಯ ‘ಇನ್ಸುಲಿನ್ ಅಸ್ಪಾರ್ಚ್’ ಎಂಬ ಔಷಧಿಗೆ 3ನೇ ಹಂತದ ಪ್ರಯೋಗ ಇಲ್ಲದೇ ಅನುಮೋದನೆ ನೀಡಲು 4 ಲಕ್ಷ ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಜಂಟಿ ನಿಯಂತ್ರಕ ಎಸ್. ಈಶ್ವರ ರೆಡ್ಡಿ ಸೇರಿ ಬಯೋಕಾನ್‌ನ ಒಟ್ಟು ಐವರನ್ನು ಮಂಗಳವಾರ ಸಿಬಿಐ ಬಂಧಿಸಿದೆ.
ಬಯೋಕಾನ್ ಬಯೋಲಾಜಿಕಲ್‌ನ ಉಪ ಮುಖ್ಯಸ್ಥ ಎಲ್.ಪ್ರವೀಣ್ ಕುಮಾರ್, ಸಿನರ್ಜಿ ನೆಟ್ವರ್ಕ್ ಇಂಡಿಯಾ ಪ್ರೈ.ಲಿ.ನ ನಿರ್ದೇಶಕ ದಿನೇಶ್ ದುವಾ ಮತ್ತು ಗುಲ್ಜೀತ್ ಸೇತಿ ಅವರನ್ನು ಸಿಬಿಐ ಬಂಧಿಸಿದೆ. ಅಲ್ಲದೇ ಡಿಸಿಜಿಐನ ಸಹಾಯಕ ಔಷಧ ಪರೀಕ್ಷಕ ಅನಿಮೇಶ್ ಕುಮಾರ್ ಅವರನ್ನು ಬಂಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಜಂಟಿ ನಿರ್ದೇಶಕ ಎಸ್.ಈಶ್ವರ ರೆಡ್ಡಿ ಅವರನ್ನು ಸಹ ಸಿಬಿಐ ಬಂಧಿಸಿತ್ತು. ಈ ಪ್ರಕರಣದಲ್ಲಿ ಒಟ್ಟಾರೆ ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಜಂಟಿ ನಿರ್ದೇಶಕರಾದ ಎಸ್. ಈಶ್ವರ್ ರೆಡ್ಡಿ ಬಂಧಿತರು. ಇವರೊಂದಿಗೆ ಸಿನರ್ಜಿ ನೆಟ್ವರ್ಕ್ ಇಂಡಿಯಾ ಲಿಮಿಟೆಡ್ ಕಂಪನಿಯ ನಿರ್ದೇಶಕ ದಿನೇಶ್ ದುವಾ ಅವರನ್ನು ಕೂಡ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಂಚ ಪ್ರಕರಣ ಸಂಬಂಧ ಇನ್ನೂ ಹಲವರ ಬಂಧನ ಶೀಘ್ರದಲ್ಲೇ ನಡೆಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಮ್ಮ ಉತ್ಪನ್ನಗಳಿಗೆ ಯುರೋಪ್ ಹಾಗೂ ಇತರ ವಿದೇಶಗಳಲ್ಲಿ ಈಗಾಗಲೇ ಅನುಮತಿ ಸಿಕ್ಕಿದೆ. ಹಾಗಿದ್ದ ಮೇಲೆ ಲಂಚ ನೀಡಿ ದೇಶದಲ್ಲಿ ಅನುಮತಿ ಪಡೆಯುವುದು ನಮಗೆ ಬೇಕಿಲ್ಲ. ನಾವು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಎಲ್ಲ ಪ್ರಕ್ರಿಯೆಗಳನ್ನು ಪಾಲಿಸುತ್ತಿದ್ದೇವೆ ಎಂದು ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ನೇತೃತ್ವದ ಬಯೋಕಾನ್ ಕಂಪನಿಯ ವಕ್ತಾರರು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
2022ರ ಮೇ 18ರಂದು ವಿಷಯ ತಜ್ಞರ ಸಭೆಯಲ್ಲಿ ಇನ್ಸುಲಿನ್ ಆ್ಯಸ್ಪಾರ್ಟ್ ಇಂಜೆಕ್ಷನ್‌ಗೆ ಪರವಾಗಿ ಶಿಫಾರಸು ಮಂಡಿಸಲು ರೆಡ್ಡಿಗೆ ಒಟ್ಟಾರೆ 9 ಲಕ್ಷ ರೂ. ಲಂಚ ನೀಡಲು ತೀರ್ಮಾನಿಸಲಾಗಿತ್ತು ಎಂದು ಸಿಬಿಐ ತನಿಖೆಯಲ್ಲಿ ಬಯಲಾಗಿದೆ.
ಜೂನ್ 15 ರಂದು ನಡೆದ ಎಸ್‌ಇಸಿ ಸಭೆಯಲ್ಲಿ ಬಯೋಕಾನ್ ಬಯೋಲಾಜಿಕ್ಸ್‌ನ ಮೂರನೇ ಕಡತವನ್ನು ಸೇರಿಸಲು ಸೇಥಿ ಮತ್ತು ರೆಡ್ಡಿ ಒಪ್ಪಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಸಹ-ಆರೋಪಿ ಡ್ರಗ್ ಇನ್ಸ್‌ಪೆಕ್ಟರ್ ಅನಿಮೇಶ್ 30,000 ರೂ.ಗೆ ಬದಲಾಗಿ ಫೈಲ್ ಅನ್ನು ಪ್ರಕ್ರಿಯೆಗೊಳಿಸಿ ಸಭೆಯಲ್ಲಿ ಇರಿಸಿದರು, ನಂತರ ದುವಾ ಅವರು ರೆಡ್ಡಿಯನ್ನು ಭೇಟಿ ಮಾಡಿ ಎಸ್ಇಸಿ ಸಭೆಯಲ್ಲಿ ಅನುಕೂಲಕರ ನಿರ್ಧಾರದ ಭರವಸೆ ನೀಡಿದ್ದರು ಎಂದು ಸಿಬಿಐ ಹೇಳಿಕೊಂಡಿದೆ. ನಂತರ, ಸಭೆಯಲ್ಲಿ ಕಡತವನ್ನು ಅನುಮೋದಿಸಲಾಗಿದೆ ಎಂದು ಪ್ರವೀಣ್ ಕುಮಾರ್ ಅವರು ಸೇಥಿಗೆ ತಿಳಿಸಿದರು ಎಂದು ಸಿಬಿಐ ತಿಳಿಸಿದೆ.