'ಹಂಪಿ ಬೈ ನೈಟ್' ಯೋಜನೆಗೆ ಸಚಿವ ಆನಂದ್ ಸಿಂಗ್ ಪ್ರಾಯೋಗಿಕ ಚಾಲನೆ

ವಿಶ್ವವಿಖ್ಯಾತ ಹಂಪಿಯಲ್ಲಿ ಕನ್ನಡ ರಾಜ್ಯಾತ್ಸವದ ನಿಮಿತ್ತ ಮಂಗಳವಾರ ರಾತ್ರಿ ಹಂಪಿ ಬೈ ನೈಟ್ ವಿನೂತನ ಯೋಜನೆಯ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಚಾಲನೆ ನೀಡಿದರು.
ಹಂಪಿ
ಹಂಪಿ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಕನ್ನಡ ರಾಜ್ಯಾತ್ಸವದ ನಿಮಿತ್ತ ಮಂಗಳವಾರ ರಾತ್ರಿ ಹಂಪಿ ಬೈ ನೈಟ್ ವಿನೂತನ ಯೋಜನೆಯ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಚಾಲನೆ ನೀಡಿದರು.

ಇನ್ನು ಮುಂದೆ  ಹಂಪಿಯಲ್ಲಿರುವ 18 ಸ್ಮಾರಕಗಳನ್ನು ಪ್ರವಾಸಿಗರು ಸಂಜೆ ವೇಳೆ ಬೆಳಕು ಮತ್ತು ಧ್ವನಿ ಕಾರ್ಯಕ್ರಮದ ಮೂಲಕ ಕಣ್ತುಂಬಿಕೊಳ್ಳಬಹುದು. ತಾಂತ್ರಿಕ ಕಾರಣಗಳಿಂದ ಒಂದು ವರ್ಷದಿಂದ ‘ಹಂಪಿ ಬೈ ನೈಟ್’ ಯೋಜನೆ ಸ್ಥಗಿತಗೊಂಡಿತ್ತು. ಹಂಪಿ ವರ್ಲ್ಡ್ ಹೆರಿಟೇಜ್ ಏರಿಯಾ ಮ್ಯಾನೇಜ್‌ಮೆಂಟ್ ಅಥಾರಿಟಿ ಮತ್ತು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾಯಿಂದ ಅನುಮತಿಯ ದೊರೆಯದ ಹಿನ್ನೆಲೆಯಲ್ಲಿ ಯೋಜನೆಯನ್ನು ತಡೆಹಿಡಿಯಲಾಗಿತ್ತು. ಇದೀಗ ಸಚಿವ ಆನಂದ್ ಸಿಂಗ್ ಅವರು ಯೋಜನೆಗೆ ಮತ್ತೆ ಚಾಲನೆ ನೀಡಿದ್ದಾರೆ.

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥಬೀದಿಯ ಎದುರು ಬಸವಣ್ಣ ಮಂಟಪದ ಬಳಿ ನಡೆದ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು.

ಹಂಪಿ ಸ್ಥಳದ ಮಹಿಮೆ ಸಾರುವ ಕಥನ, ಶ್ರೀವಿರೂಪಾಕ್ಷೇಶ್ವರ ಮತ್ತು ಶ್ರೀ ಪಂಪಾಂಬಿಕೆ ದೇವಿ ಕಥನ ಮತ್ತು ವಾಲಿ ಮತ್ತು ಸುಗ್ರೀವ ಕಥನವುಳ್ಳ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು.

‘ಹಂಪಿ ಬೈ ನೈಟ್’ ಪ್ರದರ್ಶನದ ಅಡಿಯಲ್ಲಿ, ಶ್ರೀವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಟ್ಲ ದೇವಸ್ಥಾನ ಸಂಕೀರ್ಣ ಮತ್ತು ಸಾಸಿವೆಕಾಳು ಗಣೇಶನ ಪ್ರತಿಮೆಗಳು ಸೇರಿದಂತೆ ಹಂಪಿಯ 18 ​​ಪ್ರಮುಖ ಸ್ಮಾರಕಗಳಲ್ಲಿ ಸಂಜೆ 7 ರಿಂದ 9 ರವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ. ಪ್ರಾಯೋಗಿಕ ಹಂತದಲ್ಲಿ ಈ ಪ್ರದರ್ಶನವು ವಾರಾಂತ್ಯದಲ್ಲಿ ಮತ್ತು ರಜಾದಿನಗಳಲ್ಲಿ ನಡೆಯಲಿದ್ದು, ಸಾರ್ವಜನಿಕರ ಪ್ರತಿಕ್ರಿಯೆ ಅವಲಂಬಿಸಿ ವಾರದ ಎಲ್ಲಾ ದಿನಗಳಲ್ಲಿ ಕಾರ್ಯಕ್ರಮ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಹಂಪಿ ವರ್ಲ್ಡ್ ಹೆರಿಟೇಜ್ ಏರಿಯಾ ಮ್ಯಾನೇಜ್‌ಮೆಂಟ್ ಅಥಾರಿಟಿ ಮೇಲ್ವಿಚಾರಣೆಯಲ್ಲಿ ಖಾಸಗಿ ಕಂಪನಿಯೊಂದು ಹಂಪಿ ಬೈ ನೈಟ್ ಕಾರ್ಯಕ್ರಮದ ಗುತ್ತಿಗೆಯನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಅಧಿಕಾರಿಯೊಬ್ಬರು ಮಾತನಾಡಿ, ಪ್ರವಾಸಿಗರಿಗೆ ಸ್ಮಾರಕಗಳ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿಸಲು ಕ್ಯೂಆರ್ ಕೋಡ್‌ಗಳನ್ನು ಪರಿಚಯಿಸಲು ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಸ್ಮಾರಕಗಳ ಮೇಲೆ ಈಗಾಗಲೇ ಬೋರ್ಡ್‌ಗಳು ಬಂದಿದ್ದು, ಪ್ರವಾಸಿಗರು ತಮ್ಮ ಆಂಡ್ರಾಯ್ಡ್ ಫೋನ್‌ಗಳನ್ನು ಬಳಸಿಕೊಂಡು ಸ್ಕ್ಯಾನ್ ಮಾಡಿ, ಮಾಹಿತಿಗಳ ಪಡೆದುಕೊಳ್ಳಬಹುದು  ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com