ಬೆಂಗಳೂರು ಮಳೆಗೆ ಮತ್ತೊಂದು ಬಲಿ: ಐಐಎಸ್ಸಿ ಕ್ಯಾಂಪಸ್ ಗೋಡೆ ಕುಸಿದು ಕಾರ್ಮಿಕ ಸಾವು!

ಬೆಂಗಳೂರು ಮಳೆಗೆ ಮತ್ತೊಂದು ಬಲಿಯಾಗಿದ್ದು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಕ್ಯಾಂಪಸ್‌ನಲ್ಲಿ ಕಾಂಪೌಂಡ್ ಗೋಡೆ ಕುಸಿದು ಬಿದ್ದು ಕಟ್ಟಡ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ.
ಬೆಂಗಳೂರು ಐಐಎಸ್ಸಿ ಕ್ಯಾಂಪಸ್ ಗೋಡೆ ಕುಸಿತ
ಬೆಂಗಳೂರು ಐಐಎಸ್ಸಿ ಕ್ಯಾಂಪಸ್ ಗೋಡೆ ಕುಸಿತ

ಬೆಂಗಳೂರು: ಬೆಂಗಳೂರು ಮಳೆಗೆ ಮತ್ತೊಂದು ಬಲಿಯಾಗಿದ್ದು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಕ್ಯಾಂಪಸ್‌ನಲ್ಲಿ ಕಾಂಪೌಂಡ್ ಗೋಡೆ ಕುಸಿದು ಬಿದ್ದು ಕಟ್ಟಡ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ.

ಹೌದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮಳೆ ಸಂಬಂಧಿತ ದುರಂತ ಸಂಭವಿಸಿದ್ದು, ಬೃಹತ್ ಮರವೊಂದು ಬೆಂಗಳೂರು ಐಐಎಸ್ಸಿ ಕಾಂಪೌಂಡ್ ಗೋಡೆಯ ಮೇಲೆ ಬಿದ್ದ ಪರಿಣಾಮ ಗೋಡೆ ಕುಸಿದು ಬಿದ್ದ ಘಟನೆ ನಡೆದಿದೆ. ಈ ವೇಳೆ ಅಲ್ಲಿಯೇ ಇದ್ದ ಕಟ್ಟಡ ಕಾರ್ಮಿಕ ಗೋಡೆ ಕುಸಿತದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತರನ್ನು ಆನೇಕಲ್ ಮೂಲದ ವಸಂತ (30) ಎಂದು ಗುರುತಿಸಲಾಗಿದೆ. ಐಐಎಸ್‌ಸಿಗೆ ಹೊಂದಿಕೊಂಡಿರುವ ಲೇಔಟ್‌ನಲ್ಲಿ ಮೂವರು ಕಾರ್ಮಿಕರು ಮಳೆ ನೀರು ಚರಂಡಿ ಕಾಮಗಾರಿಯಲ್ಲಿ ತೊಡಗಿದ್ದರು. ಇದೇ ಸಂದರ್ಭದಲ್ಲೇ ಗೋಡೆ ಕುಸಿದಿದೆ.

ವಸಂತ್ ಮೃತಪಟ್ಟರೆ, ಉಳಿದ ಇಬ್ಬರು ಕಾರ್ಮಿಕರಿಗೆ ಗಾಯಗಳಾಗಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಜಾನೆ 5.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಯಶವಂತಪುರ ಪೊಲೀಸರು ತಿಳಿಸಿದ್ದಾರೆ.

ಅವಶೇಷಗಳು ಮತ್ತು ಬುಡಸಮೇತ ಉರುಳಿ ಬಿದ್ದ ಮರಗಳು ರಸ್ತೆಗೆ ಚೆಲ್ಲಿದ್ದರಿಂದ ಬೆಳಗಿನ ಜಾವ ಯಶವಂತಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಈ ಮಧ್ಯೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕಳೆದ ಒಂದು ವಾರದಲ್ಲಿ ನಗರದಲ್ಲಿ ಮಳೆಯಿಂದಾಗಿ ಮೂರು ಸಾವುಗಳು ವರದಿಯಾಗಿವೆ. ಶುಕ್ರವಾರ ಮಧ್ಯರಾತ್ರಿ, ಕೆಆರ್ ಪುರಂ ವ್ಯಾಪ್ತಿಯ ಗಾಯತ್ರಿ ಲೇಔಟ್‌ನಲ್ಲಿ ಮಿಥುನ್ (28) ಎಂಬವರು ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅಂತೆಯೇ ಮುನಿಯಮ್ಮ (62) ಎಂಬುವವರು ಅಪಾರ್ಟ್‌ಮೆಂಟ್ ಸಂಕೀರ್ಣದ ಕಾಂಪೌಂಡ್ ಗೋಡೆ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com