ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ರಸ್ತೆ ಗುಂಡಿ ಮುಚ್ಚಿದ ಮಲ್ಲೇಶ್ವರದ ನಾಗರಿಕರು
ಬೆಂಗಳೂರಿನ ರಸ್ತೆ ಗುಂಡಿಗಳು ಸಾರ್ವಜನಿಕರಿಗೆ ಮಾರಕವಾಗಿ ಪರಿಣಮಿಸಿದ್ದು, ಹಲವರು ಜೀವ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಕೈ-ಕಾಲು ಮುರಿದುಕೊಂಡಿದ್ದಾರೆ.
Published: 03rd November 2022 05:21 PM | Last Updated: 03rd November 2022 06:39 PM | A+A A-

ಮಲ್ಲೇಶ್ವರದಲ್ಲಿ ರಸ್ತೆ ಗುಂಡಿ ಮುಚ್ಚುತ್ತಿರುವ ಸಾರ್ವಜನಿಕರು
ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳು ಸಾರ್ವಜನಿಕರಿಗೆ ಮಾರಕವಾಗಿ ಪರಿಣಮಿಸಿದ್ದು, ಹಲವರು ಜೀವ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಕೈ-ಕಾಲು ಮುರಿದುಕೊಂಡಿದ್ದಾರೆ.
ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರನ್ನು ಆಕ್ರೋಶಕ್ಕೀಡುಮಾಡಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಮಲ್ಲೇಶ್ವರದ ಕುಟುಂಬವೊಂದು ತಮಗೆ ಸಮಸ್ಯೆಯಾಗಿದ್ದ ರಸ್ತೆ ಗುಂಡಿಯನ್ನು ಮುಚ್ಚಿ ತಾವೇ ದುರಸ್ತಿಗೊಳಿಸಿದ್ದಾರೆ.
ಮಲ್ಲೇಶ್ವರದ 18 ನೇ ಅಡ್ಡ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಬಳಿ ಇರುವ ಗುಂಡಿಯಿಂದಾಗಿ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ಪ್ರಾಣಾಪಾಯದಿಂದ ಕೂದಲೆಳೆಯ ಅಂಚಿನಲ್ಲಿ ಬಚಾವಾಗಿದ್ದರು. ತಕ್ಷಣವೇ ಎಚ್ಚೆತ್ತ ಅವರ ಕುಟುಂಬ ಸದಸ್ಯರು ಗುಂಡಿಯನ್ನು ಕಲ್ಲು ಮಣ್ಣಿನಿಂದ ಮುಚ್ಚಿ ದುರಸ್ತಿಗೊಳಿಸಿದ್ದಾರೆ. ಮಲ್ಲೇಶ್ವರದಲ್ಲಿನ ರಸ್ತೆ ಗುಂಡಿಗಳ ಅವ್ಯವಸ್ಥೆಯನ್ನು ಸರಿಮಾಡಲು ಇನ್ನಾದರೂ ಸಾರ್ವಜನಿಕರು ಒತ್ತಾಯ ಮಾಡಬೇಕು ಎಂದು ರಸ್ತೆ ದುರಸ್ತಿಗೊಳಿಸಿದ ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನವೆಂಬರ್ 10 ರೊಳಗೆ ಬೆಂಗಳೂರು ನಗರ ಗುಂಡಿ ಮುಕ್ತವಾಗಲಿದೆ: ಬಿಬಿಎಂಪಿ
"ಮಲ್ಲೇಶ್ವರ ಬಸ್ ಸ್ಟ್ಯಾಂಡ್, 18 ನೇ ಕ್ರಾಸ್ ನಲ್ಲಿ ರಸ್ತೆ ಗುಂಡಿಯಿಂದ ನನ್ನ ಪತಿ ಆಕ್ವೀವಾದಲ್ಲಿ ಬರುವಾಗ ಪ್ರಾಣಾಪಾಯದಿಂದ ಕೂದಲೆಳೆಯಲ್ಲಿ ಬಚಾವಾದರು. ಹಾಗಾಗಿ ಆ ಗುಂಡಿಯನ್ನು ಈಗ ಹೋಗಿ ಕಲ್ಲು ಮಣ್ಣಿನಿಂದ ಗುಂಡಿಯನ್ನು ಮುಚ್ಚಿ ಬಂದೆವು. ಮಲ್ಲೇಶ್ವರದ ಅವ್ಯವಸ್ಥೆಯನ್ನು ಇನ್ನಾದರೂ ಸರಿಮಾಡಲು ಸಾರ್ವಜನಿಕರು ಒತ್ತಾಯ ಮಾಡಿ" ಎಂದು ಮಲ್ಲೇಶ್ವರದ ನಿವಾಸಿ ಎಂ.ನಾಗಮಣಿ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದಾರೆ.